ಕೊನೆಗೂ, ಅಮೆರಿಕ-ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಏರ್ಪಟ್ಟಿದ್ದು, ಜಾಗತಿಕ ವಲಯ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಯುದ್ಧದ ಭಾಗವಾಗಿದ್ದ ಇಸ್ರೇಲ್ ಕೂಡ ಕದನವಿರಾಮವನ್ನು ಸ್ವಾಗತಿಸಿದೆ. ಸಮರ ದೀರ್ಘಾವಧಿಯವರೆಗೆ ನಡೆದರೆ ಹೇಗೆ ಎಲ್ಲ ರಂಗಗಳು ಪ್ರಭಾವಿತವಾಗಿ, ಜನಸಾಮಾನ್ಯರು ತೀವ್ರ ತೊಂದರೆಗೆ ಸಿಲುಕುತ್ತಾರೆ ಎಂಬುದಕ್ಕೆ ಈ ಯುದ್ಧ ಸಾಕ್ಷಿಯಾಗಿದೆ. ಕಳೆದ 40 ದಿನಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಯಿತು, ಜಾಗತಿಕ ಷೇರುಪೇಟೆಗಳು ನೆಲ ಕಚ್ಚಿದವು, ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಯಿತು, ಎಲ್ಪಿಜಿ ಸಂಕಷ್ಟ ವಿಕೋಪಕ್ಕೆ ಹೋಯಿತು. ದಾಳಿಯಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳು ಕೂಡ ಹಾನಿ ಅನುಭವಿಸಿದವು. ಮೂಲಸೌಕರ್ಯಗಳು ಅಪಾರ ಪ್ರಮಾಣದಲ್ಲಿ ನಷ್ಟವಾದವು. ಆಮದು ಮೇಲಿನ ಅತಿಯಾದ ಅವಲಂಬನೆ ಹೇಗೆ ಪೂರೈಕೆ ಸರಪಳಿಯನ್ನೇ ದುರ್ಬಲಗೊಳಿಸುತ್ತದೆ ಎಂಬುದಕ್ಕೂ ನಿದರ್ಶನವಾಯಿತು. ಇರಾನ್ನ ಹಲವು ನಗರಗಳು ಭಾಗಶಃ ಹಾನಿಗೊಳಗಾಗಿದ್ದು, ಅಲ್ಲಿ ಬದುಕನ್ನು ಹೊಸದಾಗಿ ಆರಂಭಿಸುವ ಸವಾಲು ಇದೆ. ಯುದ್ಧ ಮಕ್ಕಳ ಮಾನಸಿಕತೆಯ ಮೇಲೂ ಗಾಢವಾದ ಪರಿಣಾಮ ಬೀರಿದ್ದು, ಅವರು ಶವಯಾತ್ರೆ ಅನುಕರಣೆಯ ಆಟವನ್ನು ಆಡುತ್ತಿದ್ದಾರೆ. ಯುದ್ಧ ಎಂಬುದು ಹೇಗೆ ಭೀಕರ ಹಾನಿ ಮತ್ತು ಹಾಹಾಕರ ಸೃಷ್ಟಿಸಿತು, ಇಲ್ಲಿದೆ ವಿವರ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಫೆಬ್ರವರಿ 28ರಂದು ಆರಂಭವಾದ ಯುದ್ಧ 40 ದಿನಗಳ ಕಾಲ ನಡೆದು, ಎರಡು ವಾರಗಳ ಕದನವಿರಾಮಕ್ಕೆ ಏಪ್ರಿಲ್ 7ರಂದು ಸಹಿ ಹಾಕಲಾಗಿದೆ. ಇದು ಮೂರು ದೇಶಗಳ ನಡುವಿನ ಯುದ್ಧವಾಗಿದ್ದರೂ, ಬಹುಬೇಗ ಮಧ್ಯಪ್ರಾಚ್ಯಕ್ಕೆ ಹಬ್ಬಿತು. ಸಮರದಲ್ಲಿ ಮಡಿದವರ ಸಂಖ್ಯೆ 7 ಸಾವಿರ ದಾಟಿದೆ. ಈ ಸಂಘರ್ಷವು ಕೇವಲ ರಾಜಕೀಯ ಶಕ್ತಿ ಪ್ರದರ್ಶನವಾಗಿ ಉಳಿಯದೆ, ಲಕ್ಷಾಂತರ ಜನರ ಮೂಲಭೂತ ಬದುಕುವ ಹಕ್ಕನ್ನು ಕಸಿದುಕೊಂಡಿತು. 