ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಮಗ ನಿಕೋಲಸ್ ಮಡುರೊ ಗೆರ್ರಾ
ಕ್ಯಾರಕಾಸ್: ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊರನ್ನು ಅಮೆರಿಕ ಬಂಧಿಸಿದ ನಂತರ ಪ್ರತಿಕ್ರಿಯಿಸಿರುವ ಪುತ್ರ ನಿಕೋಲಸ್ ಮಡುರೊ ಗೆರ್ರಾ(Nicolas Guerra), ದೇಶದ್ರೋಹಿಗಳು ಯಾರೆಂದು ಇತಿಹಾಸ ಹೇಳುತ್ತದೆ. ಇತಿಹಾಸ ಅದನ್ನು ಬಹಿರಂಗಪಡಿಸುತ್ತದೆ ಎಂದು ಯುಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಟೆಲಿಗ್ರಾಮ್ನಲ್ಲಿ ಅಡಿಯೋ ಸಂದೇಶದ ಮೂಲಕ ಮಾತನಾಡಿದ ಗೆರ್ರಾ, ಆಂತರಿಕ ದ್ರೋಹದ ಬಗ್ಗೆ ಸುಳಿವು ನೀಡಿದ್ದು, ಜಗತ್ತನ್ನು ಬೆರಗುಗೊಳಿಸಿದ ಮಡುರೊ ಬಂಧನದ ಹೊರತಾಗಿಯೂ ಸಮಾಜವಾದಿ ಚಳುವಳಿ ಕುಸಿಯುವುದಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಗೆರ್ರಾ, ದೇಶದ್ರೋಹಿಗಳು ಯಾರೆಂದು ಇತಿಹಾಸ ಹೇಳುತ್ತದೆ. ಇತಿಹಾಸ ಅದನ್ನು ಬಹಿರಂಗಪಡಿಸುತ್ತದೆ. ನಾವು ಕಾದು ನೋಡೋಣ ಎಂದಿದ್ದಾರೆ. ಅಮೆರಿಕವು ನಾವು ದುರ್ಬಲರಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ ನಾವು ದೌರ್ಬಲ್ಯವನ್ನು ತೋರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ವೆನೆಜುವೆಲಾದಲ್ಲಿ ಮಡುರೊ ಬೆಂಬಲಿಗರನ್ನು ಘನತೆಯ ಧ್ವಜವನ್ನು ಹಾರಿಸಲು ಮತ್ತು ತಮ್ಮ ತಂದೆ ಮತ್ತು ಮಲತಾಯಿ ಸಿಲಿಯಾ ಫ್ಲೋರ್ಸ್ರನ್ನು ಹಿಂದಿರುಗಿಸುವಂತೆ ಒತ್ತಾಯಿಸಲು ಕ್ಯಾರಕಾಸ್‌ನಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಬೇಕು ಎಂದು ಗೆರ್ರಾ ಕೆರೆ ನೀಡಿದ್ದಾರೆ. ನಮಗೆ ನಮ್ಮ ತಂದೆಯ ಬಂಧನದ ಘಟನೆಯಿಂದ ಆಘಾತಗೊಂಡಿದ್ದೇವೆ. ಇದು ನಮಗೆ ನೋವುಂಟುಮಾಡುತ್ತದೆಯೇ? ಖಂಡಿತ ಇದು ನಮಗೆ ನೋವುಂಟುಮಾಡುತ್ತದೆ. ಆದರೆ ಅಮೆರಿಕ ನಮ್ಮನ್ನು ಮುರಿಯಲು ಸಾಧ್ಯವಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ದಾಳಿ ಮತ್ತು ಮಡುರೊ ಬಂಧನ
ಲ್ಯಾಟಿನ್ ಅಮೇರಿಕನ್ ದೇಶದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಅಮೆರಿಕ ಶನಿವಾರ ವೆನೆಜುವೆಲಾದ ಅನೇಕ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿ, ಅಧ್ಯಕ್ಷ ಮಡುರೊ ಮತ್ತು ಪತ್ನಿ ಸಿಲಿಯಾ ಫ್ಲೋರ್ಸ್ರನ್ನು ಬಂಧಿಸಿದೆ. ಈ ಇಬ್ಬರನ್ನೂ ನ್ಯೂಯಾರ್ಕ್‌ಗೆ ಕರೆದೊಯ್ಯಲಾಗಿದ್ದು, ಮಾದಕವಸ್ತು ಕಳ್ಳಸಾಗಣೆ ಮತ್ತು ಮಾದಕವಸ್ತು-ಭಯೋತ್ಪಾದನಾ ಪಿತೂರಿಗಳ ಆರೋಪದ ಮೇಲೆ ಅವರ ಮೇಲೆ ಆರೋಪ ಹೊರಿಸಲಾಗಿದೆ ಮತ್ತು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನಿನ್ನೆ ಅಥವಾ ಕೇವಲ ಅಲ್ಪಾವಧಿಯಲ್ಲಿ ಅಮೆರಿಕ ಸಾಧಿಸಿದ್ದನ್ನು ವಿಶ್ವದ ಯಾವುದೇ ರಾಷ್ಟ್ರ ಸಾಧಿಸಲು ಸಾಧ್ಯವಿಲ್ಲ. ಅಮೆರಿಕದ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ನಮ್ಮ ಸೇನೆಯ ಪುರುಷರು ಮತ್ತು ಮಹಿಳೆಯರು ರಾತ್ರಿಯಿಡೀ ಮಡುರೊರನ್ನು ಯಶಸ್ವಿಯಾಗಿ ಸೆರೆಹಿಡಿದಾಗ ವೆನೆಜುವೆಲಾದ ಎಲ್ಲಾ ಮಿಲಿಟರಿ ಸಾಮರ್ಥ್ಯಗಳು ಶಕ್ತಿಹೀನವಾದವು ಎಂದು ಫ್ಲೋರಿಡಾದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ.
ವೆನೆಜುವೆಲಾದ ಕಥೆ ಏನು..?
ಮಡುರೊ ಬಂಧನದಿಂದಾಗಿ ಅಮೆರಿಕವು ವೆನೆಜುವೆಲಾವನ್ನು ತಾತ್ಕಾಲಿಕವಾಗಿ ಮುನ್ನಡೆಸಲಿದ್ದು, ಅದರ ತೈಲ ನಿಕ್ಷೇಪಗಳನ್ನು ಬಳಸಿಕೊಳ್ಳುತ್ತದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ನಡುವೆ ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಪ್ರಕಾರ, ರಾಜ್ಯ ಮಾಧ್ಯಮವು ಇನ್ನೂ ಮಡುರೊ ಪರ ಪ್ರಚಾರವನ್ನು ನಡೆಸುತ್ತಿದೆ ಮತ್ತು ಕ್ಯಾರಕಾಸ್‌ನಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಲು ರಸ್ತೆಗಿಳಿಯುತ್ತಿರುವ ಫೋಟೋಗಳನ್ನು ಪ್ರಸಾರ ಮಾಡುತ್ತಿದೆ. ನಾವು ಸುರಕ್ಷಿತ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆ ಮಾಡುವವರೆಗೆ ದೇಶವನ್ನು ನಡೆಸುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ,(ಏಜೆನ್ಸೀಸ್).