- ಭಾರತದಿಂದ ಶ್ರೀಲಂಕಾಕ್ಕೆ ಮರಳುವ ನಿರಾಶ್ರಿತರಿಗೆ ಸುಲಭ ದಾರಿ
- ತಮಿಳುನಾಡಿನಲ್ಲಿ ಸುಮಾರು 90 ಸಾವಿರ ಶ್ರೀಲಂಕಾ ನಿರಾಶ್ರಿತರು
- ಭದ್ರತಾ ಪರಿಶೀಲನೆ ಬಳಿಕ ತಾತ್ಕಾಲಿಕ ಪಾಸ್‌ಪೋರ್ಟ್‌ನಲ್ಲಿ ಹೋಗಬಹುದು
Sri Lanka refugees: ಭಾರತದಲ್ಲಿ ನೆಲೆಸಿರುವ ಶ್ರೀಲಂಕಾ ನಿರಾಶ್ರಿತರು ಸ್ವಯಂಪ್ರೇರಿತವಾಗಿ ತವರಿಗೆ ವಾಪಸ್ ಹೋಗಲು ಅನುಕೂಲವಾಗುವಂತೆ ಶ್ರೀಲಂಕಾ ಸರ್ಕಾರ ಇಮಿಗ್ರೇಷನ್ ಪ್ರಕ್ರಿಯೆಯನ್ನು ಸುಲಭ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಸಂಸತ್‌ನಲ್ಲಿ ಸರ್ಕಾರ ಮಾಹಿತಿ ನೀಡಿದೆ.
ಇನ್ನು ಸಂಸತ್‌ನಲ್ಲಿ, ವಿರೋಧ ಪಕ್ಷದ ಪ್ರಶ್ನೆಗೆ ಉತ್ತರಿಸಿದ ಸಾರ್ವಜನಿಕ ಭದ್ರತಾ ಸಚಿವ ಆನಂದ ವಿಜೇಪಾಲ, ಭದ್ರತಾ ಪರಿಶೀಲನೆ ಬಳಿಕ ನಿರಾಶ್ರಿತರಿಗೆ ಶ್ರೀಲಂಕಾಕ್ಕೆ ವಾಪಸ್ ಬರಬಹುದು. ಅಕಕ್ಕೆ ಅವಕಾಶ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಎಂದಿದ್ದಾರೆ. ಭಾರತದಿಂದ ವಾಪಸ್ ಹೋಗಲು ಬಯಸುವವರು ಚೆನ್ನೈನಲ್ಲಿರುವ ಶ್ರೀಲಂಕಾ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಇನ್ನೂ 90 ಸಾವಿರ ನಿರಾಶ್ರಿತರು
ಈ ಜನಾಂಗೀಯ ಸಂಘರ್ಷ ಶ್ರೀಲಂಕಾದಲ್ಲಿ 1983ರಲ್ಲಿ ಆರಂಭವಾಗಿದೆ. ಎಲ್‌ಟಿಟಿಇ ಹಾಗೂ ಸರ್ಕಾರದ ನಡುವಿನ ಮೂರು ದಶಕಗಳ ಸುದೀರ್ಘ ಯುದ್ಧದಿಂದಾಗಿ ಸಾವಿರಾರು ಮಂದಿ ತಮಿಳುನಾಡಿಗೆ ಬಂದಿದ್ದರು. 2002ರಿಂದ 2022ರ ನಡುವೆ ಸುಮಾರು 18 ಸಾವಿರ ಮಂದಿ ಶ್ರೀಲಂಕಾಕ್ಕೆ ವಾಪಸ್ ಹೋಗಿದ್ದಾರೆ. ಆದರೆ ಇನ್ನೂ ಸುಮಾರು 90 ಸಾವಿರ ನಿರಾಶ್ರಿತರು ತಮಿಳುನಾಡಿನಲ್ಲೇ ಬದುಕುತ್ತಿದ್ದಾರೆ.
ಪಾಸ್‌ಪೋರ್ಟ್ ಇಲ್ಲದವರಿಗೂ ವಿಶೇಷ ವ್ಯವಸ್ಥೆ
ವಾಪಸ್ ತೆರಳುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಶ್ರೀಲಂಕಾ ಸರ್ಕಾರ ಈ ತಿಂಗಳ ಆರಂಭದಲ್ಲೇ ವಿಶೇಷ ವಲಸೆ ವ್ಯವಸ್ಥೆಗೆ ಅಸ್ತು ಎಂದತ್ತು. ಯುಎನ್ ನಿರಾಶ್ರಿತರ ಸಂಸ್ಥೆ ಯುಎನ್‌ಹೆಚ್‌ಸಿಆರ್ ಸಹಯೋಗದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. 2006ರ ಆಗಸ್ಟ್ 1ಕ್ಕೂ ಮೊದಲು ಪಾಸ್‌ಪೋರ್ಟ್ ಇಲ್ಲದೆ ಶ್ರೀಲಂಕಾದಿಂದ ಬಂದವರನ್ನು ರಾಜ್ಯ ಗುಪ್ತಚರ ಸೇವೆ ಮೂಲಕ ಭದ್ರತಾ ಪರಿಶೀಲನೆ ನಡೆಸುತ್ತಾರೆ. ಕೊಲೆ, ದೇಶದ್ರೋಹ ಸೇರಿದಂತೆ ಗಂಭೀರ ಅಪರಾಧ ಆರೋಪಗಳಿಲ್ಲ ಎಂಬುದು ದೃಢಪಟ್ಟರೆ ಅವರಿಗೆ ಶ್ರೀಲಂಕಾ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ.
ಕಳೆದ ಮೇನಲ್ಲಿ ಭಾರತದಿಂದ ಜಾಫ್ನಾಕ್ಕೆ ಮರಳಿದ್ದ 75 ವರ್ಷದ ಶ್ರೀಲಂಕಾ ನಿರಾಶ್ರಿತರೊಬ್ಬರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿತ್ತು. ಇದರಿಂದ ನಿರಾಶ್ರಿತರ ವಾಪಸ್ ಹೋಗುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದೀಗ ಸರ್ಕಾರ ಪ್ರಕ್ರಿಯೆಯನ್ನು ಸರಳಗೊಳಿಸಲು ಮುಂದಾಗಿದೆ. ಅಗತ್ಯ ದಾಖಲೆಗಳನ್ನು ಮುಂಚಿತವಾಗಿಯೇ ನೀಡುವ ವ್ಯವಸ್ಥೆಗೆ ವಿರೋಧ ಪಕ್ಷವೂ ಸಹಕಾರ ನೀಡುವುದಾಗಿ ತಿಳಿಸಿದೆ,(ಏಜೆನ್ಸೀಸ್).