ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿ ಬೇಗಂ ಖಲೀದಾ ಜಿಯಾ 
ವಿದೇಶ

ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆ: ನಾಳೆ ಢಾಕಾಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿ | Jaishankar

ಪ್ರಮುಖ ಮುಖ್ಯಾಂಶಗಳು

  • ಖಲೀದಾ ಜಿಯಾ ಅಂತಿಮ ಸಂಸ್ಕಾರದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗಿ
  • ಬಾಂಗ್ಲಾ 'ಅಪೋಸ್ ಮಾಡದ ನಾಯಕಿ'ಗೆ ಭಾರತದ ವಿದಾಯ
  • ಖಲೀದಾ ಜಿಯಾ ನಿಧನಕ್ಕೆ ಭಾರತದ ಶೋಕ
ನವದೆಹಲಿ: ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್(Jaishankar) ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ MEA, ಬಾಂಗ್ಲಾದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಭಾರತ ಸರ್ಕಾರ ಮತ್ತು ಜನರನ್ನು ಪ್ರತಿನಿಧಿಸಲಿದ್ದಾರೆ. ಅದರಂತೆ ಅವರು ಡಿಸೆಂಬರ್ 31 ರಂದು ಢಾಕಾಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ. 

ಅಂತಿಮ ಸಂಸ್ಕಾರದ ವಿವರ

ಖಲೀದಾ ಜಿಯಾ ಅವರ 'ನಮಾಜ್-ಎ-ಜನಾಜಾ' (ಅಂತ್ಯಕ್ರಿಯೆಯ ಪ್ರಾರ್ಥನೆ) ಬುಧವಾರ ಮಧ್ಯಾಹ್ನ 2 ಗಂಟೆಗೆ ಢಾಕಾದ ಸಂಸತ್ತಿನ ದಕ್ಷಿಣ ಪ್ಲಾಜಾ ಮತ್ತು ಮಣಿಕ್ ಮಿಯಾ ಅವೆನ್ಯೂದಲ್ಲಿ ನಡೆಯಲಿದೆ. ನಂತರ ಸಂಜೆ 3:30 ರ ಸುಮಾರಿಗೆ ಅವರ ಪತಿ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿಯ ಪಕ್ಕದಲ್ಲಿ ಪೂರ್ಣ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಅಲ್ಲದೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಮೂರು ದಿನಗಳ ಕಾಲ ರಾಷ್ಟ್ರ ಶೋಕ ಮತ್ತು ನಾಳೆ (ಬುಧವಾರ) ಸಾರ್ವಜನಿಕ ರಜೆ ಘೋಷಿಸಿದೆ.
ರಾಜತಾಂತ್ರಿಕ ಮಹತ್ವ: ಬಾಂಗ್ಲಾದೇಶದಲ್ಲಿ ಫೆಬ್ರವರಿ 2026 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತ್ತು ಪ್ರಸ್ತುತ ಭಾರತ-ಬಾಂಗ್ಲಾ ಸಂಬಂಧದಲ್ಲಿ ಸವಾಲುಗಳಿರುವ ಸಮಯದಲ್ಲಿ ಜೈಶಂಕರ್​ ಅವರ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.

