ಫ್ಲೈದುಬೈ ವಿಮಾನದೊಳಗೆ ನಡೆದ ಅಚ್ಚರಿಯ ಘಟನೆ: ರಕ್ತಸಿಕ್ತ ಸ್ಥಿತಿಯಲ್ಲೂ ಪ್ರಯಾಣಿಕರ ಜೀವ ಉಳಿಸಿದ ಧೀರ ಕ್ಯಾಪ್ಟನ್ ಸ್ಮಿತ್ ಮಚ್ಚಾರ್. 
ವಿದೇಶ

"ಅವನು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ".."ಅವನನ್ನು ಹೊರಗೆ ಎಳೆಯಿರಿ": ರಕ್ತದ ಮಡುವಿನಲ್ಲಿ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​; ಬೆಚ್ಚಿಬೀಳಿಸುವ ವಿಡಿಯೋ ವೈರಲ್​! Captain Smith Machchhar

ಫ್ಲೈದುಬೈ ವಿಮಾನದೊಳಗೆ ಸಹ-ಪೈಲಟ್ ಹಲ್ಲೆ ನಡೆಸಿದ ಆತಂಕಕಾರಿ ಹಾಗೂ ಬೆಚ್ಚಿಬೀಳಿಸುವ ಹೊಸ ವಿಡಿಯೋ ವೈರಲ್ ಆಗಿದೆ. ರಕ್ತಸಿಕ್ತರಾಗಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸಾಹಸದ ಕಥೆ ಇಲ್ಲಿದೆ.

ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' (Flydubai) ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ರೋಚಕ ಹಾಗೂ ಬೆಚ್ಚಿಬೀಳಿಸುವ ವಿಡಿಯೋ ಹೊರಬಂದಿದೆ.

ಸಹ-ಪೈಲಟ್ ಒಬ್ಬ ವಿಮಾನವನ್ನು ಪತನಗೊಳಿಸಲು ಯೋಚಿಸಿ, ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ವಿಮಾನದೊಳಗೆ ಉಂಟಾದ ಗೊಂದಲದ ದೃಶ್ಯಗಳು ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿವೆ. ಇಸ್ರೇಲ್​ ಮೂಲದ ವಾಹಿನಿಯೊಂದು ಹಂಚಿಕೊಂಡಿರುವ ವಿಡಿಯೋ ಈಗ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.

ವಿಮಾನದೊಳಗಿನ ಆತಂಕದ ಕ್ಷಣಗಳು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಕಾಕ್‌ಪಿಟ್ ಬಳಿ ಇದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಪ್ರಯಾಣಿಕರ ಕಿರುಚಾಟ, ಸಹಾಯಕ್ಕಾಗಿ ಒದ್ದಾಡುವ ಧ್ವನಿಗಳು ಮತ್ತು ತೀವ್ರ ಆತಂಕದ ವಾತಾವರಣ ಸ್ಪಷ್ಟವಾಗಿ ಕಾಣಿಸುತ್ತದೆ.

ಸಹ-ಪೈಲಟ್ ವಿಮಾನವನ್ನು ಅಪಘಾತಕ್ಕೀಡಾಗಿಸಲು ಯತ್ನಿಸಿದಾಗ, ಪ್ರಯಾಣಿಕರೊಬ್ಬರು ಆತಂಕದಿಂದ ಕೂಗಿಕೊಳ್ಳುವುದು ಕೇಳಿಸುತ್ತದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ "ಶಾಂತವಾಗಿ ಕುಳಿತುಕೊಳ್ಳಿ" ಎಂದು ಇತರರು ಸೂಚಿಸುತ್ತಿದ್ದರೆ, ಕಾಕ್‌ಪಿಟ್ ಬಳಿಯಿದ್ದವರು "ಆತನನ್ನು ಹೊರಗೆ ಎಳೆಯಿರಿ" ಎಂದು ಆಕ್ರೋಶದಿಂದ ಕೂಗುತ್ತಿರುವುದು ವಿಡಿಯೋದಲ್ಲಿದೆ.

ಈ ವೇಳೆ ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿದ್ದರಿಂದ, ಇಸ್ರೇಲಿ ದಂತವೈದ್ಯ ಡಾ. ಶೋಟಾ ಮುಸಾಯೆವ್ ಕೂಡಲೇ ಮುಂದೆ ಬಂದು ತುರ್ತು ವೈದ್ಯಕೀಯ ನೆರವು ನೀಡಲು ಮುಂದಾಗಿದ್ದಾರೆ. ವಿಮಾನದಲ್ಲಿ ಬೇರೆ ಪೈಲಟ್ ಇದ್ದಾರೆಯೇ ಎಂದು ಪ್ರಯಾಣಿಕರು ಗಾಬರಿಯಿಂದ ವಿಚಾರಿಸುತ್ತಿರುವ ದೃಶ್ಯಗಳೂ ದಾಖಲಾಗಿವೆ.

