ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು! ಟ್ರಂಪ್ ಹತ್ಯೆಗೆ ಸಂಚು? ಇರಾನ್ ಲಿಂಕ್ ಬಗ್ಗೆ ಅಮೆರಿಕ ಅಧ್ಯಕ್ಷರು ಹೇಳಿದ್ದೇನು?
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಪಾಲ್ಗೊಂಡಿದ್ದ ಹೈ-ಪ್ರೊಫೈಲ್ ಪತ್ರಕರ್ತರ ಔತಣಕೂಟದ ವೇಳೆ ಭೀಕರ ಗುಂಡಿನ ದಾಳಿ ನಡೆದಿದ್ದು, ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಶನಿವಾರ ರಾತ್ರಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಶ್ವೇತಭವನದ ಸಮೀಪದ ಲಾಬಿಗೆ ನುಗ್ಗಿ ದಾಳಿ ನಡೆಸಿದ್ದು, ಟ್ರಂಪ್ ಅವರ ಪ್ರಾಣಕ್ಕೆ ಅಪಾಯವಿತ್ತು ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ.
ನಡೆದಿದ್ದೇನು..? ಪ್ರಾಣಾಪಾಯದಿಂದ ಪಾರಾದ ಟ್ರಂಪ್!
ಕೈಯಲ್ಲಿ ಗನ್ ಮತ್ತು ಚಾಕು ಹಿಡಿದುಕೊಂಡು ಬಂದಿದ್ದ ಹಂತಕ, ಟ್ರಂಪ್ ಮತ್ತು ಹಿರಿಯ ನಾಯಕರು ಉಪಸ್ಥಿತರಿದ್ದ ಬಾಲ್‌ರೂಮ್‌ನತ್ತ ನುಗ್ಗಲು ಯತ್ನಿಸಿದನು. ತಕ್ಷಣ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಆತನನ್ನು ಸುತ್ತುವರೆದು ವಶಕ್ಕೆ ಪಡೆದರು. ಘಟನೆಯ ತಕ್ಷಣವೇ ಅಧ್ಯಕ್ಷ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಅದೃಷ್ಟವಶಾತ್ ಟ್ರಂಪ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.
ಗುಂಡಿನ ದಾಳಿಯ ಹಿಂದೆ ಇರಾನ್ ಕೈವಾಡ? ಟ್ರಂಪ್ ನೀಡಿದ ಉತ್ತರವೇನು?
ಈ ಬಗ್ಗೆ ದಾಳಿಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಇಸ್ಲಾಮಾಬಾದ್‌ನಲ್ಲಿ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಈ ದಾಳಿಗೂ ಇರಾನ್ ಯುದ್ಧಕ್ಕೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಟ್ರಂಪ್ ಸಂಯಮದಿಂದಲೇ ಉತ್ತರಿಸಿದರು.
ಸದ್ಯಕ್ಕೆ ನನಗೇನು ಹಾಗೆ ಅನ್ನಿಸುತ್ತಿಲ್ಲ. ಆದರೆ ಏನೂ ಹೇಳಲು ಸಾಧ್ಯವಿಲ್ಲ. ಜಗತ್ತಿನ ಅತ್ಯುತ್ತಮ ತನಿಖಾ ತಂಡಗಳು ಈ ಬಗ್ಗೆ ಕೆಲಸ ಮಾಡುತ್ತಿವೆ. ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ಟ್ರಂಪ್ ಹೇಳಿದ್ದಾರೆ.
10 ನಿಮಿಷದ ಗೇಮ್ ಚೇಂಜರ್: ಇರಾನ್‌ನಿಂದ ಹೊಸ ಪ್ರಸ್ತಾಪ!
ಇರಾನ್ ಜೊತೆಗಿನ ಸಂಘರ್ಷದ ನಡುವೆಯೇ ಟ್ರಂಪ್ ಒಂದು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಯುಎಸ್ ಸಂಧಾನಕಾರರಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರ ಇರಾನ್ ಭೇಟಿಯನ್ನು ಟ್ರಂಪ್ ರದ್ದುಗೊಳಿಸಿದ ಕೇವಲ 10 ನಿಮಿಷಗಳಲ್ಲಿ ಇರಾನ್‌ನಿಂದ ಹೊಸ ಶಾಂತಿ ಪ್ರಸ್ತಾಪ ಬಂದಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಪ್ರಸ್ತಾಪ: ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ.
