Fish Of The Ganga (ಚಿತ್ರ X)
Fish Of The Ganga: ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಚಿಕ್ಕ ವಿಡಿಯೋ ಒಂದನ್ನು ಆಧರಿಸಿ ಸಂಶೋಧಕರು ವಿಶಿಷ್ಟ ಮಾದರಿಯ ಹೊಸ ಪ್ರಭೇದದ ಮೀನೊಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಭೂಮಿಯ ಆಳದ ಅಂತರ್ಜಲದಲ್ಲಿ ವಾಸಿಸುವ ಈ ಅಪರೂಪದ ಜೀವಿಗೆ ‘ಗಂಗೈಕ್ತಿನ್ ಇಂಡೋನೇಪಾಲೆನ್ಸಿಸ್’ (Gangaichthys indonepalicus) ಎಂದು ನಾಮಕರಣ ಮಾಡಲಾಗಿದ್ದು, ‘ಝೂಕೀಸ್’ (ZooKeys) ಎಂಬ ನಿಯತಕಾಲಿಕೆಯಲ್ಲಿ ಈ ಪತ್ತೆಯ ಸಂಪೂರ್ಣ ವಿವರಗಳನ್ನು ಪ್ರಕಟಿಸಲಾಗಿದೆ.
ಬೋರ್‌ವೆಲ್ ನೀರೊಂದಿಗೆ ಹೊರಬಂದ ವಿಚಿತ್ರ ಜೀವಿ
ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ಕುಡಿಯುವ ನೀರಿಗಾಗಿ ಕೊರೆಯಲಾಗಿದ್ದ ಬೋರ್‌ವೆಲ್‌ನಿಂದ ನೀರು ಎತ್ತುವಾಗ ಈ ಸಣ್ಣ, ಬಿಳಿ ಬಣ್ಣದ ಜೀವಿ ಹೊರಬಂದಿತ್ತು. ಇದನ್ನು ವಿಡಿಯೋ ಮಾಡಿ ರೀಲ್ಸ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಕತ್ತಲೆಯಿಂದ ಕೂಡಿದ ಭೂಮಿ ಆಳದಲ್ಲಿ ಇದು ವಾಸಿಸುವುದರಿಂದ ಈ ಜೀವಿಗೆ ಸಾಮಾನ್ಯ ಮೀನುಗಳಿರುವಂತೆ ರೆಕ್ಕೆಗಳಾಗಲಿ, ಸ್ಪಷ್ಟವಾಗಿ ಕಾಣಿಸುವ ಕಣ್ಣುಗಳಾಗಲಿ ಇರಲಿಲ್ಲ. ಕೇವಲ ನಾಲ್ಕು ಸೆಂಟಿಮೀಟರ್ ಉದ್ದವಿರುವ ಈ ಜೀವಿ, ನೀರು ತುಂಬಿದ ಮಣ್ಣು ಮತ್ತು ಶೇಖರಿತ ಪದರಗಳಲ್ಲಿ ಮಣ್ಣಿನ ಹುಳುವಿನಂತೆಯೇ ನೆರಳಿನಂತೆ ಚಲಿಸುತ್ತದೆ.
ಸಂಶೋಧನೆಯ ಹಾದಿ ಮತ್ತು ಎದುರಾದ ಸವಾಲುಗಳು
ಈ ಅಪರೂಪದ ಜೀವಿಯ ಮಾದರಿಯನ್ನು ಸಂಗ್ರಹಿಸಲು ಮುಂಬೈನ ಠಾಕ್ರೆ ವೈಲ್ಡ್‌ಲೈಫ್ ಫೌಂಡೇಶನ್, ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ, ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಶಾಂಗೈ ಸಿಂಕ್ರೊಟ್ರಾನ್ ವಿಕಿರಣ ಸೌಲಭ್ಯ ಹಾಗೂ ಗೋಪಾಲಪುರ-ಆನ್-ಸೀಯಲ್ಲಿರುವ ಜೂಲಾಜಿಕಲ್ ಸರ್ವೇ ಆಫ್ ಇಂಡಿಯಾದ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿತು.
