Pregnancy In India ಸಾಂದರ್ಭಿಕ ಚಿತ್ರ
- ವಿದೇಶದಲ್ಲಿ ನೆಲೆಸಿ ಭಾರತದಲ್ಲಿ ಹೊಸ ಜೀವನ ರೂಪಿಸಿಕೊಳ್ಳುವುದು ಸುಲಭದ ಮಾತಲ್ಲ
- ಗರ್ಭಾವಸ್ಥೆಯಂತಹ ಸೂಕ್ಷ್ಮ ಘಟ್ಟದಲ್ಲಿ ತವರು ಮನೆಯಿಂದ ದೂರವಿದ್ದು ಮತ್ತೊಂದು ದೇಶಕ್ಕೆ ಒಗ್ಗಿಕೊಳ್ಳುವುದು ಕಷ್ಟ
- ನನ್ನ ಮೊದಲ ಗರ್ಭಧಾರಣೆ ಭಾರತದಲ್ಲೇ ಆಗುತ್ತಿರುವುದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ
Pregnancy In India: ವಿದೇಶದಲ್ಲಿ ನೆಲೆಸಿ ಹೊಸ ಜೀವನ ರೂಪಿಸಿಕೊಳ್ಳುವುದು ಸುಲಭದ ಮಾತಲ್ಲ. ಅದರಲ್ಲೂ ಗರ್ಭಾವಸ್ಥೆಯಂತಹ ಸೂಕ್ಷ್ಮ ಮತ್ತು ಪ್ರಮುಖ ಘಟ್ಟದಲ್ಲಿ ತವರು ಮನೆಯಿಂದ ದೂರವಿದ್ದು, ಮತ್ತೊಂದು ದೇಶದ ಸಂಸ್ಕೃತಿಗೆ ಒಗ್ಗಿಕೊಳ್ಳುವುದು ದೊಡ್ಡ ಸವಾಲು. ಪ್ರಸ್ತುತ ಭಾರತದಲ್ಲಿ ನೆಲೆಸಿರುವ ರಷ್ಯನ್ ಮೂಲದ ಸೋಫಿಯಾ ಎಂಬ ಮಹಿಳೆಗೆ ಇಂತಹದ್ದೇ ಅನುಭವವಾಗಿದೆ. ತಾವು ಎದುರಿಸುತ್ತಿರುವ ಸಾಂಸ್ಕೃತಿಕ ವ್ಯತ್ಯಾಸಗಳು ಹಾಗೂ ಸವಾಲುಗಳ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಕೆ ಗ್ರಾಸವಾಗಿದೆ.
ಸೋಫಿಯಾ ಪೋಸ್ಟ್ನಲ್ಲಿ ಹಂಚಿಕೊಂಡಿದ್ದೇನು?
ನನ್ನ ಮೊದಲ ಗರ್ಭಧಾರಣೆ ಭಾರತದಲ್ಲೇ ಆಗುತ್ತಿರುವುದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ. ಏಕೆಂದರೆ ನನಗೆ ಹೋಲಿಕೆ ಮಾಡಲು ಬೇರೆ ದೇಶದ ಅನುಭವವಿಲ್ಲ. ಹೀಗಾಗಿ ಬೇರೆ ದೇಶದಲ್ಲಿದ್ದರೆ ಹೀಗಾಗುತ್ತಿತ್ತು ಎಂಬ ಆಲೋಚನೆ ನನ್ನಲ್ಲಿ ಬರುವುದಿಲ್ಲ. ಆದರೆ, ಕಳೆದ ಕೆಲವು ತಿಂಗಳುಗಳಲ್ಲಿ ನನಗೆ ತೀರಾ ಹೊಸತು ಹಾಗೂ ವಿಚಿತ್ರ ಎನಿಸಿದ ಕೆಲವು ಸಂಗತಿಗಳನ್ನು ನಾನು ಎದುರಿಸಿದ್ದೇನೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮನ್ನು ಅಸ್ವಸ್ಥಗೊಳಿಸಿದ ಮುಖ್ಯ ಕ್ಷಣಗಳನ್ನು ಪಟ್ಟಿ ಮಾಡಿದ್ದಾರೆ.
1. ವಿಶ್ರಾಂತಿಯ ಕುರಿತಾದ ವಿಭಿನ್ನ ದೃಷ್ಟಿಕೋನ
ಭಾರತದಲ್ಲಿ ಗರ್ಭಿಣಿಯರು ದೈಹಿಕ ಶ್ರಮ ವಹಿಸಬಾರದು, ವ್ಯಾಯಾಮ ಮಾಡದೆ ಸಂಪೂರ್ಣ ವಿಶ್ರಾಂತಿ ಪಡೆಯಬೇಕು ಎಂದು ಜನರು ಬಯಸುತ್ತಾರೆ. ಆದರೆ, ಗರ್ಭಧಾರಣೆಯು ಒಂದು ಕಾಯಿಲೆಯಲ್ಲ. ಅದನ್ನು ವೈದ್ಯಕೀಯ ಸಮಸ್ಯೆಯಂತೆ ನೋಡಬಾರದು ಎಂದು ಪ್ರತಿಪಾದಿಸುವ ಅವರು, ಈ ವಿಶ್ರಾಂತಿಯ ಪರಿಕಲ್ಪನೆಯನ್ನು ಒಪ್ಪುವುದಿಲ್ಲ ಎಂದಿದ್ದಾರೆ.
