ಹಿಜ್ಬುಲ್ಲಾ ಮುಖ್ಯಸ್ಥನ ಆಪ್ತ ಕಾರ್ಯದರ್ಶಿ ಖತಂ! ಇಸ್ರೇಲ್ ನಡೆಸಿದ ಭೀಕರ ದಾಳಿಗೆ ನಯಿಮ್ ಖಾಸಿಮ್ ಸಲಹೆಗಾರ ಬಲಿ!
ಬೈರೂತ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಸ್ರೇಲ್ ಸೈನ್ಯವು ಹಿಜ್ಬುಲ್ಲಾ ಸಂಘಟನೆಯ ಬೆನ್ನೆಲುಬನ್ನೇ ಮುರಿಯುವಂತಹ ಕಾರ್ಯಾಚರಣೆಯನ್ನು ನಡೆಸಿದೆ. ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಖಾಸಿಮ್‌ನ ಪರಮಾಪ್ತ ಹಾಗೂ ವೈಯಕ್ತಿಕ ಕಾರ್ಯದರ್ಶಿ ಅಲಿ ಯೂಸುಫ್ ಹರ್ಷಿನನ್ನು (Ali Yusuf Harshi) ಬೈರುತ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಅಧಿಕೃತವಾಗಿ ಘೋಷಿಸಿದೆ.
ಯಾರು ಈ ಅಲಿ ಯೂಸುಫ್ ಹರ್ಷಿ..?
ಅಲಿ ಯೂಸುಫ್ ಹರ್ಷಿ ಕೇವಲ ಕಾರ್ಯದರ್ಶಿಯಾಗಿರದೆ, ಹಿಜ್ಬುಲ್ಲಾ ನಾಯಕತ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದನು.
ಇಸ್ರೇಲ್ ರಕ್ಷಣಾ ಪಡೆಯ ಪ್ರಕಾರ, ಹರ್ಷಿ ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಖಾಸಿಮ್‌ನ ಕಚೇರಿಯನ್ನು ನಿರ್ವಹಿಸುತ್ತಿದ್ದ ಪ್ರಮುಖ ಸೂತ್ರಧಾರಿಯಾಗಿದ್ದ.
ಖಾಸಿಮ್‌ನ ಎಲ್ಲಾ ರಹಸ್ಯ ಸಮಾಲೋಚನೆಗಳು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಇವನೇ ನೋಡಿಕೊಳ್ಳುತ್ತಿದ್ದ.
ಹಿಜ್ಬುಲ್ಲಾದ ಉನ್ನತ ನಿರ್ಧಾರಗಳಲ್ಲಿ ಈತನ ಪಾತ್ರ ಮಹತ್ವದ್ದಾಗಿತ್ತು ಎಂದು ಐಡಿಎಫ್ ತಿಳಿಸಿದೆ.
ಲಿಟಾನಿ ನದಿಯ ದಕ್ಷಿಣದಲ್ಲಿ ರಕ್ತಪಾತ: 182 ಸಾವು!
ಇಸ್ರೇಲ್ ಕೇವಲ ಬೈರುತ್ ಮೇಲೆ ಮಾತ್ರವಲ್ಲದೆ, ದಕ್ಷಿಣ ಲೆಬನಾನ್‌ನ ಲಿಟಾನಿ ನದಿಯ ಆಸುಪಾಸಿನಲ್ಲೂ ವ್ಯಾಪಕ ದಾಳಿ ನಡೆಸಿದೆ.
ಆಯುಧ ಸಂಗ್ರಹಾಗಾರಗಳ ನಾಶ: ಹಿಜ್ಬುಲ್ಲಾದ ಸುಮಾರು 10ಕ್ಕೂ ಹೆಚ್ಚು ಆಯುಧ ಸಂಗ್ರಹ ಕೇಂದ್ರಗಳು ಮತ್ತು ಕಮಾಂಡ್ ಸೆಂಟರ್‌ಗಳನ್ನು ಇಸ್ರೇಲ್ ಧ್ವಂಸಗೊಳಿಸಿದೆ.
ಸಾವಿನ ಸಂಖ್ಯೆ ಏರಿಕೆ: ಲೆಬನಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಬುಧವಾರ ಒಂದೇ ದಿನ ಇಸ್ರೇಲ್ ನಡೆಸಿದ ದಾಳಿಗೆ 182 ಜನರು ಬಲಿಯಾಗಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ ಎಂದು ವರದಿಯಾಗಿದೆ.
ಕದನ ವಿರಾಮದ ಮೇಲೆ ಕರಿನೆರಳು: ಇರಾನ್ ಆಕ್ರೋಶ
ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ತಾತ್ಕಾಲಿಕ ಕದನ ವಿರಾಮದ ಮೇಲೆ ಇಸ್ರೇಲ್‌ನ ಈ ದಾಳಿಗಳು ಕೆಟ್ಟ ಪರಿಣಾಮ ಬೀರುತ್ತಿವೆ.
ಇರಾನ್ ವಾದ: ಲೆಬನಾನ್‌ನಲ್ಲಿನ ಸಂಘರ್ಷ ನಿಲ್ಲುವುದು ಕೂಡ ಕದನ ವಿರಾಮದ ಒಪ್ಪಂದದ ಭಾಗ ಎಂದು ಇರಾನ್ ಹೇಳುತ್ತಿದೆ.
ಅಮೆರಿಕ-ಇಸ್ರೇಲ್ ನಿಲುವು: ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನೆತನ್ಯಾಹು ಅವರು ಈ ಕದನ ವಿರಾಮವು ಕೇವಲ ಇರಾನ್ ಮತ್ತು ಅಮೆರಿಕ ನಡುವೆ ಮಾತ್ರ, ಲೆಬನಾನ್ ಅಥವಾ ಹಿಜ್ಬುಲ್ಲಾ ಈ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ವಿಶ್ವವು ಲೆಬನಾನ್‌ನಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ಗಮನಿಸುತ್ತಿದೆ, ಅಮೆರಿಕ ತನ್ನ ಭರವಸೆಯನ್ನು ಈಡೇರಿಸಲಿ ಎಂದು ಗುಡುಗಿದ್ದಾರೆ. ಅತ್ತ ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದಾಗಿ ಇರಾನ್ ಬೆದರಿಕೆ ಹಾಕಿದ್ದು, ಇದನ್ನು ಅಮೆರಿಕ ಅಸಹನೀಯ ಎಂದು ಕರೆದಿದೆ.
ಮುಗಿಯದ ಸಂಘರ್ಷ
ಇಸ್ರೇಲ್ ತನ್ನ ಉತ್ತರ ಗಡಿಯ ಸುರಕ್ಷತೆಗಾಗಿ ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ನಿಶ್ಶಸ್ತ್ರಗೊಳಿಸುವ ಹಠಕ್ಕೆ ಬಿದ್ದಿದೆ. ಬೈರುತ್‌ನ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮೇಲೂ ಬಾಂಬ್ ದಾಳಿ ಮುಂದುವರಿದಿದ್ದು, ಇಡೀ ನಗರವು ಸ್ಮಶಾನದಂತಾಗಿದೆ. ಹಿಜ್ಬುಲ್ಲಾ ಈವರೆಗೆ ಹರ್ಷಿಯ ಸಾವಿನ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ತನ್ನ ಉನ್ನತ ನಾಯಕತ್ವದ ಸಾಲು ಸಾಲು ಹತ್ಯೆಗಳಿಂದ ಸಂಘಟನೆ ಕಂಗೆಟ್ಟಿದೆ,(ಏಜೆನ್ಸೀಸ್).