90 ಸಾವಿರ ಮನೆಗಳು, 760 ಶಾಲೆಗಳು ಹಾಗೂ 307 ಆಸ್ಪತ್ರೆಗಳು ಪೂರ್ಣವಾಗಿ ನಷ್ಟವಾಗಿವೆ. ಇರಾನ್ನ ಪರಮಾಣು ಮತ್ತು ಕ್ಷಿಪಣಿ ಕೇಂದ್ರಗಳು ಹಾಗೂ ಇಸ್ರೇಲ್ನ ರಕ್ಷಣಾ ನೆಲೆಗಳ ಮೇಲೆ ಪರಸ್ಪರ ದಾಳಿಗಳು ನಡೆದಿವೆ. ಪ್ರಮುಖ ನಗರಗಳ ಕಟ್ಟಡಗಳು, ರಸ್ತೆಗಳು ಮತ್ತು ಸಂಪರ್ಕ ಸಾಧನಗಳು ಕ್ಷಿಪಣಿ ದಾಳಿಯಿಂದ ಜರ್ಜರಿತವಾಗಿವೆ. ಯುದ್ಧ ಆರಂಭದ ಮುನ್ನ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 70 ಡಾಲರ್ನ ಆಸುಪಾಸಿನಲ್ಲಿತ್ತು. ಆದರೆ, ಯುದ್ಧದ ಅವಧಿಯಲ್ಲಿ ಇದು 100 ಡಾಲರ್ ಪ್ರತಿ ಬ್ಯಾರೆಲ್ ದಾಟಿತು. ಹೊಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಮತ್ತು ತೈಲ ಕೇಂದ್ರಗಳ ಮೇಲಿನ ದಾಳಿಯಿಂದಾಗಿ ತೈಲ ಬೆಲೆ ಗಗನಕ್ಕೇರಿದೆ. ತೈಲ ಬೆಲೆ ಏರಿಕೆಯು ಸಾರಿಗೆ ವೆಚ್ಚವನ್ನು ಹೆಚ್ಚಿಸಿದ್ದು, ಇದು ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ.
ಈ ಒಂದು ತಿಂಗಳ ಯುದ್ಧಕ್ಕಾಗಿ ಅಮೆರಿಕ ಈಗಾಗಲೇ 25 ಬಿಲಿಯನ್ ಡಾಲರ್ (2.37 ಲಕ್ಷ ಕೋಟಿ ರೂಪಾಯಿ) ವ್ಯಯಿಸಿದೆ. ಅತ್ಯಾಧುನಿಕ ಕ್ಷಿಪಣಿಗಳು, ಯುದ್ಧ ವಿಮಾನಗಳ ಇಂಧನ ಮತ್ತು ಸೇನಾ ನೆಲೆಗಳ ದುರಸ್ತಿಗಾಗಿ ಈ ಮೊತ್ತವನ್ನು ವೆಚ್ಚ ಮಾಡಿದೆ. ಅಮೆರಿಕ ತಾಂತ್ರಿಕವಾಗಿ ಮುಂದುವರಿದರೂ ದುಬಾರಿ ಶಸ್ತ್ರಾಸ್ತ್ರಗಳನ್ನು ಕಳೆದುಕೊಂಡಿದೆ. ಪ್ರಮುಖವಾಗಿ, 12 ಎಂಕ್ಯೂ-9 ರೀಪರ್ ಡ್ರೋನ್ಗಳು ನಾಶವಾಗಿವೆ. ಒಂದು ಡ್ರೋನ್ ಬೆಲೆ ಸರಾಸರಿ 56.5 ಮಿಲಿಯನ್ ಡಾಲರ್ (-ಠಿ;535 ಕೋಟಿ) ಇದೆ. ಒಟ್ಟು 680 ಮಿಲಿಯನ್ ಡಾಲರ್ (-ಠಿ;6,450 ಕೋಟಿ) ನಷ್ಟ ಅನುಭವಿಸಿದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳ ಗಣನೀಯ ಭಾಗವನ್ನು ಅಮೆರಿಕ ಮತ್ತು ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಕಳೆದುಕೊಂಡಿದೆ. 190ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ಲಾಂಚರ್ಗಳು ಮತ್ತು ಉಡಾವಣಾ ಕೇಂದ್ರಗಳು ನಾಶವಾಗಿವೆ. ನೌಕಾಪಡೆಗೆ ಸೇರಿದ 140 ಸಣ್ಣ ಮತ್ತು ಮಧ್ಯಮ ಗಾತ್ರದ ಹಡಗುಗಳು ಹಾಗೂ ವೇಗದ ದೋಣಿಗಳು ಸಮುದ್ರದಲ್ಲಿ ಧ್ವಂಸವಾಗಿವೆ. ಮುಂಬರುವ ದಿನಗಳಲ್ಲಿ, ಕೆಂಪು ಸಮುದ್ರದಲ್ಲಿ ಹಡಗುಗಳ ಸಂಚಾರ ಸುಗಮವಾದರೆ ಮಾರುಕಟ್ಟೆಗಳು ಮುಂದಿನ 3 ರಿಂದ 6 ತಿಂಗಳಲ್ಲಿ ಚೇತರಿಸಿಕೊಳ್ಳಬಹುದು.
ಆರ್ಥಿಕ ಸಮರ
ಇರಾನ್ ಮೇಲೆ ಹೇರಲಾದ ಅಂತಾ ರಾಷ್ಟ್ರೀಯ ಆರ್ಥಿಕ ನಿರ್ಬಂಧಗಳು ಅಲ್ಲಿನ ಸಾಮಾನ್ಯ ಜನರ ದೈನಂದಿನ ಬದುಕನ್ನು ಹೈರಾಣಾಗಿಸಿವೆ. ಯುದ್ಧದ ನಂತರ ಈ ಒತ್ತಡ ಇನ್ನೂ ಹೆಚ್ಚಾಗಿದ್ದು, ಅದರ ಪರಿಣಾಮಗಳು ಘೋರ.
ತಾಂತ್ರಿಕವಾಗಿ ಔಷಧಗಳ ಮೇಲೆ ನಿರ್ಬಂಧವಿಲ್ಲದಿದ್ದರೂ, ಬ್ಯಾಂಕಿಂಗ್ ವ್ಯವಹಾರಗಳ ಮೇಲಿನ ನಿಷೇಧದಿಂದಾಗಿ ಇರಾನ್ ವಿದೇಶಗಳಿಂದ ಔಷಧಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಕ್ಯಾನ್ಸರ್, ಮಧುಮೇಹ ಮತ್ತು ಮಲ್ಟಿಪಲ್ ಸ್ಕೆ್ಲರೋಸಿಸ್ಗೆ ಬೇಕಾದ ಔಷಧಗಳಿಗೆ ತೀವ್ರ ಕೊರತೆ ಎದುರಾಗಿದೆ. ಆಸ್ಪತ್ರೆಗಳಲ್ಲಿರುವ ಎಕ್ಸ್-ರೇ, ಎಂಆರ್ಐ ಸ್ಕಾ್ಯನಿಂಗ್ ಯಂತ್ರಗಳ ಬಿಡಿಭಾಗಗಳು ಸಿಗದೆ ವೈದ್ಯಕೀಯ ಸೇವೆ ಕುಂಠಿತಗೊಂಡಿದೆ.
ಅಮೆರಿಕದ ನಿರ್ಬಂಧಗಳಿಂದಾಗಿ ಇರಾನ್ನ ಕರೆನ್ಸಿ ರಿಯಾಲ್ ಮೌಲ್ಯ ಕುಸಿದಿದೆ. ಹಾಲು, ಮೊಟ್ಟೆ, ಮಾಂಸದಂತಹ ಮೂಲಭೂತ ಆಹಾರ ಪದಾರ್ಥಗಳ ಬೆಲೆ ಪ್ರತಿ ತಿಂಗಳು ಶೇಕಡ 40ರಿಂದ 50ರಷ್ಟು ಹೆಚ್ಚಾಗುತ್ತಿದೆ. ಮಧ್ಯಮ ವರ್ಗದ ಜನರ ಉಳಿತಾಯವು ಶೂನ್ಯವಾಗುತ್ತಿದೆ, ಇದರಿಂದಾಗಿ ಅನೇಕ ಕುಟುಂಬಗಳು ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ವಣವಾಗಿದೆ.
