Bomb Attack 
ವಿದೇಶ

ಇರಾನ್ ಮೇಲೆ ಟ್ರಂಪ್ ಪ್ರತಾಪ: 900 ಕೆಜಿಯ ಬಂಕರ್ ಬಸ್ಟರ್ ಬಾಂಬ್ ದಾಳಿಯ ಭೀಕರ ವಿಡಿಯೋ ವೈರಲ್! | Bomb Attack

ಟೆಹ್ರಾನ್: ಇರಾನ್‌ನ ಪ್ರಮುಖ ನಗರವಾದ ಇಸ್ಫಹಾನ್ ಮೇಲೆ ಅಮೆರಿಕದ ವಾಯುಪಡೆ ಭೀಕರ ದಾಳಿ ನಡೆಸಿದ್ದು, 900 ಕೆಜಿ ತೂಕದ 'ಬಂಕರ್ ಬಸ್ಟರ್' ಬಾಂಬ್‌ಗಳನ್ನು ಬಳಸಿ ಅಲ್ಲಿನ ಶಸ್ತ್ರಾಸ್ತ್ರ ಮಳಿಗೆಗಳನ್ನು(Bomb Attack) ಧೂಳೀಪಟ ಮಾಡಲಾಗಿದೆ. ಈ ಭೀಕರ ಸ್ಫೋಟದ ವಿಡಿಯೋವನ್ನು ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್ ಹಂಚಿಕೊಂಡಿದ್ದು, ಸಂಚಲನ ಮೂಡಿಸಿದ್ದಾರೆ.
ಹೌದು, ಮಂಗಳವಾರ ಮುಂಜಾನೆ ಇಸ್ಫಹಾನ್ ನಗರದ ಬದರ್ ಮಿಲಿಟರಿ ವಾಯುನೆಲೆಯ ಸಮೀಪವಿರುವ ಶಸ್ತ್ರಾಸ್ತ್ರ ಡಿಪೋವನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ ಎಂದು ವರದಿಯಾಗಿದೆ. ಟ್ರಂಪ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಸರಣಿ ಸ್ಫೋಟಗಳ ನಂತರ ಇಡೀ ಆಕಾಶವೇ ಕೇಸರಿ ಮತ್ತು ಕೆಂಪು ಬಣ್ಣದ ಜ್ವಾಲೆಗಳಿಂದ ಆವೃತವಾಗಿರುವುದು ಕಂಡುಬಂದಿದೆ. 23 ಲಕ್ಷ ಜನಸಂಖ್ಯೆ ಇರುವ ಈ ನಗರದ ನಿವಾಸಿಗಳು ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದಿದ್ದಾರೆ.

ಏನಿದು 'ಬಂಕರ್ ಬಸ್ಟರ್' ಬಾಂಬ್? ಇದರ ವಿಶೇಷತೆ ಏನು?

ಈ ದಾಳಿಯಲ್ಲಿ ಅಮೆರಿಕ 2,000 ಪೌಂಡ್ (ಸುಮಾರು 907 ಕೆಜಿ) ತೂಕದ ಅತ್ಯಾಧುನಿಕ ಬಂಕರ್ ಬಸ್ಟರ್ (Bunker Busters) ಬಾಂಬ್‌ಗಳನ್ನು ಬಳಸಿದೆ. 'ದ ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, ಇವು ಸಾಮಾನ್ಯ ಬಾಂಬ್‌ಗಳಿಗಿಂತ ಭಿನ್ನವಾಗಿವೆ. ಇವು ಗಟ್ಟಿಯಾದ ಉಕ್ಕಿನ ಕವಚವನ್ನು ಹೊಂದಿದ್ದು, ಕಾಂಕ್ರೀಟ್ ಗೋಡೆ ಅಥವಾ ಭೂಮಿಯ ಆಳದ ಪದರಗಳನ್ನು ಕೊರೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿವೆ. ಕೆಲವು ಬಾಂಬ್‌ಗಳು 'ಹಾರ್ಡ್ ಟಾರ್ಗೆಟ್ ಸ್ಮಾರ್ಟ್ ಫ್ಯೂಸ್' (HTSF) ಹೊಂದಿದ್ದು, ಕಟ್ಟಡದ ಎಷ್ಟು ಮಹಡಿಗಳನ್ನು ದಾಟಿದೆ ಎಂಬುದನ್ನು ಲೆಕ್ಕ ಹಾಕಿ, ನಿಖರವಾದ ಜಾಗದಲ್ಲಿ ಸ್ಫೋಟಗೊಳ್ಳುತ್ತವೆ. ಇನ್ನು ಕೆಲವು ಬಾಂಬ್‌ಗಳು ಮನುಷ್ಯರ ಧ್ವನಿ ಕೇಳಿಸಿದಾಗ ಮಾತ್ರ ಸ್ಫೋಟಗೊಳ್ಳುವಂತಹ ಮೈಕ್ರೋಫೋನ್ ತಂತ್ರಜ್ಞಾನವನ್ನೂ ಒಳಗೊಂಡಿವೆ ಎನ್ನಲಾಗಿದೆ.

