Hezbollah  
ವಿದೇಶ

ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ ಆಕ್ರೋಶ; ನಮ್ಮ ತಾಳ್ಮೆಗೂ ಮಿತಿ ಇದೆ: ಶೇಖ್ ನಯಿಮ್ ಖಾಸಿಮ್ ಎಚ್ಚರಿಕೆ! | Hezbollah

ಬೈರೂತ್ (ಲೆಬನಾನ್): ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಸತತ ಹದಿನೈದು ತಿಂಗಳುಗಳ ಕಾಲ 'ತಾಳ್ಮೆ' (Strategic Patience) ಕಾಯ್ದುಕೊಂಡಿದ್ದ ಲೆಬನಾನ್‌ನ ಪ್ರತಿರೋಧ ಚಳವಳಿ ಹಿಜ್ಬುಲ್ಲಾ(Hezbollah), ಈಗ ಇಸ್ರೇಲ್ ವಿರುದ್ಧ ಸಮರ ಸಾರಿದೆ.
ಹೌದು, "ನಮ್ಮ ಸಂಯಮವನ್ನು ದೌರ್ಬಲ್ಯ ಎಂದು ಭಾವಿಸಬೇಡಿ, ನಮ್ಮ ತಾಳ್ಮೆಗೂ ಮಿತಿ ಇದೆ" ಎಂದು ಹಿಜ್ಬುಲ್ಲಾ ಪ್ರಧಾನ ಕಾರ್ಯದರ್ಶಿ ಶೇಖ್ ನಯಿಮ್ ಖಾಸಿಮ್ ಗುಡುಗಿದ್ದಾರೆ.
ಬುಧವಾರ ದೂರದರ್ಶನದ ಮೂಲಕ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಇಸ್ರೇಲ್‌ನ ನಿರಂತರ ಆಕ್ರಮಣಕ್ಕೆ ನೀಡಿದ ಅನಿವಾರ್ಯ ಉತ್ತರವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಒಪ್ಪಂದ ಉಲ್ಲಂಘಿಸಿದ ಇಸ್ರೇಲ್: ಖಾಸಿಮ್ ಆರೋಪ

ನವೆಂಬರ್ 27, 2024 ರಂದು ಮಾಡಿಕೊಂಡಿದ್ದ ಕದನ ವಿರಾಮ ಒಪ್ಪಂದವನ್ನು ಲೆಬನಾನ್ ಸರ್ಕಾರ ಮತ್ತು ಹಿಜ್ಬುಲ್ಲಾ ಪ್ರಾಮಾಣಿಕವಾಗಿ ಪಾಲಿಸಿವೆ. ಆದರೆ, ಇಸ್ರೇಲ್ ಮಾತ್ರ ಒಪ್ಪಂದದ ಒಂದೇ ಒಂದು ನಿಯಮವನ್ನೂ ಪಾಲಿಸಿಲ್ಲ ಎಂದು ಖಾಸಿಮ್ ಕಿಡಿಕಾರಿದ್ದಾರೆ.
ಕದನ ವಿರಾಮ ಒಪ್ಪಂದದ ನಂತರವೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಲೆಬನಾನ್ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಇಸ್ರೇಲ್ ಭೂಮಿ, ಸಮುದ್ರ ಮತ್ತು ವಾಯುಮಾರ್ಗದ ಮೂಲಕ 10,000ಕ್ಕೂ ಹೆಚ್ಚು ಬಾರಿ ಲೆಬನಾನ್ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಅವರು, ಅಂತರಾಷ್ಟ್ರೀಯ ಸಂಧಾನ ಪ್ರಯತ್ನಗಳು ಕಳೆದ 15 ತಿಂಗಳುಗಳಲ್ಲಿ ಯಾವುದೇ ಫಲ ನೀಡಿಲ್ಲ. ರಾಜತಾಂತ್ರಿಕತೆಗೆ ಅವಕಾಶ ನೀಡಲು ನಾವು ಮೌನವಾಗಿದ್ದೆವು, ಆದರೆ ನಮ್ಮ ಮೌನವೇ ಇಸ್ರೇಲ್‌ಗೆ ಬಂಡವಾಳವಾಯಿತು ಎಂದರು.

ಸಾರ್ವಭೌಮತ್ವದ ರಕ್ಷಣೆಗಾಗಿ ಹೋರಾಟ

ಇಸ್ರೇಲ್ ಮತ್ತು ಅಮೆರಿಕದ ಮೈತ್ರಿಕೂಟವು ಲೆಬನಾನ್‌ನ ವಾಯುಪ್ರದೇಶವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಇದು ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ ವಿಷಯವಾಗಿದೆ. "ಇಸ್ರೇಲ್ ಕೇವಲ ಲೆಬನಾನ್‌ಗೆ ಮಾತ್ರವಲ್ಲ, ಇಡೀ ಪ್ರದೇಶಕ್ಕೆ ಇರುವ ಅಸ್ತಿತ್ವದ ಭೀತಿಯಾಗಿದೆ (Existential Threat)" ಎಂದಿದ್ದಾರೆ.
"

"ಆಕ್ರಮಣ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೆ ನಮ್ಮ ಶಸ್ತ್ರಾಸ್ತ್ರಗಳು ನಮ್ಮ ಹಕ್ಕು. ಇದು ಅಂತರಾಷ್ಟ್ರೀಯವಾಗಿ ಮತ್ತು ಕಾನೂನುಬದ್ಧವಾಗಿ ಮಾನ್ಯತೆ ಪಡೆದಿದೆ." - ಶೇಖ್ ನಯಿಮ್ ಖಾಸಿಮ್.