ಭದ್ರತಾ ಪಡೆಗಳು ಫೈರಿಂಗ್ ಮಾಡ್ತಿರುವ ದೃಶ್ಯ
ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(PoK) ಸರ್ಕಾರ ಜಂಟಿ ಅವಾಮಿ ಕ್ರಿಯಾ ಸಮಿತಿಯನ್ನು(ಜೆಎಎಸಿ) ನಿಷೇಧಿಸಿದ ಬಳಿಕ ಪ್ರತಿಭಟನೆ ಭುಗಿಲೆದ್ದಿದ್ದು, ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಭಾರಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 30 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಮಂಗಳವಾರ(ಜೂ. 09) ವರದಿಯಾಗಿದೆ.
ಜಂಟಿ ಅವಾಮಿ ಕ್ರಿಯಾ ಸಮಿತಿ ಆ ಪ್ರದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಕುಂದುಕೊರತೆಗಳ ಕುರಿತು ಪ್ರತಿಭಟನೆಗಳನ್ನು ಮುನ್ನಡೆಸುತ್ತಿರುವ ಪ್ರಮುಖ ನಾಗರಿಕ ಸಮಾಜದ ಒಕ್ಕೂಟವಾಗಿದೆ. ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿ ಕಳೆದ ವಾರ ಅಧಿಕಾರಿಗಳು ಜೆಎಎಸಿಯನ್ನು ನಿಷೇಧಿಸಿದ್ದರು ಎನ್ನಲಾಗಿದೆ.
ಶುಕ್ರವಾರ ರಾತ್ರಿ ವ್ಯಾಪಾರಿಯೊಬ್ಬರ ಮೇಲೆ ಪೊಲೀಸರು ಗುಂಡು ಹಾರಿಸಿ ಕೊಂದ ಬಳಿಕ ಉದ್ವಿಗ್ನತೆ ಭುಗಿಲೆದ್ದಿದೆ. ನಂತರ ಭಾನುವಾರ ರಾವಲಕೋಟ್ ನಗರ ಸೇರಿ ಇಡೀ ಪ್ರದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಪಾಕ್ ಸರ್ಕಾರದ ವಿರುದ್ಧ ನಾಗರಿಕರು ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ.
ವ್ಯಾಪಾರಿಯ ಶವವನ್ನು ಇರಿಸಲಾಗಿದ್ದ ಆಸ್ಪತ್ರೆಯ ಶವಾಗಾರದ ಹೊರಗೆ ಜೆಎಎಸಿ ಬೆಂಬಲಿಗರು ಜಮಾಯಿಸಿದ್ದು, ಅವರನ್ನು ಚದುರಿಸಲು ಭದ್ರತಾ ಪಡೆಗಳು ಸ್ವಯಂಚಾಲಿತ ರೈಫಲ್‌ಗಳು, ಪೆಟ್ರೋಲ್ ಬಾಂಬ್‌ಗಳು ಹಾಗೂ ಇತರ ಆಯುಧಗಳನ್ನು ಬಳಸಿದ್ದಾರೆ. ಇನ್ನೂ ಘರ್ಷಣೆಯಲ್ಲಿ ಕೇವಲ ಮೂವತ್ತು ಜನ ಸತ್ತಿಲ್ಲ, ಅದಕ್ಕಿಂತ ಹೆಚ್ಚಿಗೆ ಸಾವು ನೋವುಗಳು ಸಂಭವಿಸಿವೆ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸಂಘರ್ಷ ಯಾಕೆ?
ಜುಲೈ 27 ರಂದು ನಡೆಯುವ ಪ್ರದೇಶದ ಶಾಸಕಾಂಗ ಸಭೆಗೆ 45 ಸ್ಥಾನಗಳ ಚುನಾವಣೆಯಲ್ಲಿ ನಿರಾಶ್ರಿತರಿಗೆ 12 ಸ್ಥಾನಗಳನ್ನು ಕಾಯ್ದಿರಿಸುವುದನ್ನು ವಿರೋಧಿಸಿ ಜೆಎಎಸಿ ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು ಎನ್ನಲಾಗಿದೆ. ಅದಕ್ಕಾಗಿ ಒಂದು ದಿನದ ಮುಂಚೆ ಆ ಸಂಘಟನೆಯನ್ನು ನಿಷೇಧಿಸಿಲಾಗಿದೆ.
ಜೆಎಎಸಿ ಹಿಂದಿನ ಹಿಂಸಾಚಾರ, ಇಂಟರ್ನೆಟ್ ಸಂಪರ್ಕ ಕಡಿತ, ಗುಂಪಿನ ನಿಷೇಧ, ಹಾಗೆಯೇ ವಿದ್ಯುತ್ ಕೊರತೆ, ಹಣದುಬ್ಬರ, ನಿರುದ್ಯೋಗ, ಸಂಪನ್ಮೂಲ ಶೋಷಣೆ ಮತ್ತು ರಾಜಕೀಯ ಅಂಚಿನಲ್ಲಿರುವಂತಹ ಸಮಸ್ಯೆಗಳನ್ನು ಸಹ ಪ್ರತಿಭಟಿಸುತ್ತಿತ್ತು ಎನ್ನಲಾಗಿದೆ. ಇನ್ನೂ ತನ್ನನ್ನು ಭಯೋತ್ಪಾದಕ ಸಂಘಟನೆ ಎಂಬ ಹಣಪಟ್ಟಿ ಕಟ್ಟುವುದನ್ನು ಅದು ದಬ್ಬಾಳಿಕೆ ಎಂದು ಕರೆದಿದೆ.
ಇನ್ನೂ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಜಂಟಿ ಅವಾಮಿ ಕ್ರಿಯಾ ಸಮಿತಿಯನ್ನು ನಿಷೇಧಿಸುವ ಪ್ರಾದೇಶಿಕ ಸರ್ಕಾರದ ನಿರ್ಧಾರದ ಬಗ್ಗೆ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಗಂಭೀರ ಕಳವಳ ವ್ಯಕ್ತಪಡಿಸಿದೆ (ಏಜೆನ್ಸೀಸ್).