ರಷ್ಯಾದ ಆಗಸದಲ್ಲಿ ಕಾಣಿಸಿಕೊಂಡ 4 ಚಂದ್ರ 
ವಿದೇಶ

ಆಗಸದಲ್ಲಿ ಕಾಣಿಸಿಕೊಂಡ 4 ಚಂದ್ರ: ಈ ಅಪರೂಪದ ವಿದ್ಯಾಮಾನದ ಹಿಂದಿದೆ ಅಚ್ಚರಿಯ ಕಾರಣ! Four Moons

ಪ್ರಮುಖ ಮುಖ್ಯಾಂಶಗಳು

  • ನಮ್ಮ ಆಗಸ ಕೌತುಕದ ತಾಣ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ
  • ಆಕಾಶದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆ ನಮ್ಮಲ್ಲಿ ಸಾವಿರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ
  • ರಷ್ಯಾದ ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ಆಕಾಶದಲ್ಲಿ ರಾತ್ರಿಯ ವೇಳೆ ನಾಲ್ಕು ಚಂದ್ರಗಳು ಕಾಣಿಸಿಕೊಂಡಿವೆ
  • ಸಾಮಾನ್ಯವಾಗಿ ಮೂನ್​ ಡಾಗ್​ ಅಥವಾ ಅಣಕು ಚಂದ್ರ ಎಂದು ಕರೆಯಲ್ಪಡುವ ಅಪರೂಪದ ವಿದ್ಯಮಾನವು
Four Moons : ನಮ್ಮ ಆಗಸ ಕೌತುಕದ ತಾಣ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಆಕಾಶದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯು ಕೂಡ ನಮ್ಮಲ್ಲಿ ಸಾವಿರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇದೀಗ ಅಂಥದ್ದೇ ಕೌತುಕತೆಗೆ ರಷ್ಯಾ ಸಾಕ್ಷಿಯಾಗಿದೆ.
ಹೌದು, ರಷ್ಯಾದ ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ಆಕಾಶದಲ್ಲಿ ರಾತ್ರಿಯ ವೇಳೆ ನಾಲ್ಕು ಚಂದ್ರಗಳು ಕಾಣಿಸಿಕೊಂಡಿವೆ. ಇದನ್ನು ಕೇಳಿದಾಗ ನಿಮಗೆ ವಿಚಿತ್ರ ಎನಿಸಬಹುದು ಆದರೆ, ಇದೇ ಸತ್ಯ. ಅಯ್ಯೋ ನಮ್ಮ ಭೂಮಿಗೆ ಇರೋದು ಒಂದೇ ಚಂದ್ರ ಅಲ್ವಾ? ಅದು ಹೇಗೆ ನಾಲ್ಕು ಚಂದ್ರ ಕಾಣಿಸಿಕೊಳ್ಳಲು ಸಾಧ್ಯ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಬಯಕೆ ನಿಮ್ಮಲ್ಲಿ ಇದ್ದರೆ ಮುಂದೆ ಓದುತ್ತಾ ಸಾಗಿ.
ಅಂದಹಾಗೆ, ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ರಾತ್ರಿಯ ಆಕಾಶದಲ್ಲಿ ನಾಲ್ಕು ಹೊಳೆಯುವ ಚಂದ್ರ ಕಾಣಿಸಿಕೊಂಡಿದ್ದು, ಒಂದು ಅಪರೂಪದ ವಾತಾವರಣದ ವಿದ್ಯಾಮಾನವಾಗಿದೆ. ಇದನ್ನು ಪ್ಯಾರಾಸೆಲೆನೆ ಎಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಅದರಲ್ಲಿ ನಮ್ಮ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನನ್ನು ಸುತ್ತುವರೆದಿರುವ ಬಹು ಪ್ರಕಾಶಮಾನವಾದ ಮಂಡಲಗಳು ನಮ್ಮ ಕಣ್ಣಿಗೆ ಕಾಣುತ್ತವೆ. ಇದನ್ನು ನೋಡಿ ರಷ್ಯಾ ಮಂದಿ ಹುಬ್ಬೇರಿಸಿದ್ದಾರೆ.
