ನಿಮ್ಮ ತೈಲವನ್ನು ನೀವೇ ಹುಡುಕಿಕೊಳ್ಳಿ: ಬ್ರಿಟನ್, ಫ್ರಾನ್ಸ್‌ಗೆ ಟ್ರಂಪ್ ಬಹಿರಂಗ ಎಚ್ಚರಿಕೆ! ಮಿತ್ರರಾಷ್ಟ್ರಗಳ ವಿರುದ್ಧ ಹರಿಹಾಯ್ದ ಅಮೆರಿಕ ಅಧ್ಯಕ್ಷರ
ನ್ಯೂಯಾರ್ಕ್: ಇರಾನ್ ವಿರುದ್ಧದ ಯುದ್ಧವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತಮ್ಮ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳಾದ ಬ್ರಿಟನ್ ಮತ್ತು ಫ್ರಾನ್ಸ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಇರಾನ್ ಮೇಲಿನ ದಾಳಿಗೆ ಬೆಂಬಲ ನೀಡದ ಯುರೋಪ್ ರಾಷ್ಟ್ರಗಳನ್ನು ಕಟುವಾಗಿ ಟೀಕಿಸಿರುವ ಟ್ರಂಪ್, ಇನ್ನು ಮುಂದೆ ಅಮೆರಿಕ ನಿಮ್ಮ ಸಹಾಯಕ್ಕೆ ಬರುವುದಿಲ್ಲ, ನಿಮ್ಮ ತೈಲವನ್ನು ನೀವೇ ವಶಪಡಿಸಿಕೊಳ್ಳಿ ಎಂದು ಗುಡುಗಿದ್ದಾರೆ. ಇದು ಪಶ್ಚಿಮ ಏಷ್ಯಾದಲ್ಲಿ ಹೊಸ ರಾಜತಾಂತ್ರಿಕ ಬಿಕ್ಕಟ್ಟಿಗೆ ನಾಂದಿ ಹಾಡಿದೆ.
ಟ್ರಂಪ್‌ರ 'ಟ್ರುತ್ ಸೋಶಿಯಲ್' ವಾಗ್ದಾಳಿ
ಈ ತಮ್ಮ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಬ್ರಿಟನ್ ದೇಶವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಜೆಟ್ ಇಂಧನ ಸಿಗದೆ ಪರದಾಡುತ್ತಿರುವ ಬ್ರಿಟನ್‌ನಂತಹ ದೇಶಗಳಿಗೆ ನನ್ನದೊಂದು ಸಲಹೆ ಇದೆ. ಮೊದಲನೆಯದಾಗಿ, ಅಮೆರಿಕದಿಂದ ತೈಲ ಖರೀದಿಸಿ, ನಮ್ಮಲ್ಲಿ ಬೇಕಾದಷ್ಟಿದೆ. ಎರಡನೆಯದಾಗಿ, ಸ್ವಲ್ಪ ಧೈರ್ಯ ಬೆಳೆಸಿಕೊಳ್ಳಿ, ಜಲಸಂಧಿಗೆ ಹೋಗಿ ತೈಲವನ್ನು ನೀವೇ ಕಿತ್ತುಕೊಳ್ಳಿ ಎಂದಿದ್ದಾರೆ. ಅಮೆರಿಕ ಇನ್ನು ಮುಂದೆ ನಿಮಗೆ ಸಹಾಯ ಮಾಡಲು ಅಲ್ಲಿ ಇರುವುದಿಲ್ಲ ಎಂದು ಟ್ರಂಪ್ ಬರೆದಿದ್ದಾರೆ.
ಬ್ರಿಟನ್ ದೇಶವು ಇರಾನ್ ನಾಯಕತ್ವವನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಕ್ಕೆ ಟ್ರಂಪ್ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್ ಈಗಾಗಲೇ ಧೂಳೀಪಟವಾಗಿದೆ, ಕಠಿಣ ಕೆಲಸ ಮುಗಿದಿದೆ. ಈಗ ಹೋಗಿ ನಿಮ್ಮ ತೈಲವನ್ನು ನೀವೇ ತಂದುಕೊಳ್ಳಿ ಎಂದು ಟ್ರಂಪ್ ಅಣಕಿಸಿದ್ದಾರೆ.
