ಸಾಂದರ್ಭಿಕ ಚಿತ್ರ 
ವಿದೇಶ

Hindu property destroyed | ಬಾಂಗ್ಲಾದೇಶದಲ್ಲಿ ಹಿಂದೂಗಳ ಆಸ್ತಿಪಾಸ್ತಿ ನಾಶ: 5 ದಿನಗಳಲ್ಲಿ 7 ಮನೆಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಢಾಕಾ: ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯ ನಡುವೆ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗಳು ತಾರಕಕ್ಕೇರಿವೆ. ಚಟ್ಟೋಗ್ರಾಮ್ ಸಮೀಪದ ರಯೋಜನ್ ಎಂಬಲ್ಲಿ ಇತ್ತೀಚೆಗೆ ನಡೆದ ಸರಣಿ ಬೆಂಕಿ ಹಚ್ಚುವ ಘಟನೆಗಳಲ್ಲಿ ಮೂರು ಹಿಂದೂ ಕುಟುಂಬಗಳ ಮನೆಗಳು(Hindu property destroyed) ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಕಳೆದ ಕೆಲವು ದಿನಗಳಿಂದ ರಯೋಜನ್ ಪ್ರದೇಶದಲ್ಲಿ ಸರಣಿ ಬೆಂಕಿ ಹಚ್ಚುವ ಘಟನೆಗಳು ನಡೆಯುತ್ತಿವೆ. ಅಲ್ಲದೆ, ಕಳೆದ ಶುಕ್ರವಾರವಷ್ಟೇ ಕೆವೋಟಿಯಾ ಗ್ರಾಮದಲ್ಲಿ ದುಷ್ಕರ್ಮಿಗಳು ಮೂರು ಹಿಂದೂ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅದರೆ, ಅಚ್ಚರಿಯ ಮತ್ತು ಭಯಾನಕ ವಿಷಯವೆಂದರೆ, ಬೆಂಕಿ ಹಚ್ಚುವ ಮೊದಲು ಮನೆಯವರು ಒಳಗೆ ಇರುವಾಗಲೇ ಹೊರಗಿನಿಂದ ಬಾಗಿಲನ್ನು ಲಾಕ್ ಮಾಡಲಾಗಿತ್ತು.

ಕಾಂಪೌಂಡ್ ಜಿಗಿದು ಜೀವ ಉಳಿಸಿಕೊಂಡ ಕುಟುಂಬ

ಬೆಳಗ್ಗೆ 3:15 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಮನೆಯವರು ಎಚ್ಚರಗೊಂಡಿದ್ದಾರೆ. ಆದರೆ ಬಾಗಿಲು ಹೊರಗಿನಿಂದ ಲಾಕ್ ಆಗಿದ್ದರಿಂದ ಕುಟುಂಬ ಸದಸ್ಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಅಂತಿಮವಾಗಿ ಕಿಟಕಿ ತಗಡುಗಳನ್ನು ಕತ್ತರಿಸಿ, ಕಾಂಪೌಂಡ್ ಜಿಗಿದು ಹೊರಬರುವ ಮೂಲಕ ಎಂಟು ಮಂದಿ ಸದಸ್ಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಮನೆಗಳು ಮತ್ತು ಅದರಲ್ಲಿದ್ದ ಸಾಕುಪ್ರಾಣಿಗಳು, ದವಸಧಾನ್ಯಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, ಇದು ಅಲ್ಪಸಂಖ್ಯಾತರನ್ನು ಬೆದರಿಸಲು ನಡೆಸಲಾದ ವ್ಯವಸ್ಥಿತ ಸಂಚಾಗಿದೆ. ಈ ಘಟನೆ ನಡೆದ ಸ್ಥಳದಲ್ಲೇ ಹಿಂದೂಗಳಿಗೆ ಎಚ್ಚರಿಕೆ ನೀಡುವ ಕೈಬರಹದ ಬ್ಯಾನರ್‌ಗಳು ಪತ್ತೆಯಾಗಿವೆ. ನೀವು ಇಸ್ಲಾಂ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು.

ತನಿಖೆ ಮತ್ತು ಬಂಧನ

ಈ ಸರಣಿ ದಾಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಈವರೆಗೆ 5 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ದಾಳಿ ನಡೆದ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ ಮತ್ತು ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ.

