ಹೊತ್ತಿ ಉರಿದ ಹೊರ್ಮುಜ್: ಇರಾನ್‌ನ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ ಸೇನೆ; ಕ್ಷಿಪಣಿ ದಾಳಿ-ಪ್ರತಿದಾಳಿಯಿಂದ ಗಲ್ಫ್ ಉದ್ವಿಗ್ನ! 
ವಿದೇಶ

ಹೊತ್ತಿ ಉರಿದ ಹೊರ್ಮುಜ್: ಇರಾನ್‌ನ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ ಸೇನೆ; ಕ್ಷಿಪಣಿ ದಾಳಿ-ಪ್ರತಿದಾಳಿಯಿಂದ ಗಲ್ಫ್ ಉದ್ವಿಗ್ನ! US shot down Iranian drones

ಟೆಹ್ರಾನ್: ಜಾಗತಿಕ ಮಟ್ಟದಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿದ್ದಾಗ್ಯೂ, ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ(US shot down Iranian drones) ತಾರಕಕ್ಕೇರಿದೆ. ಅಂತಾರಾಷ್ಟ್ರೀಯ ನೌಕಾ ಸಂಚಾರಕ್ಕೆ ಅತ್ಯಂತ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶವಾಗಿರುವ ಹೊರ್ಮುಜ್ ಜಲಸಂಧಿ ಬಳಿ ಅಮೆರಿಕ ಸೇನೆಯು ಇರಾನ್‌ನ ಎರಡು ಒನ್‌-ವೇ ಅಟ್ಯಾಕ್ (ಆತ್ಮಹತ್ಯಾ ದಾಳಿ ನಡೆಸುವ) ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಕಳೆದ ಎರಡು ದಿನಗಳಿಂದ ಉಭಯ ದೇಶಗಳ ನಡುವೆ ಭೀಕರ ದಾಳಿ-ಪ್ರತಿದಾಳಿಗಳು ಮುಂದುವರಿದಿದ್ದು, ಅಮೆರಿಕದ ಸೆಂಟ್ರಲ್ ಕಮಾಂಡ್ ಭಾನುವಾರ ಈ ಕಾರ್ಯಾಚರಣೆಯನ್ನು ಅಧಿಕೃತವಾಗಿ ಖಚಿತಪಡಿಸಿದೆ.

ಹೊಡೆದುರುಳಿಸಿದ ಡ್ರೋನ್‌ಗಳು, ದ್ವೀಪಗಳ ಮೇಲೆ ದಾಳಿ

ಹೊರ್ಮುಜ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ನೌಕಾ ಸಂಚಾರಕ್ಕೆ ಕಂಟಕವಾಗಿದ್ದ ಇರಾನ್‌ನ ಎರಡು ಯುದ್ಧ ಡ್ರೋನ್‌ಗಳನ್ನು ಅಮೆರಿಕ ಪಡೆಗಳು ಹೊಡೆದುರುಳಿಸಿವೆ. ಇರಾನ್‌ನ ಯಾವುದೇ ರೀತಿಯ ಆಕ್ರಮಣಕಾರಿ ನೀತಿಯನ್ನು ಎದುರಿಸಲು ನಮ್ಮ ಸೈನಿಕರು ಸನ್ನದ್ಧರಾಗಿದ್ದಾರೆ ಎಂದು ಸೆಂಟ್ರಲ್ ಕಮಾಂಡ್ ತನ್ನ ಎಕ್ಸ್​ನಲ್ಲಿ ತಿಳಿಸಿದೆ.
ಸತತ ಎರಡನೇ ದಿನವೂ ಅಮೆರಿಕ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೂ ಮುನ್ನ ಶನಿವಾರದಂದು, ಡ್ರೋನ್ ದಾಳಿಗೆ ಪ್ರತಿಯಾಗಿ ಇರಾನ್‌ನ ಕರಾವಳಿ ಪಟ್ಟಣವಾದ ಗೊರುಕ್ ಹಾಗೂ ಪರ್ಷಿಯನ್ ಗಲ್ಫ್‌ನಲ್ಲಿರುವ ಅತಿ ದೊಡ್ಡ ದ್ವೀಪವಾದ ಖೇಶ್ಮ್ ಮೇಲಿರುವ ಇರಾನ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ಭೀಕರ ದಾಳಿ ನಡೆಸಿತ್ತು.

ಖೇಶ್ಮ್ ದ್ವೀಪದ ಪ್ರಾಮುಖ್ಯತೆ ಏನು?

