ಫಿಲಿಪೈನ್ಸ್ ವಾಯುಪಡೆಯ SF-260 ಮಿಲಿಟರಿ ತರಬೇತಿ ವಿಮಾನ ಅಪಘಾತ 
ವಿದೇಶ

ಫಿಲಿಪೈನ್ಸ್‌ನಲ್ಲಿ ಭೀಕರ ದುರಂತ: ಬೆಂಕಿಯುಂಡೆಯಾಗಿ ಬಿದ್ದ ಸೇನಾ ವಿಮಾನ; ನಾಲ್ವರು ಪೈಲಟ್‌ಗಳ ದುರ್ಮರಣ! Philippines Plane Crash

ಫಿಲಿಪೈನ್ಸ್‌ನ ಫರ್ನಾಂಡೋ ವಾಯುನೆಲೆಯಲ್ಲಿ ತರಬೇತಿ ವೇಳೆ 2 ಮಿಲಿಟರಿ ವಿಮಾನಗಳು ಆಕಾಶದಲ್ಲೇ ಮುಖಾಮುಖಿ ಡಿಕ್ಕಿಯಾಗಿ ಬೆಂಕಿಯುಂಡೆಯಾಗಿ ನೆಲಕ್ಕುರುಳಿವೆ. ಘಟನೆಯಲ್ಲಿ ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದಾರೆ.

ನವದೆಹಲಿ: ಆಕಾಶದಲ್ಲಿ ಎಂದಿನಂತೆ ಹಾರಾಡುತ್ತಾ ತರಬೇತಿ ಪಡೆಯುತ್ತಿದ್ದ ಎರಡು ಮಿಲಿಟರಿ ವಿಮಾನಗಳು ಆಕಾಶದಲ್ಲೇ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ, ಬೆಂಕಿಯ ಉಂಡೆಯಾಗಿ ನೆಲಕ್ಕುರುಳಿದ ಘಟನೆ ಫಿಲಿಪೈನ್ಸ್‌ನ ಫರ್ನಾಂಡೋ ಏರ್‌ಬೇಸ್‌ನಲ್ಲಿ ಈ ಘಟನೆ ನಡೆದಿದೆ.ಈ ಭೀಕರ ದುರಂತದಲ್ಲಿ ನಾಲ್ವರು ತರಬೇತಿ ಪೈಲಟ್‌ಗಳು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆಂದು ವರದಿಯಾಗಿದೆ.

ವೈರಲ್ ವಿಡಿಯೋ ನೋಡಿ ಬೆಚ್ಚಿಬಿದ್ದ ಜನತೆ!

ಶುಕ್ರವಾರ (ಅ.23) ಫರ್ನಾಂಡೋ ವಾಯುನೆಲೆಯ ಮೇಲೆ ಎಂದಿನಂತೆ ತರಬೇತಿ ಹಾರಾಟ ಆರಂಭವಾಗಿತ್ತು. ಆದರೆ ನೋಡನೋಡುತ್ತಿದ್ದಂತೆ ಆಕಾಶದಲ್ಲಿ ಎರಡು ವಿಮಾನಗಳು ನಿಯಂತ್ರಣ ತಪ್ಪಿ ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ವಿಮಾನಗಳು ಸುಟ್ಟು ಕರಕಲಾಗಿ ವಾಯುನೆಲೆ ಆವರಣದಲ್ಲಿ ಅಪ್ಪಳಿಸಿವೆ.

ಆಕಾಶದಿಂದ ವಿಮಾನಗಳು ಉರಿದು ಕೆಳಗೆ ಬೀಳುತ್ತಿರುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಈ ಶಾಕಿಂಗ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆಳಗೆ ಬೀಳುವ ರಭಸ ಹಾಗೂ ಹೊಗೆಯ ಕಾರ್ಮೋಡ ಕಂಡು ಸುತ್ತಮುತ್ತಲಿನ ಜನರು ಕ್ಷಣಕಾಲ ಆತಂಕದಿಂದ ನಡುಗಿಹೋಗಿದ್ದಾರೆ.