ಆದರೆ, ಈ ಜೀವಿಯ ಮಾದರಿಯನ್ನು ಜೀವಂತವಾಗಿ ಪಡೆಯುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದಾಗ್ಯೂ, ಸ್ಥಳೀಯ ಪ್ರದೇಶಗಳಲ್ಲಿ ಬೋರ್‌ವೆಲ್ ಮತ್ತು ಹ್ಯಾಂಡ್ ಪಂಪ್‌ಗಳನ್ನು ಗುರುತಿಸಿ, ಅವುಗಳ ಮಾಲೀಕರಿಂದ ನೀರು ತೆಗೆಯಲು ಅನುಮತಿ ಪಡೆಯುವುದು ಕಷ್ಟಕರವಾಗಿತ್ತು. ಕೈಯಿಂದ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದಾಗ ಕೆಲಸ ಇನ್ನಷ್ಟು ಕಷ್ಟವೆನಿಸಲು ಪ್ರಾರಂಭಿಸಿತು ಎಂದು ಹೇಳಿದ್ದಾರೆ.
ಪ್ ಮಾಡಿದಾಗ ಮೊದಲ ಜೀವಿ ಸಿಕ್ಕಿತಾದರೂ, ಅದು ಪಂಪ್ ಮಾಡುವಾಗ ಗಾಯಗೊಂಡು ತಕ್ಷಣ ಮೃತಪಟ್ಟಿತ್ತು. ನಂತರ ಅದೇ ಬೋರ್‌ವೆಲ್‌ನಿಂದ ಮತ್ತೆ 500 ಲೀಟರ್ ನೀರು ಎತ್ತಿದಾಗ ಸಂಪೂರ್ಣವಾಗಿ ಹಾನಿಯಾಗದ ಎರಡನೇ ಮಾದರಿ ದೊರಕಿತು.
ತಳಿ ವಿಶ್ಲೇಷಣೆ ಮತ್ತು ಹೆಸರಿನ ಮಹತ್ವ
ಸಂಗ್ರಹಿಸಿದ ಮಾದರಿಯನ್ನು ಮೈಕ್ರೋ-ಸಿಟಿ ಸ್ಕ್ಯಾನಿಂಗ್ ಮತ್ತು ಡಿಎನ್‌ಎ ಜೀನ್ ವಿಶ್ಲೇಷಣೆಗೆ ಒಳಪಡಿಸಿದಾಗ, ಇದು ಮಣ್ಣಿನ ಹುಳು ಈಲ್ ಕುಟುಂಬವಾದ 'ಚೌಧುರಿಡೆ' (Chaudhuriidae) ತಳಿಗೆ ಸೇರಿದ್ದು ಎಂದು ದೃಢಪಟ್ಟಿದೆ.
ಆದಾಗ್ಯೂ, ಗಂಗೈಕ್ತಿನ್ ಎಂದರೆ ಗಂಗಾ ನದಿಯ ಮೀನು ಎಂದರ್ಥ. ಭಾರತದಲ್ಲಿ ಲಕ್ಷಾಂತರ ಜನರಿಗೆ ಜೀವನದ ಆಧಾರವಾಗಿರುವ ಗಂಗಾ ನದಿ ಪಾತ್ರದ ಅಂತರ್ಜಲ ವ್ಯವಸ್ಥೆಯಲ್ಲಿ ಪತ್ತೆಯಾದ ಮೊದಲ ಭೂಗತ ಮೀನು (Stygobitic fish) ಇದಾಗಿದೆ ಎಂದು ಸಂಶೋಧಕರು ವಿವರಣೆ ನೀಡಿದ್ದಾರೆ (ಏಜೆನ್ಸೀಸ್).