ಹಿಂಸಾಚಾರವನ್ನು ಖಂಡಿಸಿದ ಭಾರತ

ಈ ಬಗ್ಗೆ ಮಾತನಾಡಿರುವ MEA ವಕ್ತಾರ ರಣಧೀರ್ ಜೈಸ್ವಾಲ್, ನೆರೆಯ ದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾತ್ಮಕ ದಾಳಿಯ ಮಾದರಿಯನ್ನು ತೋರಿಸಿದೆ. ಅಲ್ಲದೆ, ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಢಾಕಾದಲ್ಲಿರುವ ಮಧ್ಯಂತರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಮೆನ್ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಮತ್ತು ರಾಜ್‌ಬರಿಯಲ್ಲಿ ಅಮೃತ್ ಮಂಡಲ್ ಎಂಬ ಇಬ್ಬರು ಹಿಂದೂಗಳನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಿದ ಘಟನೆಗಳ ನಂತರ ಭಾರತ ಈ ಪ್ರತಿಕ್ರಿಯೆ ನೀಡಿದೆ. ಈ ಘಟನೆಗಳು ಅಂತರಾಷ್ಟ್ರೀಯವಾಗಿ ಆಕ್ರೋಶಕ್ಕೆ ಕಾರಣವಾಗಿವೆ.

ನೆರೆಯ ದೇಶದಲ್ಲಿ ಹೆಚ್ಚುತ್ತಿರುಗವ ಹಿಂಸಾಚಾರದ ಪ್ರಮಾಣ

ಬಾಂಗ್ಲಾದಲ್ಲಿರುವ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ, ಅಲ್ಪಸಂಖ್ಯಾತರ ವಿರುದ್ಧದ ಹತ್ಯೆಗಳು, ಬೆಂಕಿ ಹಚ್ಚುವಿಕೆ ಮತ್ತು ಭೂಕಬಳಿಕೆ ಸೇರಿದಂತೆ 2,900 ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ದಾಖಲಾಗಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮುಂದುವರೆದು ಮಾತನಾಡಿರುವ MEA ವಕ್ತಾರ ಜೈಸ್ವಾಲ್​, ಬಾಂಗ್ಲಾದಲ್ಲಿ ಸಂಭವಿಸುತ್ತಿರುವ ಈ ಘಟನೆಗಳು ಕೇವಲ ಮಾಧ್ಯಮ ಉತ್ಪ್ರೇಕ್ಷೆ ಅಥವಾ ಕಟ್ಟುನಿಟ್ಟಾಗಿ ರಾಜಕೀಯ ಹಿಂಸಾಚಾರ ಎಂಬ ಹೇಳಿಕೆಗಳನ್ನು ಜೈಸ್ವಾಲ್ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಅಲ್ಲದೆ, ಈ ದಾಳಿಗಳನ್ನು ಉಗ್ರರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಿಂದೂ ಯುವಕ ದೀಪು ಚಂದ್ರ ದಾಸ್ ಪ್ರಕರಣದ ಹಿನ್ನೆಲೆ 

ಇದೇ ಡಿಸೆಂಬರ್ 18 ರಂದು ಮೈಮೆನ್ಸಿಂಗ್‌ನ ಪಯೋನೀರ್ ನಿಟ್ ಕಾಂಪೋಸಿಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ದೀಪು ಚಂದ್ರ ದಾಸ್ ಎಂಬುವವರನ್ನು ಗುಂಪು ಹಿಡಿದು ಥಳಿಸಿ, ಅವರ ಶವವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿದ್ದ ಘಟನೆ ನಡೆದಿತ್ತು.
ದೀಪು ದಾಸ್​ ಎಂಬ ಹಿಂದೂ ಯುವಕ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಕಿಡಿಗೇಡಿಗಳು ಸುಳ್ಳು ವದಂತಿ ಹಬ್ಬಿಸಿದ್ದರು. ಆದರೆ ನಂತರದ ತನಿಖೆಯಲ್ಲಿ ಇದು ಕೆಲಸದ ಸ್ಥಳದ ವೈಯಕ್ತಿಕ ದ್ವೇಷಕ್ಕಾಗಿ ಮಾಡಲಾದ ಸಂಚು ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದಲ್ಲಿ ಹಲವಾರು ಜನರನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಂಗ್ಲಾದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಕೂಡ ಘಟನೆಯನ್ನು ಖಂಡಿಸಿದ್ದರು. ಅಲ್ಲದೆ, ಮೃತರ ಕುಟುಂಬಕ್ಕೆ ನೆರವು ನೀಡುತ್ತಿದ್ದೇವೆ ತಿಳಿಸಿದ್ದರು,(ಏಜೆನ್ಸೀಸ್​).