ಹೊರ್ಮುಜ್ ನಮ್ಮ ಹಿಡಿತದಲ್ಲಿರಲಿ, ಇಲ್ಲದಿದ್ದರೆ ಮಾತುಕತೆಯೇ ಇಲ್ಲ! ಅಮೆರಿಕಕ್ಕೆ ಇರಾನ್ ಸೇನಾ ಮುಖ್ಯಸ್ಥ ಹಾಕಿದ ಆ 'ಡೇಂಜರಸ್' ಷರತ್ತು ಏನು?
ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಪಾಕಿಸ್ತಾನ ಆಯೋಜಿಸಿರುವ ಶಾಂತಿ ಮಾತುಕತೆಯು ಈಗ ಹೊಸ ತಿರುವು ಪಡೆದುಕೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೂತನ ಕಮಾಂಡರ್-ಇನ್-ಚೀಫ್ ಬ್ರಿಗೇಡಿಯರ್ ಜನರಲ್ ಅಹ್ಮದ್ ವಹಿದಿ(Ahmad Vahidi) ಅವರ ಪ್ರವೇಶದೊಂದಿಗೆ, ಇರಾನ್ ತನ್ನ ಬೇಡಿಕೆಗಳ ಪಟ್ಟಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ನಾಗರಿಕ ರಾಜತಾಂತ್ರಿಕರನ್ನು ಬದಿಗೊತ್ತಿರುವ ಮಿಲಿಟರಿ ಕೌನ್ಸಿಲ್, ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಲ್ಲ ಆಘಾತಕಾರಿ ಶರತ್ತುಗಳನ್ನು ವಿಧಿಸಿದೆ.
ಹೊರ್ಮುಜ್ ಜಲಸಂಧಿಯ ಮೇಲೆ ಐದು ವರ್ಷಗಳ ಮ್ಯಾಂಡೇಟ್!
ವಿಶ್ವದ ಅತಿ ದೊಡ್ಡ ತೈಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಮೇಲೆ ಐದು ವರ್ಷಗಳ ಕಾಲ ಸಂಪೂರ್ಣ ಭದ್ರತಾ ನಿಯಂತ್ರಣ ನೀಡಬೇಕು ಎಂಬುದು ಇರಾನ್‌ನ ಅತ್ಯಂತ ಅಪಾಯಕಾರಿ ಬೇಡಿಕೆಯಾಗಿದೆ. ಈ ಪ್ರಸ್ತಾವನೆಯಡಿಯಲ್ಲಿ IRGC ಈ ಕೆಳಗಿನ ಅಧಿಕಾರಗಳನ್ನು ಕೇಳಿದೆ.
ನೌಕೆಗಳ ತಪಾಸಣೆ: ಜಲಸಂಧಿಯ ಮೂಲಕ ಹಾದುಹೋಗುವ ಯಾವುದೇ ಹಡಗನ್ನು ತಡೆದು ಹತ್ತುವ ಮತ್ತು ತಪಾಸಣೆ ನಡೆಸುವ ಹಕ್ಕು.
ಸರಕು ಪರಿಶೀಲನೆ: ಅಂತಾರಾಷ್ಟ್ರೀಯ ಹಡಗುಗಳಲ್ಲಿರುವ ಸರಕುಗಳನ್ನು ಬೇಕಾಬಿಟ್ಟಿ ತಪಾಸಣೆ ಮಾಡುವ ಅಧಿಕಾರ.
ಸಾರಿಗೆ ಶುಲ್ಕ: ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸುವ ಹಡಗುಗಳಿಂದ ಸಂಚಾರ ಹಕ್ಕು ಎಂಬ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುವುದು.
ಒಂದು ವೇಳೆ ಕದನ ವಿರಾಮ ಏರ್ಪಟ್ಟರೂ, ಮುಂದಿನ ಐದು ವರ್ಷಗಳವರೆಗೆ ಜಾಗತಿಕ ಇಂಧನ ಪೂರೈಕೆಯ ಮೇಲೆ ತನ್ನ ಬಿಗಿಹಿಡಿತ ಸಾಧಿಸುವುದು ಇರಾನ್‌ನ ಗುರಿಯಾಗಿದೆ.
ಲೆಬನಾನ್ ವಿಷಯದಲ್ಲಿ ರಾಜಿ ಇಲ್ಲ: ಹಿಜ್ಬುಲ್ಲಾ ನಿಶ್ಶಸ್ತ್ರೀಕರಣಕ್ಕೆ ನಕಾರ
ಇರಾನ್ ನಿಯೋಗವು ಲೆಬನಾನ್ ಸಮಸ್ಯೆಯನ್ನು ಪ್ರತ್ಯೇಕವಾಗಿ ನೋಡಲು ನಿರಾಕರಿಸಿದೆ. ಅಹ್ಮದ್ ವಹಿದಿ ಅವರ ಪ್ರಕಾರ, ಲೆಬನಾನ್ ವಿಷಯವು ಪ್ರಾದೇಶಿಕ ಒಪ್ಪಂದದ ಅವಿಭಾಜ್ಯ ಅಂಗವಾಗಿರಬೇಕು.