ಫ್ರಾನ್ಸ್ ಮತ್ತು ಇಟಲಿ ವಿರುದ್ಧವೂ ಆಕ್ರೋಶ
ಫ್ರಾನ್ಸ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಟ್ರಂಪ್, ಇಸ್ರೇಲ್‌ಗೆ ಯುದ್ಧ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನಗಳಿಗೆ ಫ್ರಾನ್ಸ್ ತನ್ನ ವಾಯುಪ್ರದೇಶವನ್ನು ಬಳಸಲು ಬಿಡಲಿಲ್ಲ. ಇರಾನ್‌ನ ಕಟುಕನನ್ನು ಸಂಹರಿಸುವ ಕಾರ್ಯದಲ್ಲಿ ಫ್ರಾನ್ಸ್ ಯಾವುದೇ ಸಹಾಯ ಮಾಡಿಲ್ಲ. ಇದನ್ನು ಅಮೆರಿಕ ನೆನಪಿಟ್ಟುಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಇತ್ತ ಇಟಲಿ ಕೂಡ ಅಮೆರಿಕದ ಬಾಂಬರ್ ವಿಮಾನಗಳು ತನ್ನ ಸಿಗೊನೆಲ್ಲಾ ವಾಯುನೆಲೆಯಲ್ಲಿ ಇಳಿಯಲು ಅನುಮತಿ ನಿರಾಕರಿಸಿದೆ ಎಂಬ ವರದಿಗಳು ಹೊರಬಂದಿವೆ. ಇದರಿಂದಾಗಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ಯುರೋಪ್‌ನಲ್ಲಿ ಭಾರಿ ಅಡ್ಡಿ ಉಂಟಾಗಿದೆ.
ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಯುದ್ಧದ ತೀವ್ರತೆ
ಫೆಬ್ರವರಿ ಕೊನೆಯಲ್ಲಿ ಆರಂಭವಾದ ಈ ಯುದ್ಧ ಈಗ ಒಂದು ತಿಂಗಳು ಪೂರೈಸಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಿರುವುದರಿಂದ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರಿದೆ. ಇತ್ತೀಚಿನ ದಾಳಿಯಲ್ಲಿ ಅಮೆರಿಕವು ಇರಾನ್‌ನ ಇಸ್ಫಹಾನ್ ಬಳಿಯ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದೆ. ಪ್ರತಿಯಾಗಿ ಇರಾನ್ ಕೂಡ ಕುವೈತ್‌ನ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ. ವರದಿಗಳ ಪ್ರಕಾರ, ಈ ಯುದ್ಧದಲ್ಲಿ ಈಗಾಗಲೇ 1,900ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಯುದ್ಧದಿಂದ ಹಿಂದೆ ಸರಿಯುವ ಸೂಚನೆ ನೀಡಿದ ಟ್ರಂಪ್?
ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯ ಪ್ರಕಾರ, ಟ್ರಂಪ್ ಅವರು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಅಂತ್ಯಗೊಳಿಸಲು ಯೋಜಿಸುತ್ತಿದ್ದಾರೆ. ಹಾರ್ಮುಜ್ ಜಲಸಂಧಿ ಮುಚ್ಚಿದ್ದರೂ ಸಹ ಸೈನ್ಯವನ್ನು ಹಿಂಪಡೆಯಲು ಅವರು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಜಲಸಂಧಿಯನ್ನು ಬಲವಂತವಾಗಿ ತೆರೆಯುವ ಮಿಷನ್ ಸುದೀರ್ಘ ಕಾಲ ಹಿಡಿಯುವುದರಿಂದ, ಆ ಜವಾಬ್ದಾರಿಯನ್ನು ಯುರೋಪ್ ಮತ್ತು ಗಲ್ಫ್ ಮಿತ್ರ ರಾಷ್ಟ್ರಗಳ ಹೆಗಲಿಗೆ ಹಾಕಲು ವಾಷಿಂಗ್ಟನ್ ನಿರ್ಧರಿಸಿದೆ.
ಒಟ್ಟಾರೆಯಾಗಿ, ಟ್ರಂಪ್ ಅವರ ಅಮೆರಿಕ ಫಸ್ಟ್ ನೀತಿಯು ಈಗ ಮಿತ್ರ ರಾಷ್ಟ್ರಗಳನ್ನೂ ಸಂಕಷ್ಟಕ್ಕೆ ದೂಡಿದೆ. ಅಮೆರಿಕದ ನೆರವಿಲ್ಲದೆ ಯುರೋಪ್ ರಾಷ್ಟ್ರಗಳು ಇರಾನ್‌ನ ಈ ಇಂಧನ ದಿಗ್ಬಂಧನವನ್ನು ಹೇಗೆ ಎದುರಿಸುತ್ತವೆ ಎಂಬುದು ಈಗ ಜಾಗತಿಕ ಕುತೂಹಲಕ್ಕೆ ಕಾರಣವಾಗಿದೆ,(ಏಜೆನ್ಸೀಸ್).