ಸಾಂದರ್ಭಿಕ ಚಿತ್ರ  
ವಿದೇಶ

ಹೊರ್ಮುಜ್ ಹಫ್ತಾ! ಸುಂಕ ಸಂಗ್ರಹಕ್ಕಿದೆ ಶತಮಾನಗಳ ಇತಿಹಾಸ

ಹೊಮುಜ್ ಜಲಸಂಧಿಯ ಇತಿಹಾಸ ಮತ್ತು ಅಲ್ಲಿನ ತೆರಿಗೆ ಅಥವಾ ಟೋಲ್ ಸಂಗ್ರಹದ ವಿಷಯವು ಜಾಗತಿಕ ರಾಜಕೀಯ ಮತ್ತು ಆರ್ಥಿಕ ದೃಷ್ಟಿಯಿಂದ ಬಹಳ ಕುತೂಹಲಕಾರಿಯಾಗಿದೆ. ಹೊಮುಜ್ ಜಲಸಂಧಿಯು ಪುರಾತನ ಕಾಲದಿಂದಲೂ ಪೂರ್ವ ಮತ್ತು ಪಶ್ಚಿಮದ ನಡುವಿನ ಪ್ರಮುಖ ವ್ಯಾಪಾರ ಕೊಂಡಿಯಾಗಿದೆ. ಈ ಮಾರ್ಗವು ಪರ್ಷಿಯನ್ ಸಾಮ್ರಾಜ್ಯದ ಕಾಲದಿಂದಲೂ ವ್ಯಾಪಾರಕ್ಕೆ ಮುಕ್ತವಾಗಿತ್ತು. ಅಂದಿನ ರಾಜರು ಈ ಮಾರ್ಗದ ಮೂಲಕ ಹೋಗುವ ಹಡಗುಗಳ ರಕ್ಷಣೆಗಾಗಿ ಮತ್ತು ವ್ಯಾಪಾರದ ಹಕ್ಕಿಗಾಗಿ ಸುಂಕವನ್ನು ವಸೂಲಿ ಮಾಡುತ್ತಿದ್ದರು. 10ರಿಂದ 17ನೇ ಶತಮಾನದವರೆಗೆ ಹೊಮುಜ್ ಎಂಬ ಪ್ರತ್ಯೇಕ ರಾಜ್ಯವೇ ಇತ್ತು. ಈ ಜಲಸಂಧಿಯಿಂದ ಬರುವ ತೆರಿಗೆಯಿಂದಲೇ ಬೊಕ್ಕಸ ತುಂಬಿಸಿಕೊಳ್ಳುತ್ತಿತ್ತು. ಹೊಮುಜ್ ಅನ್ನು ಗೆದ್ದವನು ಇಡೀ ಜಗತ್ತಿನ ವ್ಯಾಪಾರವನ್ನು ನಿಯಂತ್ರಿಸುತ್ತಾನೆ ಎಂಬ ಮಾತೂ ಇತ್ತು. ಈ ಎಲ್ಲ ಕುತೂಹಲಕಾರಿ ಸಂಗತಿಗಳ ಮಾಹಿತಿ ಇಲ್ಲಿದೆ.