ಹೊಸ ಪ್ರಸ್ತಾಪ: ಅವರು ಈ ಬಾರಿ ಬಹಳಷ್ಟು ವಿಷಯಗಳನ್ನು ಬಿಟ್ಟುಕೊಡಲು ಮುಂದೆ ಬಂದಿದ್ದಾರೆ, ಈ ಪೇಪರ್ ಮೊದಲಿನದ್ದಕ್ಕಿಂತ ಉತ್ತಮವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಜೊತೆಗೆ, ಈ ದಾಳಿಯಿಂದ ನಾನು ಎದೆಗುಂದುವುದಿಲ್ಲ ಎಂದ ಟ್ರಂಪ್, ಈ ಘಟನೆಯು ಇರಾನ್ ವಿರುದ್ಧದ ಯುದ್ಧದಲ್ಲಿ ನನ್ನ ಗೆಲುವಿನ ಹಠವನ್ನು ಕುಗ್ಗಿಸುವುದಿಲ್ಲ. ಇದಕ್ಕೂ ಇರಾನ್ ಯುದ್ಧಕ್ಕೂ ಸಂಬಂಧವಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಬಳಿಯೇ ಎಲ್ಲಾ ಕಾರ್ಡ್‌ಗಳಿವೆ: ಇರಾನ್‌ಗೆ ಟ್ರಂಪ್ ಎಚ್ಚರಿಕೆ
ಇರಾನ್ ಮೇಲೆ ಒತ್ತಡ ಹೇರುತ್ತಿರುವ ಟ್ರಂಪ್, ಪ್ರಮುಖವಾಗಿ ಒಂದು ಷರತ್ತನ್ನು ವಿಧಿಸಿದ್ದಾರೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವಂತಿಲ್ಲ ಎಂದು ಹೇಳಿದ್ದಾರೆ.
ನೇರ ಮಾತುಕತೆಗಾಗಿ ದೂರದ ಪ್ರಯಾಣದ ಅಗತ್ಯವಿಲ್ಲ ಎಂದ ಟ್ರಂಪ್, ನಮ್ಮ ಸಂಧಾನಕಾರರು ಅಲ್ಲಿನ ಉನ್ನತ ನಾಯಕರನ್ನು ಭೇಟಿಯಾಗುತ್ತಿರಲಿಲ್ಲ. ಹಾಗಾಗಿ ನಾನು ಪ್ರವಾಸ ರದ್ದುಗೊಳಿಸಿದೆ. ಈಗ ಅವರು ನಮಗೆ ಯಾವಾಗ ಬೇಕಾದರೂ ಫೋನ್ ಮಾಡಬಹುದು. ಈಗ ಪಂದ್ಯದ ಎಲ್ಲಾ ನಿಯಂತ್ರಣ ನಮ್ಮ ಕೈಯಲ್ಲೇ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭದ್ರತಾ ವೈಫಲ್ಯದ ಬಗ್ಗೆ ಆತಂಕ
ಶ್ವೇತಭವನದಂತಹ ಅತ್ಯಂತ ಸುರಕ್ಷಿತ ಪ್ರದೇಶಕ್ಕೆ ಶಸ್ತ್ರಸಜ್ಜಿತ ವ್ಯಕ್ತಿ ಹೇಗೆ ನುಗ್ಗಿದ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಟ್ರಂಪ್ ಅವರ ಭದ್ರತೆಯನ್ನು ಭೇದಿಸಿ ಒಳಬಂದ ಆತ ಯಾರು? ಆತನ ಹಿಂದೆ ಯಾವ ವಿದೇಶಿ ಶಕ್ತಿಗಳ ಕೈವಾಡವಿದೆ ಎಂಬ ಬಗ್ಗೆ ಎಫ್‌ಬಿಐ ತನಿಖೆ ಚುರುಕುಗೊಳಿಸಿದೆ,(ಏಜೆನ್ಸೀಸ್).