ಇರಾನ್​ ಸ್ಥಿತಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​  
ವಿದೇಶ

ಇರಾನ್​ಗೊಂದು ಅವಕಾಶ ಕೊಡಿ! ಟ್ರಂಪ್​ ಎಚ್ಚರಿಕೆಯ ಬೆನ್ನಲ್ಲೇ ಮಧ್ಯಸ್ಥಿಕೆಗೆ ಮುಂದಾದ 3 ಗಲ್ಫ್​ ರಾಷ್ಟ್ರಗಳು | Iran

ಪ್ರಮುಖ ಮುಖ್ಯಾಂಶಗಳು

  • ಖಮೇನಿ ರಾಷ್ಟ್ರದ ಮೇಲೆ ದಾಳಿಗೆ ಟ್ರಂಪ್​ ಸಿದ್ಧತೆ
  • ಪ್ರತಿಭಟನೆಗಳು ಹಿಂಸಾತ್ಮಕಕ್ಕೆ ತಿರುಗುತ್ತಿದ್ದಂತೆ ಅಮೆರಿಕ ವಾರ್ನಿಂಗ್
  • ಟ್ರಂಪ್​ ದಾಳಿಯ ಎಚ್ಚರಿಕೆ ಬೆನ್ನಲ್ಲೇ ಮಧ್ಯಸ್ಥಿಕೆಗೆ ಮುಂದಾದ ಗಲ್ಫ್ ರಾಷ್ಟ್ರಗಳು
ಟೆಹ್ರಾನ್​: ಸದ್ಯ ಇರಾನ್​ನಲ್ಲಿ ಯಾವುದೂ ಸರಿಯಿಲ್ಲ ಎನ್ನುವುದಕ್ಕೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಸಾವಿನ ಸಂಖ್ಯೆಗಳೇ ಸಾಕ್ಷಿ. ಇರಾನ್‌ನಾದ್ಯಂತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಇಲ್ಲಿಯವರೆಗೆ 3,400 ಮಂದಿ ದುರಂತ ಅಂತ್ಯ ಕಂಡಿದ್ದಾರೆ ಎಂದು 'ದಿ ನ್ಯೂಯಾರ್ಕ್​ ಟೈಮ್ಸ್'​ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ದಿನ ಕಳೆದಂತೆ ಇರಾನ್‌ನಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ತೀವ್ರ ಪ್ರತಿಭಟನೆಗಳಲ್ಲಿ ಅನೇಕ ಮಂದಿ ಸಾವಿಗೀಡಾಗಿದ್ದು, 18,400ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಘೋಷಣೆಗಳು ತಾರಕಕ್ಕೇರಿದ್ದು, ಇರಾನ್‌ನಲ್ಲಿ ಜನರು ಸರ್ಕಾರವನ್ನು ಭಾರೀ ವಿರೋಧಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕ, ಮಧ್ಯಪ್ರವೇಶಿಸುವುದಾಗಿಯೂ ಇರಾನ್​ಗೆ ಈಗಾಗಲೇ ಎಚ್ಚರಿಸಿದೆ.
ಇರಾನ್​ಗೆ ಖಡಕ್ ಎಚ್ಚರಿಕೆ ರವಾನಿಸಿರುವ ಅಮೆರಿಕ​, ಅಲ್ಲಿನ ಸ್ಥಿತಿಗತಿಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ತಮ್ಮ ಬಲಿಷ್ಠ ಸೇನೆಯನ್ನು ಬಿಟ್ಟು ದಾಳಿ ನಡೆಸುವುದಾಗಿ ಟ್ರಂಪ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ಲಾಮಿಕ್​ ರಾಷ್ಟ್ರಗಳು ಇದೀಗ ಅಲರ್ಟ್​ ಆಗಿವೆ. ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸದಂತೆ ಅಮೆರಿಕವನ್ನು ತಡೆಯಲು ಸೌದಿ ಅರೇಬಿಯಾ, ಕತಾರ್ ಮತ್ತು ಒಮಾನ್ ದೇಶಗಳು ಟ್ರಂಪ್​ ಜತೆಗೆ ಮಾತುಕತೆ ಮಾಡಿದ್ದಾಗಿ ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ.
ಈ ಬಗ್ಗೆ ಸೌದಿ ಅರೇಬಿಯಾದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, "ಇರಾನ್​ನ ರಾಜಧಾನಿ ಟೆಹ್ರಾನ್​ನಲ್ಲಿ ಪ್ರತಿಭಟನೆಗಳಿಂದ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ ಮೇಲೆ ದಾಳಿ ಮಾಡದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮನವೊಲಿಸಲು ಮೂರು ಗಲ್ಫ್​ ರಾಷ್ಟ್ರಗಳು ಭಾರೀ ಪ್ರಯತ್ನ ನಡೆಸಿವೆ" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).