ಖಮೇನಿ ಹತ್ಯೆಗೆ ಮಹಾ ಪ್ರತೀಕಾರ; ಅಮೇರಿಕ ಸೇನಾ ನೆಲೆಗಳು ಧ್ವಂಸ!ಇರಾನ್‌ನ 'ಖದರ್' ಕ್ಷಿಪಣಿಗಳ ಆರ್ಭಟಕ್ಕೆ ಬೆಚ್ಚಿಬಿದ್ದ ಮಿತ್ರಪಡೆ!
ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಗೆ ಪ್ರತೀಕಾರವಾಗಿ ಇರಾನ್(Iran Attack) ಈಗ ನರಕದ ಬಾಗಿಲುಗಳನ್ನು ತೆರೆದಿದೆ. ಇಂದು ಬೆಳಗಿನ ಜಾವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೇರಿಕಾ ಮತ್ತು ಇಸ್ರೇಲ್ ಗುರಿಗಳ ಮೇಲೆ ಇತಿಹಾಸದಲ್ಲೇ ಅತ್ಯಂತ ಭಯಾನಕ ಎನ್ನಲಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಆರಂಭಿಸಿದೆ.
ಆಪರೇಷನ್ ಟ್ರೂ ಪ್ರಾಮಿಸ್-5: ದುಬೈ ಮತ್ತು ಕತಾರ್‌ನಲ್ಲಿ ಸ್ಫೋಟದ ಸದ್ದು
ಇರಾನ್ ತನ್ನ ಐದನೇ ಹಂತದ ಕಾರ್ಯಾಚರಣೆಯನ್ನು ಘೋಷಿಸಿದ್ದು, ಯುಎಇ (UAE) ಮತ್ತು ಕತಾರ್‌ನಲ್ಲಿರುವ ಅಮೇರಿಕಾ ಮಿತ್ರಪಡೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ದುಬೈ ಮತ್ತು ಕತಾರ್ ರಾಜಧಾನಿ ದೋಹಾದಲ್ಲಿ ಭೀಕರ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಅಮೇರಿಕಾಕ್ಕೆ ಸಾಥ್ ನೀಡುವ ನೆರೆಹೊರೆಯ ರಾಷ್ಟ್ರಗಳಿಗೆ ಶತ್ರುಗಳ ಪರ ನಿಂತರೆ ಪರಿಣಾಮ ಭೀಕರವಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಇರಾನ್ ಈ ಮೂಲಕ ನೀಡಿದೆ.
ಜೆಬೆಲ್ ಅಲಿ ಮತ್ತು ಕುವೈತ್ ನೆಲೆಗಳ ಧ್ವಂಸ
IRGC ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ,
ಜೆಬೆಲ್ ಅಲಿ (ದುಬೈ): ಅಮೇರಿಕಾ ನೌಕೆಗಳಿಗೆ ಮದ್ದುಗುಂಡುಗಳನ್ನು ಸಾಗಿಸುತ್ತಿದ್ದ ಬೃಹತ್ ಹಡಗಿನ ಮೇಲೆ ನಾಲ್ಕು ಡ್ರೋನ್‌ಗಳು ದಾಳಿ ನಡೆಸಿದ್ದು, ಹಡಗು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ.
ಕುವೈತ್ ನೆಲೆ: ಕುವೈತ್‌ನ ಅಬ್ದುಲ್ಲಾ ಮುಬಾರಕ್ ಪ್ರದೇಶದಲ್ಲಿರುವ ಅಮೇರಿಕಾ ನೌಕಾನೆಲೆಯ ಮೇಲೆ 4 ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು 12 ಡ್ರೋನ್‌ಗಳು ಅಪ್ಪಳಿಸಿವೆ. ಇಲ್ಲಿನ ಮೂಲಸೌಕರ್ಯಗಳು ಸಂಪೂರ್ಣ ನಾಶವಾಗಿದ್ದು, ಹಲವಾರು ಅಮೇರಿಕಾ ಸೈನಿಕರು ಸಾವುನೋವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹಿಂದೂ ಮಹಾಸಾಗರ: ಅಮೇರಿಕಾ ಹಡಗುಗಳಿಗೆ ಇಂಧನ ಪೂರೈಸುತ್ತಿದ್ದ MST-ಕ್ಲಾಸ್ ಯುದ್ಧ ನೌಕೆಯ ಮೇಲೆ ಇರಾನ್‌ನ ಖದರ್ 380 ಕ್ಷಿಪಣಿಗಳು ದಾಳಿ ನಡೆಸಿವೆ.
