ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಡಣಾಯ್ಕನಪುರ ಗ್ರಾಮದಲ್ಲಿ ರೈತ ನಂಜೇಗೌಡ ಸಾಕಿರುವ ಕುರಿಗಳು.
ರಾಮನಗರ: ಹೊಸ ಪ್ರಯೋಗಗಳ ಮೂಲಕ ಸಮಗ್ರ ಕೃಷಿ, ಕೃಷಿ ಜತೆಗೆ ಕುರಿ ಸಾಕಣೆ, ರೇಷ್ಮೆ, ಹೈನುಗಾರಿಕೆಯಂತಹ ಉಪ ಕಸುಬುಗಳಲ್ಲಿ ಲಾಭ ಕಂಡು ಯಶಸ್ವಿ, ಖುಷಿ ಜೀವನವನ್ನು ತಮ್ಮದಾಗಿಸಿಕೊಂಡವರು ರಾಮನಗರ ತಾಲೂಕು ಕೂಟಗಲ್ ಹೋಬಳಿಯ ಡಣಾಯ್ಕನಪುರದ ರೈತ ಮಂಚೇಗೌಡ.
ಹೌದು, ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿರುವ ಮಂಚೇಗೌಡ ನಾಲ್ಕೂವರೆ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಆದಾಯ ಗಳಿಸುತ್ತಿದ್ದು, ಮನಸ್ಸು ಮಾಡಿದರೆ ಕಡಿಮೆ ಜಮೀನಿನಲ್ಲೂ ಕೃಷಿ ಮಾಡಿ ಯಶಸ್ವಿಯಾಗಬಹುದು ಎಂದು ತೋರಿಸಿದ್ದಾರೆ. ಇವರ ಈ ಶ್ರಮಕ್ಕೆ ಕುಟುಂಬ ಹೆಗಲುಕೊಟ್ಟಿದ್ದು, ಕೃಷಿಯಲ್ಲೇ ಖುಷಿಕಂಡಿದ್ದಾರೆ.
ನೀರಾವರಿಗೆ ಎರಡು ಬೋರ್ವೆಲ್ ಕೊರೆಸಿಕೊಂಡಿರುವ ಮಂಚೇಗೌಡ ಈ ಹಿಂದೆ ತೆಂಗು, ಮಾವು, ರಾಗಿ, ಜೋಳವನ್ನಷ್ಟೇ ಬೆಳೆಯುತ್ತಿದ್ದರು. ಆದರೆ, ಕಳೆದ ಹಲವು ವರ್ಷಗಳಿಂದ ಮಿಶ್ರ ಕೃಷಿಯತ್ತ ಮುಖಮಾಡಿ ಋತುಮಾನಕ್ಕೆ ತಕ್ಕಂತೆ ಒಂದೊಂದೇ ಬೆಳೆ ಬೆಳೆದು, ಯಶಸ್ಸಿನತ್ತ ಸಾಗಿದ್ದಾರೆ. ಭರಪೂರ ನೀರು ಲಭ್ಯವಿರುವ ಕಾರಣ ಕೃಷಿ ಹೊಂಡ, ಹನಿ ನೀರಾವರಿ ಅಳವಡಿಸಿಕೊಳ್ಳಲು ಮುಂದಾಗಿಲ್ಲ. ಆದರೆ ಅಡಕೆ ಮತ್ತು ತರಕಾರಿ ಬೆಳೆಗಳಿಗೆ ಈಗ ಹನಿ ನೀರಾವರಿ ಅಳವಡಿಕೆಗೆ ಉತ್ಸಾಹ ತೋರಿದ್ದು, ಪಪ್ಪಾಯ, ವಿವಿಧ ರೀತಿಯ ಹಣ್ಣಿನ ಗಿಡ ಬೆಳೆಯಲು ಮುಂದಾಗಿದ್ದಾರೆ.