ಇಸ್ರೇಲ್-ಲೆಬನಾನ್ ಮಾತುಕತೆಗೆ ಬ್ರೇಕ್: ಇಸ್ರೇಲ್ ಮತ್ತು ಲೆಬನಾನ್ ನಡುವೆ ನಡೆಯುತ್ತಿರುವ ನೇರ ಮಾತುಕತೆಗಳನ್ನು ನಿಲ್ಲಿಸಬೇಕು ಮತ್ತು ಇರಾನ್ ಹಿತಾಸಕ್ತಿಯನ್ನು ಹೊರತುಪಡಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಟೆಹ್ರಾನ್ ಪಟ್ಟು ಹಿಡಿದಿದೆ.
ಹಿಜ್ಬುಲ್ಲಾ ರಕ್ಷಣೆ: ಹಿಜ್ಬುಲ್ಲಾ ಸಂಘಟನೆಯನ್ನು ಯಾವುದೇ ಕಾರಣಕ್ಕೂ ನಿಶ್ಶಸ್ತ್ರೀಕರಣಗೊಳಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ವಿಷಯವನ್ನು ಕೇವಲ ಲೆಬನಾನ್ ರಾಷ್ಟ್ರೀಯ ಸಂವಾದ ದ ಮೂಲಕ ನಿರ್ಧರಿಸಬೇಕು ಎಂದು ಇರಾನ್ ಹೇಳುತ್ತಿದ್ದು, ಇದು ಹಿಜ್ಬುಲ್ಲಾ ತನ್ನ ಸೇನಾ ಬಲವನ್ನು ಉಳಿಸಿಕೊಳ್ಳಲು ಇರಾನ್ ಹೆಣೆದಿರುವ ತಂತ್ರವಾಗಿದೆ.
ಅಮೆರಿಕಕ್ಕೆ ಸವಾಲು: "ಮೊದಲು ದಿಗ್ಬಂಧನ ತೆರವುಗೊಳಿಸಿ"
ಇಸ್ಲಾಮಾಬಾದ್ ಮಾತುಕತೆ ಮುಂದುವರಿಯಬೇಕಾದರೆ ಅಮೆರಿಕವು ಇರಾನಿನ ಬಂದರುಗಳ ಮೇಲೆ ವಿಧಿಸಿರುವ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅಹ್ಮದ್ ವಹಿದಿ ಆಗ್ರಹಿಸಿದ್ದಾರೆ. ಪ್ರಸ್ತುತ ಅಮೆರಿಕದ ನೌಕಾಪಡೆಯು ಇರಾನ್ ಮೇಲೆ ದ್ವಿಮುಖ ದಿಗ್ಬಂಧನ ಹೇರಿದ್ದು, ಇದನ್ನು ಅಮೆರಿಕ ತನ್ನ ಪ್ರಬಲ ಅಸ್ತ್ರವನ್ನಾಗಿ ಬಳಸುತ್ತಿದೆ. ಆದರೆ ಇರಾನ್ ಈಗ ಹೊರ್ಮುಜ್ ಜಲಸಂಧಿಯ ನಿಯಂತ್ರಣವನ್ನು ಬಳಸಿ ಅಮೆರಿಕ ಮೇಲೆ ಒತ್ತಡ ಹೇರುತ್ತಿದೆ.
ಟ್ರಂಪ್ ಅಂಗಳದಲ್ಲಿ ಚೆಂಡು!
ಇರಾನ್‌ನ ಈ ಆಕ್ರಮಣಕಾರಿ ಬೇಡಿಕೆಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಇಂಧನ ಬಿಕ್ಕಟ್ಟು ಮತ್ತು ಜಾಗತಿಕ ತೈಲ ಬೆಲೆ ಏರಿಕೆಯ ಭೀತಿಯನ್ನು ಬಳಸಿಕೊಂಡು ಇರಾನ್ ಈಗ ಅಮೆರಿಕವನ್ನು ಶರಣಾಗಿಸಲು ಯತ್ನಿಸುತ್ತಿದೆ. ಮಿಲಿಟರಿ ಜನರಲ್‌ಗಳು ಮಾತುಕತೆಯ ಜವಾಬ್ದಾರಿ ವಹಿಸಿಕೊಂಡಿರುವುದು ಈ ಶಾಂತಿ ಪ್ರಕ್ರಿಯೆಯು ಮತ್ತಷ್ಟು ಕಠಿಣವಾಗುವ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).