Dave Fiji died in helicopter crash
- ಭಾರತೀಯ ಮೂಲದ ಪೈಲಟ್ ಡೇವಿಡ್ ಫಿಜಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ
- ವಿವಾಹವಾದ ಕೆಲವೇ ಗಂಟೆಗಳ ಹಿಂದೆ ಪೈಲಟ್ ಹಸೆಮಣೆ ಏರಿದ್ದರು.
- ಅಪಘಾತಕ್ಕೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಕ್ರಮ
ಅಟ್ಲಾಂಟಾ: ಮದುವೆಯ ಸಂಭ್ರಮದಲ್ಲಿದ್ದ ಮನೆ ಕೆಲವೇ ಗಂಟೆಗಳಲ್ಲಿ ಸೂತಕದ ಛಾಯೆಯಾಗಿ ಮಾರ್ಪಟ್ಟ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ. ಭಾರತೀಯ ಮೂಲದ ಹೆಲಿಕಾಪ್ಟರ್ ಪೈಲಟ್ ಡೇವ್ ಫಿಜಿ ಅವರು ಮದುವೆಯಾದ ಕೆಲವೇ ಗಂಟೆಗಳಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಮದುವೆಯ ಶಾಸ್ತ್ರ ಮುಗಿದ ಕೆಲವೇ ಗಂಟೆಗಳ ಅವಧಿಯಲ್ಲಿ ಡೇವ್ ಫಿಜಿ ಹಾಗೂ ಅವರ ಪತ್ನಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಜಾರ್ಜಿಯಾದಲ್ಲಿ ಅಪಘಾತಕ್ಕೆ ಈಡಾಗಿದೆ. ಘಟನೆಯ ತೀವ್ರತೆಗೆ ಪೈಲಟ್ ಡೇವಿಡ್ ಫಿಜಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಮದುವೆ ಅಂದೇ ದುರಂತ ಅಂತ್ಯ
ಕೇರಳ ಮೂಲದವರಾದ ಇವರು, ಶುಕ್ರವಾರ ಡಾಸನ್ ವಿಲ್ಲೆಯ ದಿ ರೆವರೆ ಕಲ್ಯಾಣ ಮಂಟಪದಲ್ಲಿ, ಪೋಷಕರು, ಸ್ನೇಹತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ವಿವಾಹದ ನಂತರ ದಂಪತಿ ಹೋಟೆಲ್ಗೆ ತೆರಳಲು ಹೆಲಿಕಾಪ್ಟರ್ ಏರಿದ್ದರು. ಆದರೆ, ಮಳೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಡಾಸನ್ ವಿಲ್ಲೆಯ ದಟ್ಟ ಅರಣ್ಯದಲ್ಲಿ ಪತನಗೊಂಡಿದೆ.
ಐದು ಗಂಟೆ ಹುಡುಕಾಟದ ನಂತರ ಪತ್ನಿ ಪತ್ತೆ
ಹೆಲಿಕಾಪ್ಟರ್ ಪತನಗೊಂಡಿದ್ದು, ದಟ್ಟಾರಣ್ಯದಲ್ಲಾದರ ಕಾರಣ ಕಾರ್ಯಾಚರಣೆ ನಡೆಸಲು ರಕ್ಷಣಾ ಅಧಿಕಾರಿಗಳು ಹರಸಾಹಸ ಪಟ್ಟರು. ಐದು ಗಂಟೆಗಳ ಕಾಲ ನಡೆಸಿದ ಹುಡುಕಾಟದ ನಂತರ ಬಿದ್ದ ಮರಗಳ ಅಡಿ ಸಿಲುಕಿದ್ದ ನವವಧು ಜೆಸ್ನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಡೇವ್ ಅವರ ಪತ್ನಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ದೇಹದ ತುಂಬೆಲಲ್ಲ ತೀವ್ರ ಗಾಯವಾಗಿದೆ,. ಆದರೆ, ಮೂಳೆ ಮುರಿತದಂತಹ ಸಮಸ್ಯೆಯಾಗಿಲ್ಲ.
ಡೇವ್ ತಂದೆ ಹೇಳಿದ್ದು ಹೀಗೆ
ನಾನು ನನ್ನ ಮಗನನ್ನು ನೋಡುತ್ತಿದ್ದೆ ಆತ ತುಂಬಾ ಸುಂದರವಾಗಿ ಕಾಣುತ್ತಿದ್ದ. ಸಂತೋಷದಲ್ಲಿದ್ದ. ಅವರಿಬ್ಬರು ಮೊದಲು ಸ್ನೇಹಿತರಾಗಿದ್ದರು. ನಂತರ, ಮದುವೆಯಾಗಲು ನಿರ್ಧರಿಸಿದರು. ಎಲ್ಲ ಸುಗಮವಾಗಿ ನಡೆಯುತ್ತಿದೆ ಎನ್ನುವ ಹೊತ್ತಲ್ಲೇ ಇಂತಹ ಘಟನೆ ನಡೆದಿದೆ ಎಂದು ಡೇವ್ ತಂದೆ ಜಾರ್ಜ್ ಫಿಜಿ ಹೇಳಿದರು.
ತನಿಖೆ ಶುರು
ನಾಲ್ಕು ದಶಕದಿಂದ ಸುರಕ್ಷತಾ ದಾಖಲೆ ಹೊಂದಿದ್ದ ಪ್ರೆಸ್ಟೀಜ್ ಹೆಲಿಕಾಪ್ಟರ್ಸ್ ಸಂಸ್ಥೆಗೆ ಸೇರಿದ ರಾಬಿನ್ನ್ R66 ಹೆಲಿಕಾಪ್ಟರ್ ಇದಾಗಿದೆ. ಹೆಲಿಕಾಪ್ಟರ್ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಪ್ರತಿಕೂಲ ಹವಾಮಾನವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಘಟನೆಯ ಕುರಿತು ಅಲ್ಲಿನ ವಾಯುಯಾನ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದು, ಅಪಘಾತದ ಹಿಂದಿನ ನಿಖರ ಕಾರಣವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ, (ಏಜೆನ್ಸೀಸ್).