ಸ್ಯಾಟಿಲೈಟ್​ ಇಮೇಜ್​ಗಳ ದೃಶ್ಯ 
ವಿದೇಶ

ಕಡೆಗೂ ಚಂದ್ರನಿಗೆ ಅಪ್ಪಳಿಸಿದ ಸ್ಪೇಸ್​ ಎಕ್ಸ್ ರಾಕೆಟ್​ನ​ ಸ್ಯಾಟಿಲೈಟ್​ ಇಮೇಜ್​​ ವೈರಲ್​! ಹುಬ್ಬೇರಿಸುತ್ತೆ ದೊಡ್ಡ ಕುಳಿಯ ದೃಶ್ಯ ​

ಪ್ರಮುಖ ಮುಖ್ಯಾಂಶಗಳು

  • ಚಂದಿರನನ್ನು ಅಪ್ಪಳಿಸಿದ ಸ್ಪೇಸ್‌ಎಕ್ಸ್‌ನ 'ಫಾಲ್ಕನ್-9' ರಾಕೆಟ್‌ನ ಭಾಗ
  • ಕೊನೆಗೂ ಚಂದಿರನ ಮೇಲೆ ಸೃಷ್ಟಿಯಾಗಿರುವ ಕುಳಿಯ ದೃಶ್ಯ ಸೆರೆ
ನ್ಯೂಯಾರ್ಕ್​: ಕಳೆದ ವರ್ಷ ಉದ್ಯಮಿ ಎಲಾನ್ ಮಸ್ಕ್​ ಒಡೆತನದ 'ಸ್ಪೇಸ್‌ ಎಕ್ಸ್' (SpaceX) ಸಂಸ್ಥೆ ಉಡಾವಣೆ ಮಾಡಿದ್ದ 'ಫಾಲ್ಕನ್-9' ರಾಕೆಟ್‌ನ ಬೃಹತ್ ತುಂಡೊಂದು ಬುಧವಾರ ಚಂದಿರನಿಗೆ ಅಪ್ಪಳಿಸಿರುವ ಸ್ಯಾಟಿಲೈಟ್​ ಇಮೇಜ್ ಕಡೆಗೂ ಲಭಿಸಿದೆ.
ಚಂದ್ರನ ಮೇಲ್ಮೈಗೆ ಸ್ಪೇಸ್​ ಎಕ್ಸ್​ನ ಫಾಲ್ಕನ್​ 9 ರಾಕೆಟ್​ನ ಅವಶೇಷಗಳು ಅಪ್ಪಳಿಸಿರುವ ಅಪರೂಪದ ಘಟನೆಗೆ ವಿಜ್ಞಾನಿಗಳೇ ಬೆರಗಾಗಿದ್ದಾರೆ. 4 ಟನ್‌ ತೂಕದ ರಾಕೆಟ್​​ನ ಎರಡನೇ ಹಂತದ ಬೃಹತ್ ಭಾಗವೊಂದು ಗಂಟೆಗೆ ಬರೋಬ್ಬರಿ 8,690 ಕಿ.ಮೀ (ಗಂಟೆಗೆ 5,400 ಮೈಲಿ) ವೇಗದಲ್ಲಿ ಬಂದು ಚಂದ್ರನಿಗೆ ಅಪ್ಪಳಿಸಿತು. ಇದರ ಪರಿಣಾಮ ಚಂದಿರನ ಮೇಲೆ ಸುಮಾರು 80ರಿಂದ 100 ಅಡಿ ಆಳದ ಕುಳಿ ಸೃಷ್ಟಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಚೀನಾ ಸ್ಯಾಟಲೈಟ್‌ನಲ್ಲಿ ಸೆರೆ

ಬಾಹ್ಯಾಕಾಶ ಕಣ್ಗಾವಲು ಸಾಮರ್ಥ್ಯವನ್ನು ಈಗಾಗಲೇ ಇಡೀ ಜಗತ್ತಿಗೆ ಪ್ರದರ್ಶಿಸಿ, ಸಾಬೀತುಪಡಿಸಿರುವ ಚೀನಾ, ಫಾಲ್ಕನ್​ ರಾಕೆಟ್ ಸೃಷ್ಟಿಸಿರುವ ಚಂದ್ರನ ಮೇಲಿನ ಕುಳಿಯ ದೃಶ್ಯಗಳನ್ನು ಸೆರೆಹಿಡಿಯುವಲ್ಲಿಯೂ ಯಶಸ್ವಿಯಾಗಿದೆ. ಡಿಕ್ಕಿ ಹೊಡೆದ ಬೆನ್ನಲ್ಲೇ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಗೋಚರಿಸಿದ ದಟ್ಟ ಹೊಗೆಯಲ್ಲಿ, ಸೋಡಿಯಂ ಮತ್ತು ಲಿಥಿಯಂ ಗ್ಯಾಸ್​ ಇರುವುದನ್ನು ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ.