ಹೊಮುಜ್ ಜಲಸಂಧಿ! ಪ್ರಸಕ್ತ ಜಾಗತಿಕ ರಾಜಕಾರಣ ಮತ್ತು ವ್ಯಾಪಾರದ ಚರ್ಚಾ ಕೇಂದ್ರಬಿಂದು. ಇತ್ತೀಚಿನ ದಶಕಗಳಲ್ಲಿ, ಇರಾನ್ ಈ ಜಲಸಂಧಿಯ ಮೇಲೆ ತನ್ನ ಸಾರ್ವಭೌಮತ್ವವನ್ನು ಸಾಬೀತುಪಡಿಸಲು ಹಲವಾರು ಬಾರಿ ಸುಂಕ ವಿಧಿಸುವ ಬಗ್ಗೆ ಪ್ರಸ್ತಾಪಿಸಿದೆ. ಇರಾನ್ ತನ್ನ ಮೇಲೆ ಹೇರಲಾಗಿರುವ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳಿಗೆ ಪ್ರತಿಯಾಗಿ ಈ ಮಾರ್ಗವನ್ನು ಬಳಸುವ ಹಡಗುಗಳಿಂದ ಶುಲ್ಕ ವಸೂಲಿ ಮಾಡುವ ಆಲೋಚನೆಯನ್ನು ಹೊಂದಿದೆ. ಇರಾನ್​ನ ಸಂಸತ್ತಿನಲ್ಲಿ ಈ ಬಗ್ಗೆ ಹಲವು ಬಾರಿ ಚರ್ಚೆಗಳು ನಡೆದಿವೆ. ‘ಈ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಭದ್ರತೆ ನೀಡುತ್ತಿದ್ದೇವೆ ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಶ್ರಮಿಸುತ್ತಿದ್ದೇವೆ. ಆದ್ದರಿಂದ, ಅಂತಾರಾಷ್ಟ್ರೀಯ ಹಡಗುಗಳು ಬಳಕೆ ಶುಲ್ಕವನ್ನು ನೀಡಬೇಕು ಎಂಬುದು ಇರಾನ್ ನಿಲುವು. ಪ್ರಸ್ತುತ, ಅಧಿಕೃತವಾಗಿ ಇರಾನ್ ಯಾವುದೇ ಹಡಗುಗಳಿಂದ ನೇರವಾಗಿ ಸುಂಕ ವಸೂಲಿ ಮಾಡುತ್ತಿಲ್ಲ. ಆದರೆ, ಇರಾನ್​ನ ಗಾರ್ಡ್​ಗಳು ಆಗಾಗ್ಗೆ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳನ್ನು ತಪಾಸಣೆಗಾಗಿ ತಡೆಯುತ್ತಾರೆ. ಟೋಲ್ ಸಂಗ್ರಹ ಎಂಬುದು ಇರಾನ್ ಪಾಲಿಗೆ ಜಾಗತಿಕ ಸಮುದಾಯದ ಮೇಲೆ ಒತ್ತಡ ಹೇರುವ ಒಂದು ರಾಜಕೀಯ ಅಸ್ತ್ರವೂ ಆಗಿದೆ. ಹೊಮುಜ್ ಹಫ್ತಾ ಕೇವಲ ಆರ್ಥಿಕ ವಿಷಯವಲ್ಲ; ಇದು ಇರಾನ್​ನ ಅಧಿಪತ್ಯ ಮತ್ತು ಜಾಗತಿಕ ಶಕ್ತಿಗಳ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ. ಜಗತ್ತಿನ ಸುಮಾರು 20%ರಿಂದ 30% ತೈಲ ಇದೇ ಮಾರ್ಗವಾಗಿ ಸಾಗುವುದರಿಂದ, ಇಲ್ಲಿನ ಸಣ್ಣ ಬದಲಾವಣೆಯೂ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಕಳೆದ 40 ದಿನಗಳ ಬೆಳವಣಿಗೆಗಳೇ ಸಾಕ್ಷಿ.

ಕಾನೂನಾತ್ಮಕ ಸವಾಲುಗಳು

ಈ ಟೋಲ್ ಸಂಗ್ರಹದ ವಿಚಾರದಲ್ಲಿ ಅಂತಾರಾಷ್ಟ್ರೀಯ ಕಾನೂನುಗಳ ಅಡಚಣೆ ಇದೆ. ವಿಶ್ವಸಂಸ್ಥೆಯ ಸಮುದ್ರ ಕಾನೂನಿನ ಪ್ರಕಾರ, ಹೊಮುಜ್ ಒಂದು ಅಂತಾರಾಷ್ಟ್ರೀಯ ಜಲಸಂಧಿ. ಹಾಗಾಗಿ, ‘ಐ್ಞ್ಚ್ಞ ಕಚಠಠಚಜಛಿ’ (ಶಾಂತಿಯುತ ಸಂಚಾರ) ಅಡಿಯಲ್ಲಿ ಯಾವುದೇ ದೇಶವು ಹಡಗುಗಳನ್ನು ತಡೆಯುವಂತಿಲ್ಲ ಅಥವಾ ಸಂಚಾರಕ್ಕಾಗಿ ಹಣ ವಸೂಲಿ ಮಾಡುವಂತಿಲ್ಲ. ಅಲ್ಲದೆ, ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಇರಾನ್​ನ ಈ ಟೋಲ್ ಸಂಗ್ರಹದ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದು, ಇದು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಅಡ್ಡಿಪಡಿಸುತ್ತದೆ ಎಂದಿವೆ.