2. ಉಡುಪು ಮತ್ತು ಸಾರ್ವಜನಿಕರ ಪ್ರಶ್ನೆಗಳು
ಗರ್ಭಿಣಿಯರ ಉಡುಪುಗಳ ಬಗ್ಗೆಯೂ ಸಾರ್ವಜನಿಕರ ದೃಷ್ಟಿಕೋನ ವಿಭಿನ್ನವಾಗಿದೆ. ತಾವು ಕ್ರಾಪ್ ಟಾಪ್ ಧರಿಸಿದಾಗ ಅಥವಾ ಬೇಬಿ ಬಂಪ್ ಕಾಣಿಸುವಂತೆ ಬಟ್ಟೆ ತೊಟ್ಟಾಗ ಜನರು ಏಕೆ ಹೊಟ್ಟೆಯನ್ನು ತೋರಿಸುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾರೆ ಎಂದು ಸೋಫಿಯಾ ತಿಳಿಸಿದ್ದಾರೆ.
3. ಭಾಷೆಯ ತೊಡಕು
ವಿದೇಶಿ ನೆಲದಲ್ಲಿ ಮಾತೃಭಾಷೆಯಲ್ಲದ ಭಾಷೆಯಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಸಮಾಲೋಚನೆ ಪಡೆಯುವುದು ಮತ್ತೊಂದು ದೊಡ್ಡ ಸವಾಲು.ವೈದ್ಯಕೀಯ ಪರೀಕ್ಷೆಯನ್ನು ಮರು ಓದಿ ಅರ್ಥೈಸಿಕೊಳ್ಳುವುದು, ಗೂಗಲ್ನಲ್ಲಿ ಮಾಹಿತಿ ಹುಡುಕುವುದು ಮತ್ತು ವೈದ್ಯರಿಗೆ ಪ್ರಶ್ನೆಗಳನ್ನು ಕೇಳಿ ಸ್ಪಷ್ಟನೆ ಪಡೆಯುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸ ತರುತ್ತದೆ ಎಂದು ಹೇಳಿದ್ದಾರೆ.
4. ಭಾರತದ ಉಷ್ಣ ಹವಾಮಾನ
ಭಾರತದ ತೀವ್ರವಾದ ಸೆಖೆ ಮತ್ತು ಆರ್ದ್ರತೆಯುಳ್ಳ ಹವಾಮಾನವು ಗರ್ಭಿಣಿಯರಿಗೆ ಅತ್ಯಂತ ಕಷ್ಟಕರ. ಬೆಳಗಿನ ಉಪಹಾರ ತಯಾರಿಸುವಷ್ಟರಲ್ಲೇ ಬೆವರಿನಲ್ಲಿ ತೋಯ್ದು ಹೋಗುವ ಪರಿಸ್ಥಿತಿ ಇರುತ್ತದೆ. ದಿನಕ್ಕೆ ಹಲವು ಬಾರಿ ಸ್ನಾನ ಮಾಡಬೇಕಾಗುತ್ತದೆ ಹಾಗೂ ಹಗಲಿನಲ್ಲಿ ಹೊರಗಡೆ ಹೆಜ್ಜೆ ಹಾಕುವುದು ಬಹುತೇಕ ಅಸಾಧ್ಯವಾಗಿದೆ ಎಂದು ಸೋಫಿಯಾ ತಮ್ಮ ದೈನಂದಿನ ಕಿರಿಕಿರಿಯನ್ನು ವಿವರಿಸಿದ್ದಾರೆ.
ಜಾಲತಾಣಗಳಲ್ಲಿ ವ್ಯಕ್ತವಾದ ಮಿಶ್ರ ಪ್ರತಿಕ್ರಿಯೆಗಳು
ಸೋಫಿಯಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ತಮ್ಮ ಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯರ ದೈಹಿಕ ಪ್ರಕೃತಿ ಹಾಗೂ ಜೀನ್‌ಗಳು ಪಾಶ್ಚಿಮಾತ್ಯರಿಗಿಂತ ಭಿನ್ನವಾಗಿವೆ. ಭಾರತದಲ್ಲಿ ಅವಧಿಪೂರ್ವ ಹೆರಿಗೆಯ ಪ್ರಮಾಣ ಹೆಚ್ಚಿರುವುದರಿಂದ ವಿಶ್ರಾಂತಿಗೆ ಆದ್ಯತೆ ನೀಡಲಾಗುತ್ತದೆ. ಇದನ್ನು ಕಾಯಿಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಬಳಕೆದಾರರೊಬ್ಬರು ಭಾರತೀಯ ಸಂಪ್ರದಾಯವನ್ನು ಸಮರ್ಥಿಸಿಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರು, ಭಾರತೀಯ ಸಂಸ್ಕೃತಿಯಲ್ಲಿ ಗರ್ಭಿಣಿಯರಿಗೆ ಮತ್ತು ಮಗುವಿಗೆ ಕೆಟ್ಟ ಕಣ್ಣು ಅಂದರೆ ದೃಷ್ಟಿ ತಾಗಬಾರದು ಎಂಬ ನಂಬಿಕೆಯಿದೆ. ಆ ಕಾರಣಕ್ಕಾಗಿಯೇ ಹೊಟ್ಟೆಯನ್ನು ಮುಚ್ಚಿಕೊಳ್ಳಲು ಸಲಹೆ ನೀಡುತ್ತಾರೆ ಎಂದು ವಿವರಿಸಿದ್ದಾರೆ (ಏಜೆನ್ಸೀಸ್).