ಹಾರ್ಮುಜ್‌ನಲ್ಲಿ ಯುದ್ಧ ಕಾರ್ಮೋಡ (Hormuz Strait Attack) 
ವಿದೇಶ

ಹಾರ್ಮುಜ್‌ನಲ್ಲಿ ಯುದ್ಧ ಕಾರ್ಮೋಡ: ಭಾರತದತ್ತ ಸಾಗುತ್ತಿದ್ದ ಥಾಯ್ ಹಡಗಿನ ಮೇಲೆ ಇರಾನಿನಿಂದ ದಾಳಿ; ಮುಂದುವರೆದ ರಕ್ಷಣಾ ಕಾರ್ಯಚರಣೆ | Hormuz Strait Attack

ಒಮಾನ್: ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿ(Hormuz Strait Attack)ಯಲ್ಲಿ ಇದೀಗ ಯುದ್ಧದ ಕಾರ್ಮೋಡಗಳು ಕವಿದಿವೆ. ಭಾರತಕ್ಕೆ ತೈಲ ಹೊತ್ತು ಬರುತ್ತಿದ್ದ ಥಾಯ್ಲೆಂಡ್‌ಗೆ ಸೇರಿದ ಮಯೂರಿ ನರೀ ಸರಕು ಹಡಗಿನ ಮೇಲೆ ಇರಾನಿನಿಂದ ದಾಳಿ ನಡೆದಿದ್ದು, ಸಮುದ್ರಯಾನದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ನಡುಕ ಹುಟ್ಟಿಸಿದ ದಾಳಿ

ಒಮಾನ್ ಕರಾವಳಿಯಿಂದ ಕೇವಲ 18 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಹಡಗು ಸಂಚರಿಸುತ್ತಿದ್ದಾಗ ದಿಢೀರನೇ ಸ್ಪೋಟಕಗಳು ಅಪ್ಪಳಿಸಿದ ಪರಿಣಾಮ ಹಡಗಿಗೆ ತೀವ್ರ ಹಾನಿಯಾಗಿದೆ. ಇದು ಬರೀ ಮಯೂರಿ ನರೀ ಹಡಗಿನ ಕಥೆಯಲ್ಲ; ಅದೇ ದಿನ ಇದೇ ಜಲಸಂಧಿಯಲ್ಲಿ ಕನಿಷ್ಠ ಎರಡು ಹಡಗುಗಳ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಗಳು ಜಾಗತಿಕ ಹಡಗು ಸಾಗಣೆ ಮಾರ್ಗದಲ್ಲಿ ಭದ್ರತೆಯೇ ಇಲ್ಲ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸಿಬ್ಬಂದಿಗಳ ರಕ್ಷಣೆಗೆ ಮುಂದಾದ ಥಾಯ್​ ನೌಕಾಪಡೆ
ದಾಳಿ ನಡೆದ ತಕ್ಷಣವೇ ಎಚ್ಚೆತ್ತ ರಾಯಲ್ ಥಾಯ್ ನೌಕಾಪಡೆಯು ತುರ್ತು ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ. ಆರಂಭಿಕ ವರದಿಗಳ ಪ್ರಕಾರ, ಹಡಗಿನಲ್ಲಿದ್ದ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ, ಇನ್ನೂ ಮೂವರು ಸಿಬ್ಬಂದಿ ಹಡಗಿನಲ್ಲೇ ಉಳಿದುಕೊಂಡಿದ್ದಾರೆ ಎಂದು ನಂಬಲಾಗಿದ್ದು, ಅವರನ್ನು ರಕ್ಷಿಸಲು ಅಂತರರಾಷ್ಟ್ರೀಯ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ.

ಇಂಧನ ಮಾರುಕಟ್ಟೆಯಲ್ಲಿ ಬಿಕ್ಕಟ್ಟು!

ಹಾರ್ಮುಜ್ ಜಲಸಂಧಿಯು ವಿಶ್ವದ ಅತಿದೊಡ್ಡ ತೈಲ ಮತ್ತು ಸರಕು ಸಾಗಣೆಯ ಮಾರ್ಗ. ಈಗ ಇಲ್ಲಿ ಉಂಟಾಗಿರುವ ಉದ್ವಿಗ್ನತೆಯು ಇಡೀ ಜಗತ್ತನ್ನೇ ನಡುಗಿಸುತ್ತಿದೆ. ಇರಾನ್ ನೌಕಾಪಡೆಯು ಇಲ್ಲಿನ ತೈಲ ಟ್ಯಾಂಕರ್‌ಗಳ ಚಲನೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಇಂಧನ ಬಿಕ್ಕಟ್ಟಿಗೆ ದಾರಿ ಮಾಡಿಕೊಡಬಹುದು ಎಂಬ ಆತಂಕ ಮೂಡಿದೆ.
ವಿಶ್ವಸಂಸ್ಥೆ ಕೂಡ ಈ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಡಚಣೆ ಉಂಟಾದರೂ ಅದು ಜಾಗತಿಕ ವ್ಯಾಪಾರ ಮತ್ತು ಆರ್ಥಿಕತೆಯನ್ನು ಅಧೋಗತಿಗೆ ಕೊಂಡೊಯ್ಯುತ್ತದೆ. ಕೇವಲ ತೈಲ ಬೆಲೆ ಮಾತ್ರವಲ್ಲ, ಆಹಾರದ ಬೆಲೆಯೂ ಗಗನಕ್ಕೇರಲಿದೆ, ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ (UNCTAD) ಎಚ್ಚರಿಸಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ನಡೆಸುತ್ತಿರುವ ಪ್ರತೀಕಾರದ ದಾಳಿಗಳು ಈಗ ಸಾಮಾನ್ಯ ಜನರ ದಿನನಿತ್ಯದ ವೆಚ್ಚದ ಮೇಲೂ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ.
ಭಾರತಕ್ಕೆ ತೆರಳುತ್ತಿದ್ದ ಈ ಹಡಗಿನ ಮೇಲೆ ನಡೆದಿರುವ ದಾಳಿಯು ನಮ್ಮ ದೇಶದ ಇಂಧನ ಪೂರೈಕೆಯ ಮೇಲೂ ನೇರ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಅಂತರರಾಷ್ಟ್ರೀಯ ಅಧಿಕಾರಿಗಳು ಈ ಪ್ರದೇಶದ ಪರಿಸ್ಥಿತಿಯನ್ನು ಹಗಲಿರುಳು ಮೇಲ್ವಿಚಾರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇಂಧನ ಬೆಲೆಯಲ್ಲಿ ಏರಿಳಿತವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ,(ಏಜನ್ಸೀಸ್​).