ಇತಿಹಾಸದ ಹಾದಿ

ಹೊಮುಜ್ ಜಲಸಂಧಿಯು ಪುರಾತನ ಕಾಲದಿಂದಲೂ ಪೂರ್ವ ಮತ್ತು ಪಶ್ಚಿಮದ ನಡುವಿನ ಪ್ರಮುಖ ವ್ಯಾಪಾರ ಕೊಂಡಿಯಾಗಿದೆ. 10ರಿಂದ 17ನೇ ಶತಮಾನದವರೆಗೆ ಹೊಮುಜ್ ಎಂಬ ಪ್ರತ್ಯೇಕ ರಾಜ್ಯವೇ ಇತ್ತು. ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ವೈಭವೋಪೇತ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿತ್ತು. ಇದನ್ನು ಜಗತ್ತಿನ ‘ಉಂಗುರದ ಮೇಲಿನ ವಜ್ರ’ ಎಂದು ವರ್ಣಿಸಲಾಗುತ್ತಿತ್ತು.

ಹೊಮುಜ್ ರಾಜ್ಯದ ಸ್ವರೂಪ (10-15ನೇ ಶತಮಾನ)

ಮುಂಚೆ ಹೊಮುಜ್ ಈಗಿನ ಇರಾನ್​ನ ಮಿನಾಬ್ ಪ್ರಾಂತ್ಯದ ಮುಖ್ಯ ಭೂಭಾಗದಲ್ಲಿತ್ತು. ಆದರೆ 1300ರ ಸುಮಾರಿಗೆ ಮಂಗೋಲರ ಆಕ್ರಮಣದ ಭಯದಿಂದಾಗಿ, ಅಲ್ಲಿನ ರಾಜರು ಇಡೀ ನಗರವನ್ನು ಸಮುದ್ರದ ನಡುವೆ ಇರುವ ಜೆರುನ್ ದ್ವೀಪಕ್ಕೆ ಸ್ಥಳಾಂತರಿಸಿದರು. ಅಂದಿನಿಂದ ಇದು ಹೊಮುಜ್ ದ್ವೀಪ ಎಂದೇ ಪ್ರಸಿದ್ಧವಾಯಿತು. ಇಲ್ಲಿ ಯಾವುದೇ ಕೃಷಿ ಭೂಮಿ ಅಥವಾ ಕುಡಿಯುವ ನೀರಿನ ಮೂಲವಿರಲಿಲ್ಲ. ಆದರೂ, ಇದು ಭಾರತದ ಮಸಾಲೆ ಪದಾರ್ಥಗಳು, ಚೀನಾದ ರೇಷ್ಮೆ ಮತ್ತು ಅರೇಬಿಯಾದ ಕುದುರೆಗಳ ವ್ಯಾಪಾರದ ಮಹಾದ್ವಾರವಾಗಿತ್ತು. ಇಲ್ಲಿ ಅರಬ್ಬರು, ಪರ್ಷಿಯನ್ನರು ಒಟ್ಟಾಗಿ ವಾಸಿಸುತ್ತಿದ್ದರು.