ವಿದೇಶಿ ಹೂಡಿಕೆಗಳು ಸಂಪೂರ್ಣವಾಗಿ ನಿಂತುಹೋಗಿರುವುದರಿಂದ ಇರಾನ್ನ ಕೈಗಾರಿಕಾ ಕ್ಷೇತ್ರ ಸೊರಗುತ್ತಿದೆ. ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಅನೇಕ ಕಾರ್ಖಾನೆಗಳು ಮುಚ್ಚಿವೆ, ಇದರಿಂದ ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಅಗತ್ಯ ವಸ್ತುಗಳಿಗಾಗಿ ಜನರು ಕಾಳಸಂತೆಯನ್ನು ಅವಲಂಬಿಸುವಂತಾಗಿದ್ದು, ಅಲ್ಲಿ ವಸ್ತುಗಳ ಬೆಲೆ ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು.
ಮಕ್ಕಳ ಆಟದಲ್ಲೂ ಮರಣದ ಅನುಕರಣೆ!
ಸಾಮಾನ್ಯವಾಗಿ ಮಕ್ಕಳು ತಾವು ಕಣ್ಣಾರೆ ಕಂಡಿದ್ದನ್ನೇ ಅನುಕರಿಸುತ್ತಾರೆ. ಯುದ್ಧಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಬಾಂಬ್ ದಾಳಿಗಳು, ಆಂಬುಲೆನ್ಸ್ ಗಳ ಸದ್ದು ಮತ್ತು ಪ್ರೀತಿಪಾತ್ರರ ಅಂತ್ಯಕ್ರಿಯೆಗಳನ್ನು ನೋಡಿ ಬೆಳೆಯುವ ಮಕ್ಕಳು, ತಮ್ಮ ಆಟಗಳಲ್ಲಿ ಅದನ್ನೇ ಪ್ರತಿಬಿಂಬಿಸುತ್ತಿದ್ದಾರೆ. ಮಕ್ಕಳು ತಮ್ಮಲ್ಲಿ ಒಬ್ಬನನ್ನು ಹುತಾತ್ಮ ಅಥವಾ ಶವದಂತೆ ಮಲಗಿಸಿ, ಉಳಿದವರು ಅವನನ್ನು ಹೊತ್ತುಕೊಂಡು ಹೋಗುವಂತೆ ನಟಿಸುತ್ತಾರೆ. ಕೆಲವೊಮ್ಮೆ ಅವರು ಕಿರುಚುತ್ತ ಹಳಹಳಿಸುವ ಅಥವಾ ಘೊಷಣೆಗಳನ್ನು ಕೂಗುವ ದೃಶ್ಯಗಳು ಕಂಡುಬಂದಿವೆ. ಇದು ಅವರಿಗೆ ಕೇವಲ ಆಟವಲ್ಲ, ಬದಲಿಗೆ ಅವರ ಸುತ್ತ ನಡೆಯುತ್ತಿರುವ ಭೀಕರ ವಾಸ್ತವವನ್ನು ಜೀರ್ಣಿಸಿಕೊಳ್ಳಲು ಅವರು ಕಂಡುಕೊಂಡ ಒಂದು ಅಸಹಜ ದಾರಿ. ಇಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳ ಮೇಲೆ ಮಾನಸಿಕ ಪರಿಣಾಮಗಳು ಉಂಟಾಗುತ್ತವೆ. ಸಾವು ಮತ್ತು ರಕ್ತಪಾತವು ಅವರಿಗೆ ಸಾಮಾನ್ಯ ಸಂಗತಿಯಾಗಿ ಕಾಣತೊಡಗುತ್ತದೆ.
