- ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ವೋಕ್ಸ್‌ವ್ಯಾಗನ್
- 4 ತಯಾರಕ ಫ್ಯಾಕ್ಟರಿಗಳನ್ನು ಶಾಶ್ವತವಾಗಿ ಮುಚ್ಚಲು ನಿರ್ಧಾರ
- ಸಂಸ್ಥೆಯ ನಿರ್ಧಾರದಿಂದ 1 ಲಕ್ಷ ಉದ್ಯೋಗಿಗಳು ವಜಾ ಸಾಧ್ಯತೆ
ಬರ್ಲಿನ್: ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ಜರ್ಮನ್ ಕಂಪನಿ ವೋಕ್ಸ್‌ವ್ಯಾಗನ್ (Volkswagen), ಇದೀಗ ಶಾಕಿಂಗ್ ಎನ್ನುವಂತೆ ತನ್ನ ನಾಲ್ಕು ಫ್ಯಾಕ್ಟರಿಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬರೋಬ್ಬರಿ ನಾಲ್ಕು ಕಾರು ತಯಾರಕ ಘಟಕಗಳನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಿರುವ ವೋಕ್ಸ್‌ವ್ಯಾಗನ್, ಸುಮಾರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ. ಚೀನಾ ಪ್ರತಿಸ್ಪರ್ಧಿಗಳಿಂದ ಎದುರಾಗುತ್ತಿರುವ ತೀವ್ರ ಪೈಪೋಟಿ ಹಾಗೂ ಅಮೆರಿಕಕ್ಕೆ ಕಾರು ಆಮದು ಮಾಡಿಕೊಳ್ಳುವ ಮೇಲಿನ ಹೆಚ್ಚಿನ ಸುಂಕ ಮತ್ತು ಯುರೋಪ್‌ನಲ್ಲಿ ಕುಸಿಯುತ್ತಿರುವ ಮಾರಾಟವೇ ಇದಕ್ಕೆ ದೊಡ್ಡ ಕಾರಣ ಎಂದು ತಿಳಿಸಲಾಗಿದೆ.
89 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವೋಕ್ಸ್‌ವ್ಯಾಗನ್ ಸಂಸ್ಥೆಯನ್ನು ಮರುಸಂಘಟಿಸಲು ಕಂಪನಿಯ ನಾಯಕತ್ವ ಮುಂದಾಗಿದೆ. ಈ ಹೊಸ ಯೋಜನೆಯಡಿಯಲ್ಲಿ, ಹೆಸರಾಂತ ಬ್ರ್ಯಾಂಡ್ ಮತ್ತು ಅದರ ಇತರ ಚಟುವಟಿಕೆಗಳನ್ನು ಪ್ರತ್ಯೇಕ ಘಟಕಗಳಾಗಿ ವಿಭಜಿಸಲು ನಿರ್ಧರಿಸಲಾಗಿದೆ. ಕಂಪನಿಯ ಸಿಇಒ ಆಲಿವರ್ ಬ್ಲೂಮ್, ಈಗಾಗಲೇ ಹಿರಿಯ ಅಧಿಕಾರಿಗಳ ಮುಂದೆ ಈ ಪ್ರಸ್ತಾಪವನ್ನು ಮಂಡಿಸಿದ್ದು, ಜುಲೈ 9ರಂದು ನಡೆಯಲಿರುವ ಕಂಪನಿಯ ಮಹತ್ವದ ಸಭೆಯಲ್ಲಿ ಈ ಬಗ್ಗೆ ಕೊನೆಯದಾಗಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ತೀವ್ರ ವಿರೋಧ ಭೀತಿ
ಕಂಪನಿಯ ಈ ದಿಢೀರ್ ನಿರ್ಧಾರಕ್ಕೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. 2025ರ ಆರ್ಥಿಕ ವರ್ಷದ ಅಂಕಿ ಅಂಶಗಳ ಪ್ರಕಾರ, ವೋಕ್ಸ್‌ವ್ಯಾಗನ್ ಜಾಗತಿಕವಾಗಿ 6,67,164 ಉದ್ಯೋಗಿಗಳನ್ನು ಹೊಂದಿದ್ದು, ಅದರಲ್ಲಿ ಶೇ.43ರಷ್ಟು ಮಂದಿ ಜರ್ಮನಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಮೊದಲೇ ಸಿಇಒ ಆಲಿವರ್ ಬ್ಲೂಮ್, 2024ರಲ್ಲಿಯೇ ಜರ್ಮನಿಯ ಪ್ಲಾಂಟ್‌ಗಳನ್ನು ಮುಚ್ಚಲು ಪ್ರಯತ್ನಿಸಿದ್ದರು. ಆದರೆ, ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಅದನ್ನು ಹಿಂಪಡೆಯಲಾಯಿತು.
ಚೀನಾ ಆಟೋಮೊಬೈಲ್ ಕಂಪನಿಗಳಿಂದ ಪೈಪೋಟಿ
ಚೀನಾದ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕರೊಂದಿಗೆ ಸ್ಪರ್ಧಿಸಲು ಜಾಗತಿಕ ಮಟ್ಟದ ಪ್ರಮುಖ ಆಟೋಮೊಬೈಲ್ ಕಂಪನಿಗಳು ಹರಸಾಹಸ ಪಡುವಂತಾಗಿದೆ. ಚೀನಾ ಮಾರುಕಟ್ಟೆಯಲ್ಲಿ ಚೀನಿಯೇತರ ಕಾರು ಕಂಪನಿಗಳ ಪಾಲು 2020ರಲ್ಲಿದ್ದ ಶೇ.57ರಿಂದ 2025ರ ವೇಳೆಗೆ ಶೇ.32ಕ್ಕೆ ಕುಸಿತ ಕಂಡಿದೆ. ಇದು ವ್ಯಾಪಾರ-ವಹಿವಾಟಿನಲ್ಲಿ ದೊಡ್ಡ ಅಂತರವನ್ನು ನೀಡಿದೆ.
ವರ್ಷಗಳ ಕಾಲ ಚೀನಾ ನೆಲದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದ್ದ ವೋಕ್ಸ್‌ವ್ಯಾಗನ್, 2024ರಲ್ಲಿ ಎರಡನೇ ಸ್ಥಾನಕ್ಕೆ ಮತ್ತು 2025ರಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು. ಈ ಬಿಕ್ಕಟ್ಟು ಈಗ ಬಿಎಂಡಬ್ಲ್ಯೂನಂತಹ ಪ್ರೀಮಿಯಂ ಬ್ರ್ಯಾಂಡ್‌ಗಳಿಗೂ ಹರಡಿದೆ. ಮತ್ತೊಂದೆಡೆ, ಚೀನಾ ಮೂಲದ ಕಂಪನಿಗಳು ಜಾಗತಿಕವಾಗಿ ಹಬ್ಬಿಕೊಂಡಿದ್ದು, ವೋಕ್ಸ್‌ವ್ಯಾಗನ್‌ನ ಸ್ವಂತ ಮಾರುಕಟ್ಟೆಯಾದ ಯುರೋಪ್‌ನಲ್ಲಿಯೇ ವೇಗವಾಗಿ ಬೆಳೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ವೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಇತಿಹಾಸದಲ್ಲೇ ಹಿಂದೆಂದೂ ನೋಡದ ಬಿಕ್ಕಟ್ಟಿಗೆ ದೂಡಿದೆ,(ಏಜೆನ್ಸೀಸ್).