ಏನಿದು ಅಪರೂಪದ ವಿದ್ಯಮಾನ?
ಅಂದಹಾಗೆ, ಸಾಮಾನ್ಯವಾಗಿ ಮೂನ್​ ಡಾಗ್​ ಅಥವಾ ಅಣಕು ಚಂದ್ರ ಎಂದು ಕರೆಯಲ್ಪಡುವ ಈ ವಿದ್ಯಮಾನವು ಒಂದು ಖಗೋಳ ಘಟನೆಯಲ್ಲ, ಬದಲಾಗಿ ಚಂದ್ರನ ಬೆಳಕಿನ ವಕ್ರೀಭವನದಿಂದ ಉಂಟಾಗುವ ಒಂದು ದೃಷ್ಟಿ ಭ್ರಮೆಯಾಗಿದೆ. ಹೌದು, ಚಂದ್ರನಿಂದ ಬರುವ ಬೆಳಕು ತೆಳುವಾದ ಹಾಗೂ ಎತ್ತರದಲ್ಲಿರುವ ಸಿರಸ್ ಅಥವಾ ಸಿರೋಸ್ಟ್ರಾಟಸ್ ಮೋಡಗಳ ಮೂಲಕ ಹಾದುಹೋದಾಗ ಪ್ಯಾರಾಸೆಲೆನೆ ರೂಪುಗೊಳ್ಳುತ್ತದೆ. ಅಂದಹಾಗೆ, ಸಿರಸ್​ ಅಂದರೆ, ಭೂಮಿಯಿಂದ ಸುಮಾರು 8,000 ರಿಂದ 12,000 ಮೀಟರ್ ಎತ್ತರದಲ್ಲಿ ರೂಪುಗೊಳ್ಳುವ ತೆಳ್ಳಗಿನ, ಗರಿಗರಿಯಂತಹ ಬಿಳಿ ಮೋಡಗಳಾಗಿದ್ದು, ಇದು ಹಿಮದ ಕಣಗಳಿಂದ ಮಾಡಲ್ಪಟ್ಟಿವೆ. ಸಿರಸ್​ ಮೂಲಕ ಬೆಳಕು ಬಾಗಿದಾಗ, ಚಂದ್ರನ ಎರಡೂ ಬದಿಗಳಲ್ಲಿ ಪ್ರಕಾಶಮಾನವಾದ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕೆಲವೊಮ್ಮೆ ಆಕಾಶದಲ್ಲಿ ಬಹು ಚಂದ್ರ ನೋಟವನ್ನು ನೀಡುತ್ತದೆ. ಅಂದರೆ, ಚಂದ್ರನ ಡೂಪ್ಲಿಕೇಟ್​ಗಳು ಸೃಷ್ಟಿಯಾಗುತ್ತವೆ. ಇದನ್ನು ಬೆಳಕಿನ ಆಟ ಎನ್ನಬಹುದು.
ನಾಸಾ ಪ್ರಕಾರ, ಪ್ಯಾರಾಸೆಲೆನಾಗಳು ಸಾಮಾನ್ಯವಾಗಿ ಚಂದ್ರನಿಂದ ಸುಮಾರು 22 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ಕೋನದಲ್ಲಿ ಕಾಣಿಸಿಕೊಳ್ಳುತ್ತವೆ. ಅವು ಚಂದ್ರನಿಗಿಂತ ಹೆಚ್ಚು ಮಸುಕಾಗಿರುತ್ತವೆ ಮತ್ತು ಚಂದ್ರನು ದಿಗಂತದಲ್ಲಿ ಮಸುಕಾಗಿರುವ ಅವುಗಳನ್ನು ಗಮನಿಸುವುದು ಸುಲಭ, ಏಕೆಂದರೆ ಚಂದ್ರನ ಕಡಿಮೆ ಪ್ರಜ್ವಲಿಸುವಿಕೆಯು ಸುತ್ತಮುತ್ತಲಿನ ಬೆಳಕಿನ ಮಾದರಿಗಳನ್ನು ಹೆಚ್ಚು ಗೋಚರಿಸುವಂತೆ ಮಾಡುತ್ತದೆ.
ಇನ್ನು ಈ ಪ್ರಕಾಶಮಾನವಾದ ಚುಕ್ಕೆಗಳು ಯಾವಾಗಲೂ ಚಂದ್ರನಂತೆಯೇ ದಿಗಂತದ ಮೇಲೆ ಒಂದೇ ಎತ್ತರದಲ್ಲಿರುತ್ತವೆ. ಅವುಗಳ ಆಕಾರ ಮತ್ತು ತೀವ್ರತೆಯು ಮೋಡಗಳಲ್ಲಿನ ಹಿಮಕಣಗಳ ಗಾತ್ರವನ್ನು ಅವಲಂಬಿಸಿರುತ್ತದೆ. ಹಿಮಕಣಗಳ ಗಾತ್ರದಲ್ಲಿ ವ್ಯತ್ಯಾಸಗೊಂಡಾಗ ಅಥವಾ ಬೀಳುವಾಗ ತೂಗಾಡಿದ ಸಂದರ್ಭದಲ್ಲಿ ಪ್ಯಾರಾಸೆಲೆನಾಗಳು ಲಂಬವಾಗಿ ವಿಸ್ತರಿಸಬಹುದು. ಈ ವೇಳೆ ಬೆಳಕಿನ ಸ್ತಂಭಗಳು ಸೃಷ್ಟಿಯಾಗುತ್ತವೆ, (ಏಜೆನ್ಸೀಸ್​).