ಇಸ್ಲಾಮಾಬಾದ್/ಮುಜಫರಾಬಾದ್: ಪಾಕಿಸ್ತಾನ ಸೇನೆಗೆ ಸೇರಿದ ಎಂಐ-17 ಹೆಲಿಕಾಪ್ಟರ್ ಬುಧವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮುಜಫರಾಬಾದ್ ಸಮೀಪ ಪತನಗೊಂಡಿದ್ದು(Helicopter Crash), ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ 21 ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಬುಧವಾರ ವರದಿಯಾಗಿದೆ.
ಮಾಹಿತಿಯ ಪ್ರಕಾರ, ಪಾಕಿಸ್ತಾನ ಸೇನೆಯ ವಿಮಾನಯಾನ ವಿಭಾಗಕ್ಕೆ ಸೇರಿದ ಹೆಲಿಕಾಪ್ಟರ್ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ವೇಳೆ ಪೈಲಟ್ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದರೂ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಪತನಗೊಂಡಿದೆ ಎಂದು ತಿಳಿದುಬಂದಿದೆ.
ಹೆಲಿಕಾಪ್ಟರ್‌ನಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಅಲ್ಲದೆ ಪಿಒಕೆಯ ನೀಲಂ ಕಣಿವೆ ಪ್ರದೇಶಕ್ಕೆ ಹೆಚ್ಚುವರಿ ಸೈನಿಕರನ್ನು ಸಾಗಿಸುವ ಕಾರ್ಯಾಚರಣೆಯಲ್ಲಿ ಅದು ತೊಡಗಿಸಿಕೊಂಡಿತ್ತು ಎನ್ನಲಾಗಿದೆ.
ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ತಂಡಗಳು ಸ್ಥಳಕ್ಕೆ ಧಾವಿಸಿವೆ. ಪತನಗೊಂಡ ಪ್ರದೇಶದಲ್ಲಿ ಶೋಧ ಮತ್ತು ಮೃತದೇಹಗಳ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ.
ಘಟನೆ ಕುರಿತು ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ (ISPR) ತನಿಖೆಗೆ ಆದೇಶ ನೀಡಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ವಿಶೇಷ ತನಿಖಾ ಮಂಡಳಿ ರಚಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ದುರ್ಘಟನೆ ಪಾಕಿಸ್ತಾನ ಸೇನೆಗೆ ದೊಡ್ಡ ಆಘಾತವಾಗಿದ್ದು, ಒಂದೇ ಘಟನೆಯಲ್ಲಿ 21 ಭದ್ರತಾ ಸಿಬ್ಬಂದಿ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಅಪಘಾತದ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ,(ಏಜೆನ್ಸೀಸ್).