ಘಟನೆಯ ಸ್ಥಳ 
ವಿದೇಶ

ಬ್ಯಾಂಕಾಕ್​ನ ಪಬ್​ವೊಂದರಲ್ಲಿ ಭೀಕರ ಅಗ್ನಿ ದುರಂತ: 27 ಜನ ಸಜೀವದಹನ, 63ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ | fire tragedy

ಬ್ಯಾಂಕಾಕ್​: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿರುವ ಪಬ್‌ವೊಂದರಲ್ಲಿ ಸೋಮವಾರ(ಜು. 13) ಮುಂಜಾನೆ ಅಗ್ನಿ ದುರಂತ(fire tragedy) ಸಂಭವಿಸಿದ್ದು, ಘಟನೆಯಲ್ಲಿ 27 ಜನ ಸಜೀವ ದಹನವಾಗಿದ್ದು, 63ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 
ಉತ್ತರ ಬ್ಯಾಂಕಾಕ್‌ನಲ್ಲಿರುವ ನಾ ಲಾಡ್‌ಪ್ರಾ ಪಬ್‌ನಲ್ಲಿ ಮಧ್ಯರಾತ್ರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದವರು ಸುಮಾರು 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಥಾಯ್ಲೆಂಡ್ ಪ್ರಧಾನಿ ಅನುತಿನ್ ಚರ್ನ್ವಿರಕುಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಇಪ್ಪತ್ತೇಳು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ತಿಳಿದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪಬ್‌ನಲ್ಲಿ ಪ್ರದರ್ಶನ ನೀಡುತ್ತಿದ್ದ ಸಂಗೀತಗಾರನೊಬ್ಬ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸ್ವಲ್ಪ ಸಮಯದ ಮೊದಲು ವೇದಿಕೆಯ ಬಳಿಯಿದ್ದ ಸರ್ಕ್ಯೂಟ್ ಬ್ರೇಕರ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿರುವುದಾಗಿ ಹೇಳಿದ್ದ ಎನ್ನಲಾಗಿದೆ. ಕೆಲವು ಕ್ಷಣಗಳ ಬಳಿಕ ಸ್ಫೋಟವಾಗಿ ದಟ್ಟ ಹೊಗೆ ಬಂದಿದೆ. ಇನ್ನೂ ಅನೇಕರು ಪಬ್‌ನ ಹಿಂಭಾಗದಲ್ಲಿರುವ ಶೌಚಾಲಯಗಳಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ವಿಡಿಯೋಗಳಲ್ಲಿ ಪಬ್‌ನ ಪ್ರವೇಶದ್ವಾರದಿಂದ ಜ್ವಾಲೆಗಳು ಹಿಂಸಾತ್ಮಕವಾಗಿ ಹರಡುತ್ತಿರುವುದನ್ನು ಮತ್ತು ಜನರು ಭಯಬೀತರಾಗಿ ಓಡಿ ಹೋಗುತ್ತಿರುವುದು ಕಂಡು ಬಂದಿವೆ. ಬೆಂಕಿ ಅವಘಡದ ಸಮಯದಲ್ಲಿ ಕೆಲವು ಬಲಿಪಶುಗಳು ಸ್ಥಳದ ಶೌಚಾಲಯದೊಳಗೆ ಆಶ್ರಯ ಪಡೆದಿದ್ದಾರೆ. ಅಲ್ಲಿಯೇ ಹಲವರ ಶವಗಳು ಪತ್ತೆಯಾಗಿವೆ ಎನ್ನಲಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ (ಏಜೆನ್ಸೀಸ್).