100ಕ್ಕೂ ಹೆಚ್ಚು ಕುರಿ ಸಾಕಣೆ
ಜಮೀನಿನಲ್ಲಿ ತೆಂಗು, ಮಾವು, ರೇಷ್ಮೆ, ಭತ್ತ, ಅಡಕೆ, ಅರಣ್ಯ ಕೃಷಿ ಜತೆಗೆ ಟೊಮ್ಯಾಟೊ, ಬದನೆ, ಮೆಣಸಿನಕಾಯಿಯಂತಹ ತರಕಾರಿ ಜತೆಗೆ ಹೈನುಗಾರಿಕೆ, ಉಪ ಕಸುಬಾಗಿ ಕುರಿ ಸಾಕಣೆ ಮಾಡುತ್ತಿರುವ ಮಂಚೇಗೌಡ, 100ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದಾರೆ. ಕುರಿ ಅಷ್ಟೇ ಅಲ್ಲದೆ ನಾಟಿ ಹಸು, ಒಂದು ಜೊತೆ ಎತ್ತು, ಎಮ್ಮೆ, ಒಂದು ಕೋಣ, ನಾಟಿ ಕೋಳಿಗಳನ್ನು ಸಾಕಿದ್ದಾರೆ. ನಾಟಿ ಎತ್ತುಗಳಿಂದಲೇ ಭೂಮಿ ಉಳುಮೆ ಮಾಡುವುದು ವಿಶೇಷ.
ಮೊದಲ ಹಂತದಲ್ಲಿ ರಾಗಿ, ಜೋಳ ಬೆಳೆದರೆ ಮತ್ತೆ ಅದೇ ಬೆಳೆ ಬೆಳೆಯದೆ ಭತ್ತ, ತರಕಾರಿ ಸೇರಿದಂತೆ ಬೇರೆಬೇರೆ ಬೆಳೆ ಬೆಳೆಯುತ್ತಾರೆ. ಇದರಿಂದ ಮಣ್ಣಿನ ಲವತ್ತತೆ ವೃದ್ಧಿಸುತ್ತದೆ. ಅಲ್ಲದೆ ರಸಗೊಬ್ಬರಕ್ಕಿಂತ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ನೀಡುವುದರಿಂದ ಉತ್ತಮ ಸಲನ್ನು ಮಂಚೇಗೌಡ ಪಡೆಯುತ್ತಾರೆ.
ಕುರಿ, ಕೊಟ್ಟಿಗೆ ಗೊಬ್ಬರ ವರದಾನ
ಕುರಿ ಗೊಬ್ಬರಕ್ಕೆ ಬೇಡಿಕೆಯೂ ಹೆಚ್ಚು. ಹಾಗೆಯೇ ಜಮೀನಿಗೆ ಹಾಕಿದರೆ ಉತ್ತಮ ಫಸಲು ಬರುತ್ತದೆ ಎಂಬ ಕಾರಣಕ್ಕೆ ಮಂಚೇಗೌಡ ಕುರಿಗೊಬ್ಬರವನ್ನು ಹೆಚ್ಚಾಗಿ ಶೇಖರಣೆ ಮಾಡಿ ಅದರ ಜತೆ ದನದ ಗೊಬ್ಬರ, ತರಗೆಲೆ ಗೊಬ್ಬರ, ಮಣ್ಣು ಮಿಶ್ರಣ ಮಾಡುತ್ತಾರೆ. ಗೊಬ್ಬರ ಕಳಿತ ನಂತರ ರೇಷ್ಮೆ, ತರಕಾರಿ, ಹಣ್ಣಿನ ಗಿಡ, ಮಾವು, ಅಡಕೆ ಮರಗಳಿಗೆ ನೀಡುತ್ತಾರೆ.
ವರ್ಷದ 365 ದಿನವೂ ರೇಷ್ಮೆ ಬೆಳೆಯುವ ಮಂಚೇಗೌಡ ಅವರು ಎರಡು ಬ್ಯಾಚ್ನಲ್ಲಿ ಒಂದು ಬಾರಿ 100 ಮೊಟ್ಟೆಯಂತೆ ರೇಷ್ಮೆ ಉತ್ಪಾದಿಸುತ್ತಾರೆ. ಒಂದೂವರೆ ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಇದ್ದು, ಉಳಿದಂತೆ ಮಾವು 1, ಅಡಕೆ ತೋಟ 20 ಗುಂಟೆ, ಭತ್ತ, ರಾಗಿ 20 ಗುಂಟೆ, ಜೋಳ, ಜಾನುವಾರು ಮೇವನ್ನು ಮಾವು, ತೆಂಗಿನತೋಟದಲ್ಲಿ ಬೆಳೆಯುತ್ತಿದ್ದಾರೆ. ಇನ್ನುಳಿದ ಖಾಲಿ ಜಾಗದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.