ಇಸ್ಫಹಾನ್ ಮೇಲೆ ದಾಳಿ ಏಕೆ?

ಇರಾನ್ ತನ್ನ ಯುರೇನಿಯಂ ದಾಸ್ತಾನನ್ನು (ಸುಮಾರು 540 ಕೆಜಿ) ಇಸ್ಫಹಾನ್‌ನ ಭೂಗತ ಕೇಂದ್ರಕ್ಕೆ ಸ್ಥಳಾಂತರಿಸಿದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಕಳೆದ ವರ್ಷವಷ್ಟೇ ಅಮೆರಿಕ 'ಆಪರೇಷನ್ ಮಿಡ್‌ನೈಟ್ ಹ್ಯಾಮರ್' ಮೂಲಕ ಇಲ್ಲಿನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿತ್ತು. ಈಗ ಮತ್ತೊಮ್ಮೆ ಇರಾನ್‌ನ ಇಂಧನ ಮತ್ತು ಪರಮಾಣು ಶಕ್ತಿಯನ್ನು ಕುಗ್ಗಿಸಲು ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಟ್ರಂಪ್ ಖಡಕ್ ಎಚ್ಚರಿಕೆ!
ದಾಳಿಗೂ ಒಂದು ದಿನ ಮುನ್ನ ಮಾತನಾಡಿದ್ದ ಟ್ರಂಪ್, "ಇರಾನ್‌ನ ಹೊಸ ಸರ್ಕಾರವು ಮಾತುಕತೆಗೆ ಬರದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ, ಆ ದೇಶದ ಇಂಧನ ಮೂಲಗಳು, ಪರಮಾಣು ಕೇಂದ್ರಗಳು ಮತ್ತು ನೀರಿನ ಪ್ಲಾಂಟ್‌ಗಳನ್ನು ಸರ್ವನಾಶ ಮಾಡಲಾಗುವುದು" ಎಂದು ಎಚ್ಚರಿಸಿದ್ದರು. ಇರಾನ್ ಪರಮಾಣು ಬಾಂಬ್​​ ತಯಾರಿಕೆಗೆ ಹತ್ತಿರದಲ್ಲಿದೆ ಎಂಬುದು ಅಮೆರಿಕ ಮತ್ತು ಇಸ್ರೇಲ್‌ನ ಗಂಭೀರ ಆರೋಪವಾಗಿದೆ.

ಜಾಗತಿಕ ಮಟ್ಟದಲ್ಲಿ ಆತಂಕ

ಯುದ್ಧ ಆರಂಭವಾಗಿ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಈ ನಡುವೆ ಪಾಕಿಸ್ತಾನ, ಈಜಿಪ್ಟ್, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ರಾಜತಾಂತ್ರಿಕ ಸಂಧಾನದ ಮೂಲಕ ಯುದ್ಧ ನಿಲ್ಲಿಸಲು ಪ್ರಯತ್ನ ನಡೆಸುತ್ತಿವೆ. ಆದರೆ, ಅಮೆರಿಕದ ಈ ಬೃಹತ್ ದಾಳಿಯು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ,(ಏಜೆನ್ಸೀಸ್​).