ವಾಯುಪಡೆ ಸ್ಪಷ್ಟನೆ

ಈ ಘಟನೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿರುವ ಫಿಲಿಪೈನ್ಸ್ ಏರ್‌ಫೋರ್ಸ್ (PAF), ಅಪಘಾತಕ್ಕೀಡಾದ ಎರಡೂ ವಿಮಾನಗಳು ‘SF-260’ ಮಾದರಿಯ ತರಬೇತಿ ವಿಮಾನಗಳು ಎಂದು ಖಚಿತಪಡಿಸಿದೆ. ವಿಮಾನಗಳು ವಾಯುನೆಲೆಯ ಕಾಂಪೌಂಡ್ ಒಳಗೇ ಬಿದ್ದಿದ್ದರಿಂದ ಸಾರ್ವಜನಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವಾಯುಪಡೆ, ಸುರಕ್ಷತಾ ದೃಷ್ಟಿಯಿಂದ ದೇಶಾದ್ಯಂತ ಇರುವ ಎಲ್ಲಾ 'SF-260' ವಿಮಾನಗಳ ಹಾರಾಟವನ್ನು ತಕ್ಷಣದಿಂದಲೇ ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ? ಅಥವಾ ಪೈಲಟ್‌ಗಳಲ್ಲಿ ಸಮನ್ವಯದ ಕೊರತೆ ಉಂಟಾಯಿತೇ? ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ ಎಂದು ವಾಯುಪಡೆ ವಕ್ತಾರರು ತಿಳಿಸಿದ್ದಾರೆ.

ಬೆಂಬಿಡದ ಸರಣಿ ಅಪಘಾತಗಳ ಆತಂಕ!

ಫಿಲಿಪೈನ್ಸ್ ಮಿಲಿಟರಿಯಲ್ಲಿ ಇತ್ತೀಚಿನ ದಿನಗಳಲ್ಲಿ ವಿಮಾನ ಅಪಘಾತಗಳು ನಿರಂತರವಾಗಿ ಮರುಕಳಿಸುತ್ತಿರುವುದು ಆತಂಕ ಮೂಡಿಸಿದೆ. ಕಳೆದ ಮೇ ತಿಂಗಳಷ್ಟೇ ಇದೇ ಮಾದರಿಯ SF-260 ವಿಮಾನ ಪತನಗೊಂಡು ಬೆಂಗ್ಯುಯೆಟ್ ಪ್ರಾಂತ್ಯದಲ್ಲಿ ಇಬ್ಬರು ಮಿಲಿಟರಿ ಪೈಲಟ್‌ಗಳಾದ ಲೆಫ್ಟಿನೆಂಟ್ ರೂತ್ ಏಂಜೆಲಿಕ್ ಮತ್ತು ಸೆಕೆಂಡ್ ಲೆಫ್ಟಿನೆಂಟ್ ಚೆರ್ಕಿ ಎಂಬುಡೋ ದುರಂತ ಅಂತ್ಯ ಕಂಡಿದ್ದರು.

ಆ ದುರಂತದ ಬೆನ್ನಲ್ಲೇ 16 ವಿಮಾನಗಳ ಹಾರಾಟವನ್ನು ರದ್ದುಪಡಿಸಿ ತನಿಖೆ ನಡೆಸಲಾಗಿತ್ತಾದರೂ, ಅಪಘಾತಕ್ಕೆ ನಿಖರ ಕಾರಣ ಪತ್ತೆಯಾಗಿರಲಿಲ್ಲ. ಇದೀಗ ಮತ್ತೆ ಅದೇ ವಾಯುನೆಲೆಯಲ್ಲಿ, ಅದೇ ಮಾದರಿಯ ಎರಡು ವಿಮಾನಗಳು ಆಕಾಶದಲ್ಲಿ ಡಿಕ್ಕಿಯಾಗಿ ನಾಲ್ವರು ಯುವ ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ಫಿಲಿಪೈನ್ಸ್ ವಾಯುಪಡೆಯ ವಿಮಾನಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, (ಏಜೆನ್ಸೀಸ್​).