ಸುಂಕ ಸಂಗ್ರಹದ ಪರಿ

  • ಸ್ಥಳೀಯ ಹೊಮುಜ್ ರಾಜರು (10ನೇ ಶತಮಾನದಿಂದ 1507ರವರೆಗೆ): ಪೋರ್ಚುಗೀಸರು ಬರುವ ಮೊದಲು, ಸ್ಥಳೀಯ ಅರಬ್ ಮೂಲದ ರಾಜರು ಇಲ್ಲಿ ಆಡಳಿತ ನಡೆಸುತ್ತಿದ್ದರು. ಅವರು ಹೊಮುಜ್ ಬಂದರಿನ ಮೂಲಕ ಹಾದುಹೋಗುವ ಪ್ರತಿಯೊಂದು ಹಡಗಿನ ಮೇಲೂ ಬಂದರು ಸುಂಕ ವಿಧಿಸುತ್ತಿದ್ದರು. ಇವರು ಮಲಕ್ಕಾದಿಂದ ಬರುವ ಹಡಗುಗಳು ಮತ್ತು ಭಾರತದ ಗುಜರಾತ್ ಹಾಗೂ ಮಲಬಾರ್ ತೀರದಿಂದ ಬರುವ ಹಡಗುಗಳಿಂದ ಭಾರಿ ತೆರಿಗೆ ವಸೂಲಿ ಮಾಡುತ್ತಿದ್ದರು
  • ಪೋರ್ಚುಗೀಸರು (1507ರಿಂದ 1622): 1507ರಲ್ಲಿ ಅಫೊನ್ಸೊ ಡಿ ಅಲ್ಬುಕರ್ಕ್ ದಾಳಿ ಮಾಡಿದ ನಂತರ, ಅಧಿಕಾರವು ಪೋರ್ಚುಗೀಸರ ಕೈಗೆ ಹೋಯಿತು. ಇವರು ಸ್ಥಳೀಯ ರಾಜರನ್ನು ಹೆಸರಿಗೆ ಮಾತ್ರ ಅಧಿಕಾರದಲ್ಲಿ ಇಟ್ಟು, ಸುಂಕ ಸಂಗ್ರಹದ ಸಂಪೂರ್ಣ ಹಕ್ಕನ್ನು ತಮ್ಮದಾಗಿಸಿಕೊಂಡರು.
  • 17ನೇ ಶತಮಾನದ ಅಂತ್ಯ ಮತ್ತು ಪತನ: ಇರಾನ್​ನ ಶಾ ಅಬ್ಬಾಸ್ ಬ್ರಿಟಿಷರ ಸಹಾಯದಿಂದ 1622ರಲ್ಲಿ ಪೋರ್ಚುಗೀಸರನ್ನು ಸೋಲಿಸಿದರು. ಬಳಿಕ ಹೊಮುಜ್ ದ್ವೀಪದ ಪಕ್ಕದಲ್ಲೇ ಶಾ ಅಬ್ಬಾಸ್ ಬಂದರ್ ಅಬ್ಬಾಸ್ ಎಂಬ ಹೊಸ ಬಂದರನ್ನು ಅಭಿವೃದ್ಧಿಪಡಿಸಿದರು. ಅಲ್ಲಿಗೆ ಹೊಮುಜ್ ರಾಜ್ಯದ ವೈಭವದ ಇತಿಹಾಸ ಮತ್ತು ಅಲ್ಲಿನ ಸುಂಕದ ಏಕಸ್ವಾಮ್ಯ ಅಂತ್ಯವಾಯಿತು.