ಚಂದ್ರನ ಮೇಲೆ ಜ್ವಲಿಸುವ 'ಆವಿ ಮೋಡ'

ಚಂದ್ರನ ಸುತ್ತ ಕಕ್ಷೆಯಲ್ಲಿದ್ದ ಯಾವುದೇ ಸ್ಯಾಟಿಲೈಟ್​ಗಳು ಈ ಘಟನೆಯ ತೀರ ಹತ್ತಿರದ ದೃಶ್ಯಗಳನ್ನು ಸೆರೆಹಿಡಿಯಲು ಸರಿಯಾದ ಸಮಯಕ್ಕೆ ಆಯಾ ಸ್ಥಳದಲ್ಲಿ ಇರಲಿಲ್ಲ. ಆದರೆ, ಭೂಮಿಯ ಮೇಲಿದ್ದ ಖಗೋಳಶಾಸ್ತ್ರಜ್ಞರು, ಈ ಡಿಕ್ಕಿಯ ಬಳಿಕ ನಡೆದ ಒಂದಷ್ಟು ಪರಿಣಾಮಗಳನ್ನು ಅತ್ಯಂತ ಯಶಸ್ವಿಯಾಗಿ ವೀಕ್ಷಿಸಿದ್ದಾರೆ ಎನ್ನಲಾಗಿದೆ.

ಚಂದ್ರನ ಮಣ್ಣಿನಿಂದ ಸೋಡಿಯಂ ಗ್ಯಾಸ್​?

ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ ಹಂಚಿಕೊಂಡ ಮಾಹಿತಿ ಪ್ರಕಾರ, ಸೋಡಿಯಂ ಚಂದ್ರನಿಂದ ಹೊರಬಂದಿದೆ ಎಂದು ನಂಬಲಾಗಿದ್ದು, ಲಿಥಿಯಂನ ಕುರುಹುಗಳು ಫಾಲ್ಕನ್ 9 ರಾಕೆಟ್ ಹಂತದಿಂದಲೇ ಹೊರಹೊಮ್ಮಿದ್ದಾಗಿ ತಿಳಿಸಲಾಗಿದೆ. ಈ ರಾಸಾಯನಿಕ ಕುರುಹುಗಳು ಸುಮಾರು 5ರಿಂದ 10 ನಿಮಿಷಗಳ ಕಾಲ ಗೋಚರಿಸಿದ್ದವು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಮತ್ತೊಂದೆಡೆ, ನಾಸಾ ಶೀಘ್ರದಲ್ಲೇ ಚಂದ್ರನ ಮೇಲೆ ಮಾನವನ ಶಾಶ್ವತ ವಸತಿಯನ್ನು (Permanent Human Presence) ನಿರ್ಮಿಸುವ ದೊಡ್ಡ ಯೋಜನೆಯಲ್ಲಿದೆ. ಹೀಗಿರುವಾಗ, ಚಂದ್ರನಿಗೆ ಕೃತಕ ಬಾಹ್ಯಾಕಾಶ ತ್ಯಾಜ್ಯಗಳು ಅಪ್ಪಳಿಸಿದಾಗ ಉಂಟಾಗುವ ಅಪಾಯಗಳು ಮತ್ತು ಕಂಪನಗಳ ಕುರಿತು ಅಧ್ಯಯನ ನಡೆಸಲು ಈ ಘಟನೆ ವಿಜ್ಞಾನಿಗಳಿಗೆ ಬಹಳ ಮುಖ್ಯ ಮಾಹಿತಿಯನ್ನು ಒದಗಿಸಲಿದೆ ಎನ್ನಲಾಗಿದೆ,(ಏಜೆನ್ಸೀಸ್).