ರಕ್ತಸಿಕ್ತರಾಗಿದ್ದರೂ ಬಾಗಿಲು ತೆರೆದ ಧೀರ ಕ್ಯಾಪ್ಟನ್

ಚಾಕು ದಾಳಿಯಿಂದಾಗಿ ಗಾಯಗೊಂಡು, ಸಂಪೂರ್ಣ ರಕ್ತಸಿಕ್ತ ಸ್ಥಿತಿಯಲ್ಲಿ ಕಾಕ್‌ಪಿಟ್ ಹೊರಗಿನ ನೆಲದ ಮೇಲೆ ಬಿದ್ದಿದ್ದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದರೂ, ವಿಮಾನವನ್ನು ಪತನದಿಂದ ರಕ್ಷಿಸಲು ಅವರು ತಮ್ಮ ಕೈಯಿಂದ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದರು.

ಬಾಗಿಲು ತೆರೆದ ತಕ್ಷಣ ಇತರರು ಒಳಗೆ ನುಗ್ಗಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು. ವೈದ್ಯರು ಚಿಕಿತ್ಸೆ ನೀಡುವ ವೇಳೆ, ಸಹ-ಪೈಲಟ್ ತನ್ನ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದಾಗಿ ಕ್ಯಾಪ್ಟನ್ ವಿವರಿಸುತ್ತಾರೆ. ಕೊನೆಗೆ ವಿಮಾನವು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಬಳಿಕ, ಪೊಲೀಸರು ಬಂದು ಸಹ-ಪೈಲಟ್ ಅನ್ನು ಬಂಧಿಸಿದಾಗ ಆತ "ಒಬ್ಬ ಭಯೋತ್ಪಾದಕ" ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಸಹ-ಪೈಲಟ್: ನೆತನ್ಯಾಹು ಸ್ಪಷ್ಟನೆ

ಈ ಘಟನೆಯ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಸಹ-ಪೈಲಟ್ ಇಸ್ಲಾಮಿಸ್ಟ್ ತೀವ್ರಗಾಮಿ ಸಿದ್ಧಾಂತವನ್ನು ಒಪ್ಪಿಕೊಂಡವನಾಗಿದ್ದಾನೆಂದು ತಿಳಿಸಿದ್ದಾರೆ. ಆತ ಉದ್ದೇಶಪೂರ್ವಕವಾಗಿ ವಿಮಾನವನ್ನು ಪತನಗೊಳಿಸಲು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ.

ಸಿಬ್ಬಂದಿ ಮೊದಲು ಇಯರ್‌ಫೋನ್ ತಂತಿಗಳಿಂದ ಮತ್ತು ನಂತರ ಪ್ಲಾಸ್ಟಿಕ್ ಕಫ್‌ಗಳಿಂದ ಆತನನ್ನು ಕಟ್ಟಿಹಾಕಿದರು. ಆ ಸಂದರ್ಭದಲ್ಲಿ ಆತ ನೆಲದ ಮೇಲೆ ಮಲಗಿ "ನನ್ನನ್ನು ಕೊಂದುಬಿಡಿ" ಎಂದು ಪದೇ ಪದೇ ಕೂಗುತ್ತಿದ್ದ ಎಂದು ನೆತನ್ಯಾಹು 'ಫಾಕ್ಸ್ ಅಂಡ್ ಫ್ರೆಂಡ್ಸ್' ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಚೇತರಿಸಿಕೊಳ್ಳುತ್ತಿರುವ ಭಾರತದ ಧೀರ ಪುತ್ರ

ಪ್ರಸ್ತುತ ಯುನೈಟೆಡ್ ಅರಬ್ ಇಮಿರೇಟ್ಸ್ (UAE) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಕ್ಯಾಪ್ಟನ್ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸಮಯೋಚಿತವಾಗಿ ಕಾರ್ಯಪ್ರವೃತ್ತರಾಗಿ ನೂರಾರು ಜೀವಗಳನ್ನು ಉಳಿಸಿದ ಕ್ಯಾಪ್ಟನ್ ಸ್ಮಿತ್ ಅವರನ್ನು ರಾಯಭಾರಿಗಳು ಭಾರತದ ಧೀರ ಪುತ್ರ ಎಂದು ಕೊಂಡಾಡಿದ್ದಾರೆ, (ಏಜೆನ್ಸೀಸ್​).