ಪೋರ್ಚುಗೀಸರ ಹಾವಳಿ

ಪೋರ್ಚುಗೀಸರು 16ನೇ ಶತಮಾನದಲ್ಲಿ ಹೊಮುಜ್ ಪ್ರದೇಶವನ್ನು ವಶಪಡಿಸಿಕೊಂಡಿದ್ದಲ್ಲದೆ, 100 ವರ್ಷಗಳ ಕಾಲ ಪ್ರತಿಯೊಂದು ಹಡಗಿನಿಂದ ಭಾರಿ ಪ್ರಮಾಣದ ಸುಂಕವನ್ನು ವಸೂಲಿ ಮಾಡಿದರು. ಪೋರ್ಚುಗೀಸರು ಹಿಂದೂ ಮಹಾಸಾಗರ ಮತ್ತು ಹೊಮುಜ್ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಿದ ರೀತಿ ಆಕ್ರಮಣಕಾರಿಯಾಗಿತ್ತು. ಅವರು ಕೇವಲ ವ್ಯಾಪಾರಿಗಳಾಗಿರದೆ, ಸಮುದ್ರದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಲು ಕಾರ್ಟಾಜ್ ಅಂದರೆ ‘ಸಮುದಾಯ ಸಂಚಾರ ಪರವಾನಗಿ’ ಎಂಬ ವಿಶೇಷ ಪದ್ಧತಿಯನ್ನು ಜಾರಿಗೆ ತಂದರು. ಹಿಂದೂ ಮಹಾಸಾಗರದಲ್ಲಿ ಸಂಚರಿಸುವ ಯಾವುದೇ ಹಡಗು (ಅದು ಅರಬ್, ಭಾರತೀಯ ಅಥವಾ ಸ್ಥಳೀಯ ವ್ಯಾಪಾರಿಗಳದ್ದಾಗಿರಲಿ) ಪೋರ್ಚುಗೀಸರಿಂದ ಈ ಕಾರ್ಟಾಜ್ ಅನ್ನು ಹಣ ನೀಡಿ ಖರೀದಿಸಲೇಬೇಕಿತ್ತು. ಈ ಪರವಾನಗಿ ಪತ್ರದಲ್ಲಿ ಹಡಗಿನ ಗಾತ್ರ, ಕ್ಯಾಪ್ಟನ್ ಹೆಸರು ಮತ್ತು ಸಾಗಿಸುವ ಸರಕುಗಳ ವಿವರ ಇರುತ್ತಿತ್ತು. ಇದಕ್ಕಾಗಿ ಭಾರಿ ಪ್ರಮಾಣದ ಸುಂಕವನ್ನು ಪೋರ್ಚುಗೀಸ್ ಅಧಿಕಾರಿಗಳು ವಸೂಲಿ ಮಾಡುತ್ತಿದ್ದರು. ಕಾರ್ಟಾಜ್ ಪರವಾನಗಿ ಇದ್ದರೂ, ಕೆಲವು ನಿರ್ದಿಷ್ಟ ಸರಕುಗಳನ್ನು (ಉದಾಹರಣೆಗೆ: ಮೆಣಸು, ಕುದುರೆಗಳು ಮತ್ತು ಆಯುಧಗಳು) ಪೋರ್ಚುಗೀಸರ ಅನುಮತಿಯಿಲ್ಲದೆ ಸಾಗಿಸುವಂತಿರಲಿಲ್ಲ. ಈ ಸರಕುಗಳ ವ್ಯಾಪಾರವನ್ನು ಪೋರ್ಚುಗೀಸರು ತಮ್ಮ ಸ್ವಂತ ಲಾಭಕ್ಕಾಗಿ ಮೀಸಲಿಟ್ಟಿದ್ದರು. ಯಾರಾದರೂ ಕಾರ್ಟಾಜ್ ಇಲ್ಲದೆ ಸಮುದ್ರದಲ್ಲಿ ಸಂಚರಿಸುತ್ತಿರುವುದು ಕಂಡುಬಂದರೆ, ಪೋರ್ಚುಗೀಸ್ ನೌಕಾಪಡೆಯು ಆ ಹಡಗನ್ನು ವಶಪಡಿಸಿಕೊಳ್ಳುತ್ತಿತ್ತು ಮತ್ತು ಸರಕುಗಳನ್ನು ಲೂಟಿ ಮಾಡಿ, ಹಡಗನ್ನು ಮುಳುಗಿಸುತ್ತಿತ್ತು ಅಥವಾ ಸಿಬ್ಬಂದಿಯನ್ನು ಬಂಧಿಸುತ್ತಿತ್ತು. ಸುಂಕದ ರೂಪದಲ್ಲಿ ಬಂದ ಹಣದಿಂದ ಪೋರ್ಚುಗೀಸ್ ಸಾಮ್ರಾಜ್ಯ ಶ್ರೀಮಂತವಾಯಿತು. ಲಿಸ್ಬನ್ ನಗರವು ಯುರೋಪಿನ ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮಿತು. ಪೋರ್ಚುಗೀಸರು ಹೊಮುಜ್ ಅನ್ನು ತಮ್ಮ ವಾಣಿಜ್ಯ ಬ್ಯಾಂಕ್​ನಂತೆ ಬಳಸಿಕೊಂಡರು. ಇಲ್ಲಿ ಸಂಗ್ರಹವಾದ ಸುಂಕವು ಗೋವಾದಲ್ಲಿದ್ದ ಪೋರ್ಚುಗೀಸ್ ಸರ್ಕಾರಕ್ಕೆ ದೊಡ್ಡ ಮಟ್ಟದ ಆರ್ಥಿಕ ಬಲ ನೀಡುತ್ತಿತ್ತು. ಪರ್ಷಿಯಾದಿಂದ ಭಾರತದ ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ಸುಲ್ತಾನರಿಗೆ ರಫ್ತಾಗುತ್ತಿದ್ದ ಕುದುರೆಗಳು ಹೊಮುಜ್ ಮೂಲಕವೇ ಬರಬೇಕಿತ್ತು. ಪ್ರತಿ ಕುದುರೆಯ ಮೇಲೆ ಪೋರ್ಚುಗೀಸರು ಭಾರಿ ‘ರಫ್ತು ಸುಂಕ’ ವಸೂಲಿ ಮಾಡುತ್ತಿದ್ದರು.