ಪ್ರಧಾನಿ ಮೋದಿ ಸಂತಾಪ

ಖಲೀದಾ ಜಿಯಾ ನಿಧನಕ್ಕೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, 2015 ರಲ್ಲಿ ಜಿಯಾ ಅವರ ಭೇಟಿಯನ್ನು ಸ್ಮರಿಸಿಕೊಂಡಿದ್ದಾರೆ. ಅವರ ದೃಷ್ಟಿಕೋನ ಮತ್ತು ಪರಂಪರೆ ಭಾರತ-ಬಾಂಗ್ಲಾ ಸಂಬಂಧಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ಆಶಿಸುವುದಾಗಿ ಬರೆದುಕೊಂಡಿದ್ದಾರೆ.
ಬಾಂಗ್ಲಾ ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಅವರ ಕುಟುಂಬ ಮತ್ತು ಬಾಂಗ್ಲಾದೇಶದ ಎಲ್ಲಾ ಜನರಿಗೆ ನಮ್ಮ ಪ್ರಾಮಾಣಿಕ ಸಂತಾಪಗಳು. ದೇವರು ಅವರ ಕುಟುಂಬಕ್ಕೆ ಈ ಅಗಲಿಕೆಯ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಮತ್ತು ಭಾರತ-ಬಾಂಗ್ಲಾದೇಶ ಸಂಬಂಧಗಳಿಗೆ ಅವರು ನೀಡಿದ ಪ್ರಮುಖ ಕೊಡುಗೆಗಳು ಯಾವಾಗಲೂ ಸ್ಮರಣೀಯ, 2015 ರಲ್ಲಿ ಢಾಕಾದಲ್ಲಿ ಅವರೊಂದಿಗಿನ ಆತ್ಮೀಯ ಭೇಟಿಯನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ಅವರ ದೃಷ್ಟಿಕೋನ ಮತ್ತು ಪರಂಪರೆ ನಮ್ಮ ಪಾಲುದಾರಿಕೆಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಖಲೀದಾ ಜಿಯಾ ನಿಧನ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಖಲೀದಾ ಜಿಯಾ ತಮ್ಮ 80 ನೇ ವಯಸ್ಸಿನಲ್ಲಿ ಢಾಕಾದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಡಿಸೆಂಬರ್ ಆರಂಭದಲ್ಲಿ ಪ್ರಧಾನಿ ಮೋದಿ, ಖಲೀದಾ ಜಿಯಾ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಭಾರತವು ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲಿ ಬೆಂಬಲವನ್ನು ನೀಡಲು ಸಿದ್ಧವಾಗಿದೆ ಎಂದು ಬಾಂಗ್ಲಾದೇಶಕ್ಕೆ ಭರವಸೆ ನೀಡಿದ್ದರು.

ಖಲೀದಾ ಜಿಯಾ ಜೀವನ 

ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಖಲೀದಾ ಜಿಯಾ ಕೂಡ ಒಬ್ಬರು. ಹತ್ಯೆಗೀಡಾದ ಅಧ್ಯಕ್ಷ ಜಿಯಾ ಉರ್ ರೆಹಮಾರ್​ರ ಪತ್ನಿಯಾಗಿರುವ ಖಲೀದಾ, 1991 ರಿಂದ 1996 ರವರೆಗೆ ಮತ್ತು 2001 ರಿಂದ 2006 ರವರೆಗೆ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 1945 ರ ಆಗಸ್ಟ್ 15 ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ ಅವರು, ಬಾಂಗ್ಲಾದೇಶದ ಮೊದಲ ಚುನಾಯಿತ ಮಹಿಳಾ ಸರ್ಕಾರದ ಮುಖ್ಯಸ್ಥರಾದರು ಮತ್ತು ದಶಕಗಳ ಕಾಲ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಮುನ್ನಡೆಸಿದರು.
ಖಲೀದಾ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು, ಹಿರಿಯ ಮಗ ತಾರಿಕ್ ರೆಹಮಾನ್ ಬಿಎನ್‌ಪಿಯ ಹಂಗಾಮಿ ಅಧ್ಯಕ್ಷರಾಗಿದ್ದಾರೆ. 17 ವರ್ಷಗಳ ಗಡಿಪಾರಿನ ಬಳಿಕ ಇತ್ತೀಚೆಗೆ ಬಾಂಗ್ಲಾದೇಶಕ್ಕೆ ಮರಳಿದ್ದು, ಖಲೀದಾ ಕಿರಿಯ ಮಗ ಅರಾಫತ್ ರೆಹಮಾನ್ 2015 ರಲ್ಲಿ ಹೃದಯಾಘಾತದಿಂದ ನಿಧನರಾದರು(ಏಜೆನ್ಸೀಸ್​).