ವಾಣಿಜ್ಯ ಬೆಳೆಯಾಗಿ ಮಾವು ಬೆಳೆಯುವ ಮಂಚೇಗೌಡ ಅವರು ಮಾವನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ, ವ್ಯಾಪಾರ ಮಾಡುತ್ತಾರೆ. ಮಾವಿನತೋಟಕ್ಕೆ ಔಷಧ ಸಿಂಪಡಣೆ, ನೀರು ಜಮೀನಿನ ಕೃಷಿ ಕೆಲಸವನ್ನು ಕುಟುಂಬದ ಸಹಕಾರದೊಂದಿಗೆ ನಡೆಸುವ ಇವರು, ಮುಂಗಾರಿನಲ್ಲಿ ಮಳೆಯಾಶ್ರಿತವಾಗಿ, ಬೇಸಿಗೆಯಲ್ಲಿ ನೀರಾವರಿ ಸೌಕರ್ಯದಿಂದ ರಾಗಿ ಬೆಳೆಯುತ್ತಾರೆ.
ತರಕಾರಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವ ಸಮಯ ನೋಡಿಕೊಂಡು ತರಕಾರಿ ಬೆಳೆಯುವ ಮಂಚೇಗೌಡ ಅವರು ತರಕಾರಿಯಿಂದಲೂ ಲಾಭಕಾಣುತ್ತಿದ್ದಾರೆ. ಇವರು ಮುಖ್ಯವಾಗಿ ಟೊಮ್ಯಾಟೊ, ಸೌತೆ, ಬದನೆಕಾಯಿಯನ್ನು ಹೆಚ್ಚು ಬೆಳೆಯುತ್ತಾರೆ. ಮೊದಲ ಹಂತದಲ್ಲಿ ಟೊಮ್ಯಾಟೊ ಬೆಳೆದರೆ ಅದೇ ಜಾಗದಲ್ಲಿ ಮತ್ತೆ ಟೊಮ್ಯಾಟೊ ಬೆಳೆಯದೆ ಬೇರೆ ತರಕಾರಿ ಬೆಳೆಯುತ್ತಾರೆ. ಇದರಿಂದ ಫಸಲು ಉತ್ತಮವಾಗಿರುತ್ತದೆ.
ಕೃಷಿ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆದು ಓದುಗರು ಸಹ ಮಂಚೇಗೌಡ ಅವರ ದೂರವಾಣಿ ಸಂಖ್ಯೆ 99457&47207ಗೆ ಬೆಳಗ್ಗೆ 10ರಿಂದ ಸಂಜೆ 6ಗಂಟೆ ಒಳಗೆ ಕರೆ ಮಾಡಬಹುದು.
ಕೃಷಿಯಲ್ಲಿ ನಾನು ಎಂದೂ ಲಾಭ&ನಷ್ಟ ಲೆಕ್ಕ ಹಾಕಿದವನಲ್ಲ. ಏನನ್ನಾದರೂ ಸಾಧಿಸಬೇಕು ಎಂಬ ಬಯಕೆ ನಮ್ಮದು. ಕೃಷಿ ಜತೆಗೆ ಹೈನುಗಾರಿಕೆ, ರೇಷ್ಮೆ, ಕುರಿ ಸಾಕಣೆ ನಮ್ಮ ಕೈಹಿಡಿದಿದೆ. ನೂರು ಕುರಿಗಳು ನಮ್ಮಲ್ಲಿವೆ. ನಾಟಿ ಹಸು, ಎಮ್ಮೆ, ಮಿಶ್ರತಳಿ ಹಸು ಸಾಕಿದ್ದೇವೆ. ರೇಷ್ಮೆ, ಮಾವು ಬೆಳೆಯಿಂದ ಲಾಭ ಸಿಗುತ್ತಿದೆ. ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದೇವೆ.