ಹೆಲಿಕಾಪ್ಟರ್-ವಿಮಾನ ಡಿಕ್ಕಿ: 67 ಜೀವಗಳನ್ನು ಬಲಿಪಡೆದ ಭೀಕರ ಅಪಘಾತದ ವಿಡಿಯೋ 1 ವರ್ಷದ ಬಳಿಕ ಬಹಿರಂಗ! Flight-Helicopter collision
- ಕಳೆದ ವರ್ಷ ಅಮೆರಿಕದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತ
- ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನ ನಡುವೆ ಡಿಕ್ಕಿ
- ಈ ಭೀಕರ ಅಪಘಾತದಿಂದ ವಿಮಾನದಲ್ಲಿದ್ದ 67 ಮಂದಿ ಸ್ಥಳದಲ್ಲೇ ಸಾವು
- ಈ ಘಟನೆ ನಡೆದ ಸುಮಾರು ಒಂದು ವರ್ಷದ ಬಳಿಕ ಹೊಸ ವಿಡಿಯೋ ತುಣುಕು ಬಿಡುಗಡೆ
Flight-Helicopter collision : ಕಳೆದ ವರ್ಷ ಅಮೆರಿಕದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದಾದ ಹೆಲಿಕಾಪ್ಟರ್ ಮತ್ತು ವಿಮಾನ ನಡುವಿನ ಡಿಕ್ಕಿಗೆ ಸಂಭವಿಸಿದ ಭಯಾನಕ ವಿಡಿಯೋ ತುಣುಕು ಇದೀಗ ಹೊರಬಿದ್ದಿದೆ.
ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಮೆರಿಕನ್ ಏರ್ಲೈನ್ಸ್ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್ ನಡುವೆ ಸಂಭವಿಸಿದ ಡಿಕ್ಕಿಯ ದೃಶ್ಯಗಳು ಇದೀಗ ಬೆಳಕಿಗೆ ಬಂದಿರುವ ವಿಡಿಯೋದಲ್ಲಿದೆ.
ಅಮೆರಿಕದ ಆಂತರಿಕ ಭದ್ರತಾ ವರದಿಗಳ ಪ್ರಕಾರ, 2025ರ ಜನವರಿ ತಿಂಗಳಲ್ಲಿ ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್ಲೈನ್ಸ್ ವಿಮಾನ ಮತ್ತು ಯುಎಸ್ ಸೇನಾ ಹೆಲಿಕಾಪ್ಟರ್ ಆಕಾಶದಲ್ಲಿ ಡಿಕ್ಕಿ ಹೊಡೆದವು. ಈ ಘಟನೆಯಲ್ಲಿ ಕನಿಷ್ಠ 67 ಜನರು ಸಾವಿಗೀಡಾದರು. ಸುಮಾರು ಒಂದು ವರ್ಷಗಳ ಬಳಿಕ ಈ ಅಪಘಾತಕ್ಕೆ ಸಂಬಂಧಿಸಿದ ಹೊಸ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ವಾಷಿಂಗ್ಟನ್ನ ಅಧಿಕಾರಿಗಳು ಭೀಕರ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಜನವರಿ 29 ರಂದು ಸಂಜೆ ಹೊತ್ತು ಸೇನಾ ಹೆಲಿಕಾಪ್ಟರ್‌ಗಳು ನಿರೀಕ್ಷೆಗಿಂತ ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದವು. ಈ ವೇಳೆ ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದವು. ಅದೇ ಸಮಯದಲ್ಲಿ, ನಾರ್ಫೋಕ್‌ನಿಂದ ಬಂದ ಅಮೆರಿಕನ್ ಏರ್‌ಲೈನ್ಸ್ ವಿಮಾನವು ನಿಲ್ದಾಣದಲ್ಲಿ ಇಳಿಯುತ್ತಿತ್ತು. ವಿಮಾನದಲ್ಲಿ 67 ಪ್ರಯಾಣಿಕರಿದ್ದರು. ಅದೇ ಸಮಯದಲ್ಲಿ, ಏರ್ ಟ್ರಾಫಿಕ್ ಟವರ್ನಲ್ಲಿ ಸಣ್ಣ ಗದ್ದಲ ಉಂಟಾಯಿತು. ಕೂಡಲೇ ಎತ್ತರಕ್ಕೆ ಏರಿಸಲು ಪೈಲಟ್ಗೆ ಸೂಚನೆ ನೀಡಲಾಯಿತು. ಆದರೂ, ಅಪಘಾತವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
ಅಂದಹಾಗೆ, ಅಪಘಾತದ ಕಾರಣ ಇನ್ನೂ ತನಿಖೆಯಲ್ಲಿದೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) FAA ನೆರವಿನೊಂದಿಗೆ ತನಿಖೆ ನಡೆಯುತ್ತಿದೆ. ನಿಯಂತ್ರಿತ ವಾಯುಪ್ರದೇಶದಲ್ಲಿ ಎರಡು ವಿಮಾನಗಳು ಹೇಗೆ ಡಿಕ್ಕಿ ಹೊಡೆದವು ಎಂಬುದನ್ನು ನಿರ್ಧರಿಸಲು ಅಧಿಕಾರಿಗಳು ಹಾರಾಟದ ಮಾರ್ಗಗಳು, ಸಂವಹನ ದಾಖಲೆಗಳು ಮತ್ತು ಇತರ ತಾಂತ್ರಿಕ ಡೇಟಾವನ್ನು ಪರಿಶೀಲಿಸುತ್ತಿದ್ದಾರೆ, (ಏಜೆನ್ಸೀಸ್).