ವಿಮಾನದೊಳಗೆ ಬಂದ ಸೊಳ್ಳೆಯಿಂದ ಜರ್ಮಿನಿ ವಿಮಾನ ನಿಲ್ದಾಣ ಸಿಬ್ಬಂದಿ ಸಾವು
ಜರ್ಮನಿ: ಕೇವಲ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಮಾರಕ ರೋಗವೊಂದು ಅಪ್ಪಳಿಸಿ ಇಬ್ಬರು ಸಾವನ್ನಪ್ಪಿರುವ ಬೆಚ್ಚಿಬೀಳಿಸುವ ಘಟನೆ ಜರ್ಮನಿಯಲ್ಲಿ ವರದಿಯಾಗಿದೆ. ಹೌದು, ಜರ್ಮನಿಯ ಅತಿ ದೊಡ್ಡ ಹಾಗೂ ಜನನಿಬಿಡ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ (Airport Malaria) ಯಾರೂ ನಿರೀಕ್ಷಿಸದ ಅಚ್ಚರಿಯ ಹಾಗೂ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.
ಮಲೇರಿಯಾ ಪೀಡಿತ ದೇಶಗಳಿಗೆ ಕಾಲಿಡದಿದ್ದರೂ, ವಿಮಾನ ನಿಲ್ದಾಣದ ಒಟ್ಟು ಆರು ಮಂದಿ ಕಾರ್ಮಿಕರಿಗೆ ನಿಗೂಢವಾಗಿ ಮಲೇರಿಯಾ ಸೋಂಕು ತಗುಲಿದೆ. ಈ ಪೈಕಿ ಈಗಾಗಲೇ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ವಿಮಾನಯಾನ ಸಿಬ್ಬಂದಿಯನ್ನು ಹಾಗೂ ಆರೋಗ್ಯ ಇಲಾಖೆಯನ್ನು ನಡುಗಿಸಿದೆ.
ವಿಮಾನದೊಳಗೆ ಬಂದಿದ್ದ ಆ ಅತಿಥಿ ಯಾರು?
ಜರ್ಮನ್ ಆರೋಗ್ಯ ಅಧಿಕಾರಿಗಳು ಹಾಗೂ ದೇಶದ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ (RKI) ನೀಡಿರುವ ಮಾಹಿತಿಯ ಪ್ರಕಾರ, ಉಷ್ಣವಲಯದ ದೇಶಗಳಿಂದ ಹಾರಿಬಂದ ವಿಮಾನದೊಳಗೆ ಅಡಗಿಕೊಂಡು ಬಂದಿದ್ದ ಸೋಂಕಿತ ಅನಾಫಿಲಿಸ್ ಸೊಳ್ಳೆಯೇ ಈ ಅನಾಹುತಕ್ಕೆ ಮೂಲ ಕಾರಣ ಎನ್ನಲಾಗಿದೆ.
ಸೂಟ್‌ಕೇಸ್ ಒಳಗೆ ಅಥವಾ ವಿಮಾನದ ಸೀಟುಗಳ ನಡುವೆ ಕುಳಿತು ಜರ್ಮನಿಗೆ ಬಂದ ಈ ಸೊಳ್ಳೆ, ವಿಮಾನ ನಿಲ್ದಾಣದ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಕಚ್ಚಿದೆ. ಸ್ಥಳೀಯವಾಗಿ ಯಾರಿಗೂ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ಈ ರೀತಿಯ ಸೋಂಕು ತಗುಲುವುದನ್ನು ಏರ್‌ಪೋರ್ಟ್ ಮಲೇರಿಯಾ ಎಂದು ಕರೆಯಲಾಗುತ್ತದೆ. ಜರ್ಮನಿಯಲ್ಲಿ 1950ರ ದಶಕದ ಬಳಿಕ ಈ ರೀತಿಯ ಸ್ಥಳೀಯ ಮಲೇರಿಯಾ ಪ್ರಕರಣಗಳು ಕಂಡುಬಂದಿರಲಿಲ್ಲವಾದ್ದರಿಂದ, ಈ ಘಟನೆ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ.
ಪರಿಸ್ಥಿತಿ ಗಂಭೀರ: ವಿಮಾನ ನಿಲ್ದಾಣದ ಸುತ್ತಲೂ ಬಲೆ!
ಜುಲೈ ಮಧ್ಯಭಾಗದಲ್ಲಿ ಮೊದಲು ಬೆಳಕಿಗೆ ಬಂದ ಈ ಸೋಂಕಿನಿಂದಾಗಿ ಈಗಾಗಲೇ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಉಳಿದ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪರಿಸ್ಥಿತಿಯ ಗಂಭೀರತೆ ಅರಿತಿರುವ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಏರ್‌ಪೋರ್ಟ್ ಸುತ್ತಲೂ ವಿಶೇಷ ಸೊಳ್ಳೆ ಬಲೆಗಳನ್ನು ಅಳವಡಿಸಿದೆ. ಸಿಬ್ಬಂದಿಗೆ ಎಚ್ಚರಿಕೆ ನೀಡಿ, ಯಾವುದೇ ಜ್ವರ ಅಥವಾ ಆಯಾಸದ ಲಕ್ಷಣಗಳು ಕಂಡುಬಂದರೂ ತಕ್ಷಣ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಮಲೇರಿಯಾ ಎಂದರೆ ಕೇವಲ ಸಣ್ಣ ಜ್ವರವಲ್ಲ!
ಸಾಮಾನ್ಯವಾಗಿ ಮಲೇರಿಯಾವನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಗುಣಪಡಿಸಬಹುದು. ಆದರೆ ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆ ಮಾನವನನ್ನು ಒಮ್ಮೆ ಕಚ್ಚಿದರೂ ಸಾಕು, ಪರಾವಲಂಬಿ ಸೋಂಕು ಮೈಯೆಲ್ಲಾ ಹಬ್ಬುತ್ತದೆ. ವಿಪರೀತ ಜ್ವರ, ತೀವ್ರ ಶೀತ ಅಥವಾ ನಡುಕತಲೆನೋವು, ಮೈಕೈ ನೋವು ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು ತೀವ್ರವಾದ ಆಯಾಸ ಹಾಗೂ ನಿದ್ರಾಹೀನತೆ ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.
ಸೊಳ್ಳೆ ಕಚ್ಚಿದ 7 ರಿಂದ 18 ದಿನಗಳ ಒಳಗೆ ಈ ಲಕ್ಷಣಗಳು ಹೊರಬರಲಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಇದು ಪ್ರಾಣಘಾತಕವಾಗಬಹುದು. ಒಟ್ಟಿನಲ್ಲಿ, ಕಣ್ಣಿಗೆ ಕಾಣದ ಪುಟ್ಟ ಸೊಳ್ಳೆಯೊಂದು ಜರ್ಮನಿಯಂತಹ ಮುಂದುವರಿದ ದೇಶದಲ್ಲೂ ಇಂತಹ ದೊಡ್ಡ ಮಟ್ಟದ ಸಾವುಗಳಿಗೆ ಕಾರಣವಾಗಿರುವುದು ವಿಶ್ವಾದ್ಯಂತ ಆತಂಕ ಮೂಡಿಸಿದೆ, (ಏಜನ್ಸೀಸ್).