ದುಬೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಬಳಿ ಅಪ್ಪಳಿಸಿದ ಡ್ರೋನ್! Middle East War
- ಅಯತೊಲ್ಲಾ ಖಮೇನಿ ಅವರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಕೆರಳಿದ ಸಿಂಹದಂತಾಗಿರುವ ಇರಾನ್
- ಅರಬ್ ದೇಶಗಳಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ಸ್ವತ್ತುಗಳ ಮೇಲೆ ನಿರಂತವಾಗಿ ದಾಳಿ
- ದುಬೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಬಳಿ ಡ್ರೋನ್ ದಾಳಿ ಮಾಡಿದ ಇರಾನ್
Middle East War : ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿ ತಮ್ಮ ಸುಪ್ರೀಂ ಲೀಡರ್ ಅಯತೊಲ್ಲಾ ಖಮೇನಿ ಅವರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಕೆರಳಿದ ಸಿಂಹದಂತಾಗಿರುವ ಇರಾನ್, ತನ್ನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಅರಬ್ ದೇಶಗಳಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ಮಿಲಿಟರಿ ನೆಲೆ ಹಾಗೂ ಇನ್ನಿತರ ಸ್ವತ್ತುಗಳ ಮೇಲೆ ನಿರಂತವಾಗಿ ದಾಳಿ ಮಾಡುತ್ತಿದೆ. ಇದೀಗ ದುಬೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಬಳಿ ಡ್ರೋನ್ ದಾಳಿ ಮಾಡಿದೆ.
ದುಬೈನಲ್ಲಿರುವ ರಾಯಭಾರ ಕಚೇರಿಯ ಪಾರ್ಕಿಂಗ್ ಸ್ಥಳಕ್ಕೆ ಡ್ರೋನ್ ಅಪ್ಪಳಿಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮತ್ತು ದುಬೈ ಸರ್ಕಾರಿ ಮಾಧ್ಯಮ ಕಚೇರಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ತಿಳಿಸಿದೆ.
ಡ್ರೋನ್ ದಾಳಿಯಿಂದಾಗಿ ರಾಯಭಾರ ಕಚೇರಿ ಬಳಿ ದಟ್ಟವಾದ ಕಪ್ಪು ಹೊಗೆ ಆವರಿಸುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಪ್ರಸ್ತುತ, ದುಬೈ ಸರ್ಕಾರ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್‌ಗೆ ತಿಳಿಸಿದೆ.
ಸೋಮವಾರ ಮತ್ತು ಮಂಗಳವಾರ ಕುವೈತ್ ಮತ್ತು ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಗಳ ಬೆನ್ನಲ್ಲೇ ದುಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದಿದೆ. ಇದನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ದೃಢಪಡಿಸಿದ್ದಾರೆ ಮತ್ತು ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಈ ದಾಳಿಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಗಿನ ಜಾವ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಎರಡು ಡ್ರೋನ್‌ಗಳು ಡಿಕ್ಕಿ ಹೊಡೆದವು. ಇದರಿಂದ ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿತು ಮತ್ತು ಕಟ್ಟಡಕ್ಕೆ ಸಣ್ಣಪುಟ್ಟ ಹಾನಿಯಾಯಿತು ಎಂದು ಸೌದಿ ರಕ್ಷಣಾ ಸಚಿವಾಲಯ ಹೇಳಿದೆ. ಅದೇ ರೀತಿ, ಸೋಮವಾರ ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೂ ಡ್ರೋನ್ ದಾಳಿ ನಡೆಸಲಾಯಿತು. ಕುವೈತ್ ಮೇಲೆ ಕ್ಷಿಪಣಿ ಮತ್ತು ಯುಎವಿ ದಾಳಿಯ ನಿರಂತರ ಬೆದರಿಕೆ ಇದೆ. ಹೀಗಾಗಿ ರಾಯಭಾರ ಕಚೇರಿಗೆ ಬರಬೇಡಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ, (ಏಜೆನ್ಸೀಸ್).