ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು 
ವಿದೇಶ

ರಷ್ಯಾದ ಮೆಡಿಕಲ್ ಕಾಲೇಜು ಹಾಸ್ಟೆಲ್​ನಲ್ಲಿ ಚಾಕು ಇರಿತ: ನಾಲ್ವರು ಭಾರತೀಯ ವಿದ್ಯಾರ್ಥಿಗಳಿಗೆ ಗಾಯ | knife attack

ಪ್ರಮುಖ ಮುಖ್ಯಾಂಶಗಳು

  • ರಷ್ಯಾದ ಭಾಷ್ಕೋರ್ಟೋಸ್ತಾನ್​ನ ಮೆಡಿಕಲ್ ಕಾಲೇಜಿನಲ್ಲಿ ಚಾಕು ಇರಿತ
  • ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಂಭೀರ ಗಾಯ
  • ಹಾಸ್ಟೆಲ್​ಗೆ ನುಗ್ಗಿ 15 ವರ್ಷದ ಬಾಲಕನಿಂದ ವಿದ್ಯಾರ್ಥಿಗಳ ಮೇಲೆ ದಾಳಿ
ಮಾಸ್ಕೋ: ರಷ್ಯಾದ ಭಾಷ್ಕೋರ್ಟೋಸ್ತಾನ್​ ರಾಜ್ಯದ ವೈದ್ಯಕೀಯ ಕಾಲೇಜಿನ ವಿದೇಶಿ ವಿದ್ಯಾರ್ಥಿಗಳ ಹಾಸ್ಟೆಲ್​ನ ಕ್ರೀಡಾ ಸಭಾಂಗಣದಲ್ಲಿ ಶನಿವಾರ(ಫೆ. 07) ಚಾಕು ಇರಿತ ದಾಳಿ(Knife attack) ನಡೆದಿದ್ದು, ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಾಷ್ಕೋರ್ಟೊಸ್ತಾನ್ ರಾಜಧಾನಿ ಉಫಾದಲ್ಲಿರುವ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಈ ದಾಳಿ ನಡೆದಿದೆ. 15 ವರ್ಷದ ಬಾಲಕನೊಬ್ಬ ಚಾಕುವಿನಿಂದ ಹಾಸ್ಟೆಲ್​ಗೆ ನುಗ್ಗಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾನೆ. ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಮತ್ತು ಆರೋಪಿ ಬಾಲಕನನ್ನು ಬಂಧಿಸಲು ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು, ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ದಾಳಿ ವೇಳೆ ಸ್ವತಃ ಆರೋಪಿ ತನಗೆ ತಾನೇ ಗಾಯವನ್ನು ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನೂ ಘಟನೆ ಬಳಿಕ ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇನ್ನೂ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮಾಸ್ಕೋದಲ್ಲಿನ ಭಾರತೀಯ ರಾಯಭಾರಿ ಕಚೇರಿ, ದುರದೃಷ್ಟಕರ ಘಟನೆ, ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮತ್ತು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ರಾಯಭಾರಿ ಕಚೇರಿ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ಹೇಳಿದೆ.
ಬಾಲಕನ ದಾಳಿಯ ಉದ್ದೇಶವನ್ನು ರಷ್ಯಾದ ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಆರೋಪಿಗೂ ಮತ್ತು ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿಗಳಿಗೆ ಮೊದಲೇ ಸಂಪರ್ಕವಿತ್ತೇ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಆರೋಪಿ ದಾಳಿಕೋರ ನಿಷೇಧಿತ ನವ-ನಾಜಿ ಸಂಘಟನೆಗೆ ಸೇರಿದವನು ಎಂದು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವ ಬಾಜಾ ಚಾನೆಲ್ ತಿಳಿಸಿದೆ (ಏಜೆನ್ಸೀಸ್).