Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವೈಟ್‌ಹೌಸ್‌ನಲ್ಲಿ ತಮ್ಮನ್ನು ಭೇಟಿಯಾಗಲು ವಿನಂತಿಸಿದ್ದಾರೆ ಮತ್ತು ಈ ಸಭೆ ಮುಂದಿನ ವಾರವೇ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ತಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಪ್ರತಿಪಾದಿಸಿರುವ ಟ್ರಂಪ್(Donald Trump), ಯಾರು ಬಾಸ್ ಎಂಬುದು ಅವರಿಗೆ (ನೆತನ್ಯಾಹುಗೆ) ಚೆನ್ನಾಗಿ ಗೊತ್ತು ಎಂದಿದ್ದಾರೆ.
ಆಕ್ಸಿಯೋಸ್ ಸುದ್ದಿ ಸಂಸ್ಥೆಗೆ ನೀಡಿದ ಫೋನ್ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ಜುಲೈ 7-8 ರಂದು ಟರ್ಕಿಯಲ್ಲಿ ನಡೆಯಲಿರುವ ನಾಟೋ (NATO) ಶೃಂಗಸಭೆಯಿಂದ ಮರಳಿದ ನಂತರ ಮುಂದಿನ ವಾರವೇ ಈ ಭೇಟಿ ಸಾಧ್ಯವಿದೆ ಎನ್ನಲಾಗಿದೆ. ಆದರೆ, ಟ್ರಂಪ್ ಅವರ ಪ್ರವಾಸದ ವೇಳಾಪಟ್ಟಿಯಿಂದಾಗಿ ಮುಂದಿನ ವಾರ ಭೇಟಿ ನಡೆಯಬಹುದು ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಭಿನ್ನಾಭಿಪ್ರಾಯದ ವರದಿಗಳ ನಡುವೆ ಭೇಟಿ ಕುತೂಹಲ
ಫೆಬ್ರವರಿಯಲ್ಲಿ ನಡೆದ ವೈಟ್‌ಹೌಸ್ ಸಿಚುಯೇಷನ್ ರೂಮ್ ಸಭೆಯ ನಂತರ ಉಭಯ ನಾಯಕರ ನಡುವೆ ನಡೆಯುತ್ತಿರುವ ಮೊದಲ ಭೇಟಿ ಇದಾಗಲಿದೆ. ಇತ್ತೀಚಿನ ದಿನಗಳಲ್ಲಿ ಯುದ್ಧ ಮತ್ತು ಪ್ರಾದೇಶಿಕ ನೀತಿಗಳ ವಿಷಯದಲ್ಲಿ ಟ್ರಂಪ್ ಮತ್ತು ನೆತನ್ಯಾಹು ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿವೆ ಎಂಬ ವರದಿಗಳ ನಡುವೆಯೇ ಈ ಸಭೆ ನಿಗದಿಯಾಗಿದೆ. ಟ್ರಂಪ್ ಆಪ್ತ ಸಲಹೆಗಾರರು ನೆತನ್ಯಾಹು ಅವರ ನಿರ್ಧಾರಗಳ ಬಗ್ಗೆ ಅಪನಂಬಿಕೆ ಹೊಂದಿದ್ದಾರೆ ಎನ್ನಲಾಗಿದೆ. ಬೀಬಿ (ನೆತನ್ಯಾಹು) ಪ್ರತಿಯೊಂದು ವಿಷಯದಲ್ಲೂ ತಪ್ಪು ನಿರ್ಧಾರ ಕೈಗೊಂಡಿದ್ದಾರೆ ಎಂದು ಟ್ರಂಪ್ ಆಪ್ತರು ಭಾವಿಸಿದ್ದಾರೆ ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ತಿಂಗಳು ಇಸ್ರೇಲ್ ಲೆಬನಾನ್‌ನಲ್ಲಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
ಇರಾನ್ ಮಾತುಕತೆ ಮತ್ತು ಟ್ರಂಪ್ ಹೇಳಿಕೆ
ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಪ್ರಕ್ರಿಯೆಗಳನ್ನು ತಾವು ಹತ್ತಿರದಿಂದ ಗಮನಿಸುತ್ತಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಯುಎಸ್-ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಖಮೇನಿ ಹತನಾಗಿದ್ದ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಇರಾನ್ ಒಪ್ಪಂದ ಮಾಡಿಕೊಳ್ಳಲು ಹಪಹಪಿಸುತ್ತಿದೆ, ಆದರೆ ಅಂತ್ಯಕ್ರಿಯೆ ಮುಗಿಯುವವರೆಗೆ ಮಾತುಕತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಟ್ರಂಪ್ ಹೇಳಿದ್ದಾರೆ. ಅಂತ್ಯಕ್ರಿಯೆಯಲ್ಲಿ ಜನರು ಕಣ್ಣೀರು ಹಾಕುತ್ತಿರುವುದನ್ನು ಕಂಡು ಆಶ್ಚರ್ಯವಾಯಿತು ಎಂದಿರುವ ಟ್ರಂಪ್, ಜನರು ಖಮೇನಿಯನ್ನು ದ್ವೇಷಿಸುತ್ತಾರೆ ಎಂದು ನಾನು ಭಾವಿಸಿದ್ದೆ, ಬಹುಶಃ ಅವು ನಕಲಿ ಕಣ್ಣೀರು ಇರಬಹುದು ಎಂದು ಲೇವಡಿ ಮಾಡಿದ್ದಾರೆ.
ಇಸ್ರೇಲ್ ಪ್ರಧಾನಿ ಕಚೇರಿ ಉಭಯ ನಾಯಕರ ಭೇಟಿಯನ್ನು ಖಚಿತಪಡಿಸಿದ್ದು, ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೆತನ್ಯಾಹು ಅವರು ಟ್ರಂಪ್‌ಗೆ ಶುಭ ಕೋರಿದ್ದಾರೆ ಮತ್ತು ಶೀಘ್ರದಲ್ಲೇ ಅಮೆರಿಕದಲ್ಲಿ ಭೇಟಿಯಾಗಲು ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದೆ(ಏಜೆನ್ಸೀಸ್).