ಇರಾನ್ ದೇಶವು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ವಿಶ್ವದ ಹಡಗುಗಳ ಮೇಲೆ ಕಣ್ಣಿಡಲು ಈ ಖೇಶ್ಮ್ ದ್ವೀಪ ಮತ್ತು ಗೊರುಕ್ ಪಟ್ಟಣಗಳನ್ನು ತನ್ನ ಪ್ರಮುಖ ಸೇನಾ ತಾಣಗಳನ್ನಾಗಿ ಮಾಡಿಕೊಂಡಿದೆ. ಇಲ್ಲಿ ಇರಾನ್ ತನ್ನ ಅತ್ಯಾಧುನಿಕ ಮಿಲಿಟರಿ ರೇಡಾರ್‌ಗಳು, ಹಡಗು ನಿರೋಧಕ ಕ್ಷಿಪಣಿ ವ್ಯವಸ್ಥೆಗಳು ಮತ್ತು ಡ್ರೋನ್ ನೆಲೆಗಳನ್ನು ಸ್ಥಾಪಿಸಿದೆ. ಅಮೆರಿಕ ಸೇನೆಯು ಇರಾನ್‌ನ ಇದೇ ರೇಡಾರ್ ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದೆ.

ಬಹ್ರೇನ್, ಕುವೈತ್ ಮೇಲೆ ಇರಾನ್ ಕ್ಷಿಪಣಿ ಮಳೆ!

ಅಮೆರಿಕದ ಈ ಭೀಕರ ದಾಳಿಯಿಂದ ಕೆರಳಿದ ಇರಾನ್, ಬಹ್ರೇನ್ ಮತ್ತು ಕುವೈತ್ ದೇಶಗಳತ್ತ ಬರೋಬ್ಬರಿ ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿ ಸೇಡು ತೀರಿಸಿಕೊಳ್ಳಲು ಯತ್ನಿಸಿದೆ. ಆದರೆ, ಅಮೆರಿಕದ ರಕ್ಷಣಾ ವ್ಯವಸ್ಥೆಯು ಇವುಗಳಲ್ಲಿ ಆರು ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿದೆ. ಮತ್ತೊಂದು ಕ್ಷಿಪಣಿ ಗುರಿ ತಲುಪುವಲ್ಲಿ ವಿಫಲವಾಗಿದೆ. ಬಹ್ರೇನ್‌ನಲ್ಲಿರುವ ಅಮೆರಿಕದ 5ನೇ ನೌಕಾಪಡೆಯ ಪ್ರಧಾನ ಕಚೇರಿಗೆ ಹಾನಿಯಾಗಿದೆ ಎಂಬ ಇರಾನ್‌ನ ವಾದವನ್ನು ಅಮೆರಿಕ ತಳ್ಳಿಹಾಕಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಾತುಕತೆ ನಡುವೆಯೂ ನಿಲ್ಲದ ಯುದ್ಧ; ಕಾರಣವೇನು?

ಒಂದೆಡೆ ಮೂರನೇ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ಶಾಂತಿ ಪ್ರಸ್ತಾಪದ ಮಾತುಕತೆಗಳು ನಡೆಯುತ್ತಿದ್ದರೂ, ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಇರಾನ್ ತನ್ನ ಪರಮಾಣು ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅಮೆರಿಕ ಪಟ್ಟು ಹಿಡಿದಿದೆ. ಆದರೆ ಇದಕ್ಕೆ ಇರಾನ್ ಒಪ್ಪುತ್ತಿಲ್ಲ.
ಮತ್ತೊಂದೆಡೆ, ಜಗತ್ತಿನ ಬಹುಪಾಲು ತೈಲ ಸಾಗಣೆಯಾಗುವ ಹೊರ್ಮುಜ್ ಜಲಮಾರ್ಗದ ಮೇಲಿನ ನಿಯಂತ್ರಣವನ್ನು ತನ್ನಲ್ಲೇ ಉಳಿಸಿಕೊಳ್ಳಲು ಇರಾನ್ ಹಠ ಹಿಡಿದಿದೆ. ಆದರೆ, ಈ ಮಾರ್ಗವು ಇಡೀ ಪ್ರಪಂಚದ ವ್ಯಾಪಾರಕ್ಕೆ ಮುಕ್ತವಾಗಿರಬೇಕು ಎಂಬುದು ಅಮೆರಿಕದ ವಾದವಾಗಿದೆ. ಈ ಹಗ್ಗಜಗ್ಗಾಟವೇ ಸದ್ಯ ಗಲ್ಫ್ ವಲಯದಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿದೆ,(ಏಜೆನ್ಸೀಸ್).