ಇದು ಅವರಲ್ಲಿ ಸಹಾನುಭೂತಿಯನ್ನು ಕಡಿಮೆ ಮಾಡುತ್ತದೆ. ನಿರಂತರ ಆತಂಕದ ಫಲವಾಗಿ ಮಕ್ಕಳು ನಿದ್ರಾಹೀನತೆ, ದುಸ್ವಪ್ನಗಳು ಮತ್ತು ಹಠಾತ್ ಸಿಟ್ಟಿನಂತಹ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಸಣ್ಣ ವಯಸ್ಸಿನಲ್ಲೇ ಅತಿಯಾದ ದುಃಖವನ್ನು ನೋಡುವುದರಿಂದ, ಮಕ್ಕಳು ಭಾವನಾತ್ಮಕವಾಗಿ ಜಡವಾಗುತ್ತಾರೆ. ಶಾಲೆಗಳ ಮೇಲೆ ದಾಳಿ ಅಥವಾ ಶಾಲೆಗಳನ್ನು ಮಿಲಿಟರಿ ಶಿಬಿರಗಳನ್ನಾಗಿ ಬಳಸುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆಟಿಕೆಗಳ ಬದಲಿಗೆ ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುವುದು ಮತ್ತು ಯುದ್ಧದ ತಂತ್ರಗಳನ್ನು ರ್ಚಚಿಸುವುದು ಅವರ ಬಾಲ್ಯವನ್ನೇ ಕಸಿದುಕೊಳ್ಳುತ್ತದೆ. ಮನಶಾಸ್ತ್ರಜ್ಞರ ಪ್ರಕಾರ, ಸಂಘರ್ಷದ ನಡುವೆ ಬೆಳೆಯುವ ಈ ಮಕ್ಕಳನ್ನು ‘ಕಳೆದುಹೋದ ಪೀಳಿಗೆ’ ಎಂದು ಕರೆಯಲಾಗುತ್ತದೆ. ಇವರು ಬೆಳೆದು ದೊಡ್ಡವರಾದಾಗ ಅವರಲ್ಲಿ ತುಂಬಿರುವ ಕ್ರೋಧ ಮತ್ತು ಆಘಾತವು ಸಮಾಜದಲ್ಲಿ ಮತ್ತಷ್ಟು ಅಸ್ಥಿರತೆಗೆ ಕಾರಣವಾಗಬಹುದು. ವಿಶ್ವಸಂಸ್ಥೆ ವರದಿಗಳ ಪ್ರಕಾರ, ಇಂತಹ ಪ್ರದೇಶಗಳಲ್ಲಿ ಮಕ್ಕಳಿಗೆ ತುರ್ತಾಗಿ ಮಾನಸಿಕ ಸಮಾಲೋಚನೆ ಮತ್ತು ಸುರಕ್ಷಿತ ಆಟದ ಮೈದಾನಗಳ ಅಗತ್ಯವಿದೆ.
ಮೂಲಸೌಕರ್ಯ ನಷ್ಟ
ಇರಾನ್ನ ಪರಮಾಣು ಕೇಂದ್ರಗಳು, ಕ್ಷಿಪಣಿ ಉತ್ಪಾದನಾ ಘಟಕಗಳು ಮತ್ತು 190 ಕ್ಷಿಪಣಿ ಲಾಂಚರ್ಗಳು ಧ್ವಂಸವಾಗಿವೆ. ನೌಕಾಪಡೆಯ 140 ಹಡಗುಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ. ಪ್ರಮುಖ ನಗರಗಳ ಸರ್ಕಾರಿ ಕಟ್ಟಡಗಳು, ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.
ಮಧ್ಯಪ್ರಾಚ್ಯದಲ್ಲಿರುವ ಕನಿಷ್ಠ 17 ಅಮೆರಿಕನ್ ಮಿಲಿಟರಿ ನೆಲೆಗಳು ಹಾನಿಗೊಳಗಾಗಿದ್ದು, ಇದರ ನಷ್ಟ ಸುಮಾರು 800 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಇಸ್ರೇಲ್ನಲ್ಲಿ ಸಾವಿರಾರು ವಸತಿ ಕಟ್ಟಡಗಳು ಮತ್ತು ನಾಗರಿಕ ಮೂಲಸೌಕರ್ಯಗಳು ಇರಾನ್ ಮತ್ತು ಹೆಜ್ಬೊಲ್ಲಾ ಉಡಾಯಿಸಿದ ಕ್ಷಿಪಣಿಗಳಿಂದ ಹಾನಿಗೊಳಗಾಗಿವೆ.