ಏನೇನಾಯಿತು?

  • 16ನೇ ಶತಮಾನದ ಆರಂಭದಲ್ಲಿ ಪೋರ್ಚುಗೀಸ್ ಗವರ್ನರ್ ಅಫೊನ್ಸೊ ಡಿ ಅಲ್ಬುಕರ್ಕ್ ಹೊಮುಜ್​ನ ಆಯಕಟ್ಟಿನ ಜಾಗವನ್ನು ಗುರುತಿಸಿದನು.
  • 1507 ಮತ್ತು 1515ರಲ್ಲಿ ಅಲ್ಬುಕರ್ಕ್ ಹೊಮುಜ್ ಮೇಲೆ ದಾಳಿ ಮಾಡಿ, ಅಲ್ಲಿನ ಸ್ಥಳೀಯ ಆಡಳಿತಗಾರರನ್ನು ಸೋಲಿಸಿದನು. ಬಳಿಕ, ಹೊಮುಜ್​ನಲ್ಲಿ ಬಲಿಷ್ಠವಾದ ಕೋಟೆಯನ್ನು ನಿರ್ವಿುಸಿದನು. ಇದರಿಂದಾಗಿ ಪರ್ಷಿಯನ್ ಗಲ್ಪ್​ಗೆ ಪ್ರವೇಶಿಸುವ ಮತ್ತು ಹೊರಹೋಗುವ ಪ್ರತಿಯೊಂದು ಹಡಗಿನ ಮೇಲೆ ಪೋರ್ಚುಗೀಸರು ಕಣ್ಗಾವಲು ಇರಿಸಲು ಸಾಧ್ಯವಾಯಿತು.
  • ಪೋರ್ಚುಗೀಸರ ಈ ಕಟ್ಟುನಿಟ್ಟಿನ ಮತ್ತು ಕ್ರೂರ ಸುಂಕ ನೀತಿಯಿಂದಾಗಿ ಇರಾನ್​ನ ಸಫಾವಿದ್ ರಾಜರು ಮತ್ತು ಒಟ್ಟೋಮನ್ ಸಾಮ್ರಾಜ್ಯದ ನಡುವೆ ಸಂಘರ್ಷಗಳು ನಿರಂತರವಾಗಿ ನಡೆದವು.
  • ಅಂತಿಮವಾಗಿ 1622ರಲ್ಲಿ, ಇರಾನ್​ನ ಶಾ ಅಬ್ಬಾಸ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ನೌಕಾಪಡೆಯ ಸಹಾಯದೊಂದಿಗೆ ಪೋರ್ಚುಗೀಸರನ್ನು ಹೊಮುಜ್​ನಿಂದ ಓಡಿಸುವಲ್ಲಿ ಯಶಸ್ವಿಯಾದರು. ಅಲ್ಲಿಗೆ ಪೋರ್ಚುಗೀಸರ ಒಂದು ಶತಮಾನದ ಸುಂಕದ ಏಕಸ್ವಾಮ್ಯ ಕೊನೆಗೊಂಡಿತು.