ದುಬೈ ಏರ್‌ಪೋರ್ಟ್ ಮತ್ತು ಬುರ್ಜ್ ಅಲ್ ಅರಬ್ ಮೇಲೆ ದಾಳಿ
ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇರಾನ್ ಗುರಿಯಾಗಿಸಿಕೊಂಡಿದ್ದು, ಸದ್ಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೆ, ದುಬೈನ ಐಕಾನಿಕ್ ಪಾಮ್ ಐಲ್ಯಾಂಡ್ ಮತ್ತು ಐಷಾರಾಮಿ ಹೋಟೆಲ್ ಬುರ್ಜ್ ಅಲ್ ಅರಬ್ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ನರಕದ ಬಾಗಿಲು ತೆರೆದಿದ್ದೇವೆ: ಇರಾನ್ ಎಚ್ಚರಿಕೆ
ತನ್ನ ಸರ್ವೋಚ್ಚ ನಾಯಕ ಖಮೇನಿ ಅವರನ್ನು ಆಪರೇಷನ್ ಎಪಿಕ್ ಫ್ಯೂರಿ ಮೂಲಕ ಹತ್ಯೆ ಮಾಡಿದ ಅಮೇರಿಕಾ ಮತ್ತು ಇಸ್ರೇಲ್‌ಗೆ ಇರಾನ್ ತಕ್ಕ ಶಾಸ್ತಿ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಟೆಲಿಗ್ರಾಮ್‌ನಲ್ಲಿ ಸಂದೇಶ ಹಂಚಿಕೊಂಡಿರುವ IRGC, ನಮ್ಮ ಇಮಾಮ್ ಅವರ ಕೊಲೆಗಡುಕರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಶತ್ರುಗಳ ಮೇಲೆ ಇತಿಹಾಸದಲ್ಲೇ ಕಾಣದ ಅತ್ಯಂತ ಕ್ರೂರ ಆಕ್ರಮಣಕಾರಿ ಕಾರ್ಯಾಚರಣೆ ಇದಾಗಿರಲಿದೆ ಎಂದು ಗುಡುಗಿದೆ.
ಜಾಗತಿಕ ಆತಂಕ ಮತ್ತು ವಿಶ್ವಸಂಸ್ಥೆಯ ಹಸ್ತಕ್ಷೇಪ
ಈ ಭೀಕರ ಬೆಳವಣಿಗೆಯಿಂದಾಗಿ ಇಡೀ ಜಗತ್ತು ಆತಂಕದಲ್ಲಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ತಕ್ಷಣವೇ ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಯುರೋಪಿಯನ್ ಯೂನಿಯನ್ ಮತ್ತು ರಷ್ಯಾ ಕೂಡ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಶಾಂತಿ ಕಾಪಾಡುವಂತೆ ಮನವಿ ಮಾಡಿವೆ. ಒಂದು ವೇಳೆ ಈ ಯುದ್ಧ ಮುಂದುವರಿದರೆ ಜಾಗತಿಕ ಭದ್ರತೆ ಮತ್ತು ಆರ್ಥಿಕತೆ ಮೇಲೆ ಚೇತರಿಸಿಕೊಳ್ಳಲಾಗದ ಹೊಡೆತ ಬೀಳಲಿದೆ.
ಮುಂದೇನು..?
ಇರಾನ್‌ನ ಈ ಸರಣಿ ದಾಳಿಗೆ ಅಮೇರಿಕಾ ಮತ್ತು ಇಸ್ರೇಲ್ ಯಾವ ರೀತಿ ಪ್ರತಿಕ್ರಿಯ ನೀಡಲಿವೆ ಎಂಬುದು ಈಗ ಕುತೂಹಲದ ಸಂಗತಿಯಾಗಿದೆ. ಮಧ್ಯಪ್ರಾಚ್ಯದ ಆಕಾಶ ಈಗ ಕ್ಷಿಪಣಿಗಳಿಂದ ತುಂಬಿಹೋಗಿದ್ದು, ಮೂರನೇ ಮಹಾಯುದ್ಧದ ಭೀತಿ ಎದುರಾಗಿದೆ,(ಏಜೆನ್ಸೀಸ್).