ಫಿಫಾ ವಿಶ್ವಕಪ್ 2026: ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ಗೋಲ್! ರೊನಾಲ್ಡೊ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಅರ್ಜೆಂಟೀನಾ ನಾಯಕ!
ನ್ಯೂಯಾರ್ಕ್: ಜಾಗತಿಕ ಫುಟ್‌ಬಾಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi), ಫಿಫಾ ವಿಶ್ವಕಪ್ 2026ರ ತಮ್ಮ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಗೋಲು ಸಿಡಿಸಿ ಹೊಸ ಇತಿಹಾಸ ಬರೆದಿದ್ದಾರೆ. ಕನ್ಸಾಸ್ ಸಿಟಿಯ ಆ್ಯರೋಹೆಡ್ ಸ್ಟೇಡಿಯಂನಲ್ಲಿ ನಡೆದ ಆಲ್ಜೀರಿಯಾ ವಿರುದ್ಧದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿಯ ಮಾಂತ್ರಿಕ ಆಟದ ಬಲದಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು 3-0 ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.
ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಡುತ್ತಿರುವ 38 ವರ್ಷದ ಮೆಸ್ಸಿ, ಮೈದಾನದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಅಲ್ಲದೆ, ಪಂದ್ಯದ 17ನೇ ನಿಮಿಷದಲ್ಲೇ ಬಾಕ್ಸ್‌ನ ಹೊರಗಿನಿಂದ ಮೆಸ್ಸಿ ಹೊಡೆದ ಅದ್ಭುತ ಲಾಂಗ್ ಶಾರ್ಟ್ ನೇರವಾಗಿ ಆಲ್ಜೀರಿಯಾದ ಗೋಲ್‌ಕೀಪರ್ ಕಣ್ಣು ತಪ್ಪಿಸಿ ನೆಟ್‌ಗೆ ಬಿತ್ತು. ಈ ಮೂಲಕ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು.
ತದನಂತರ, 60ನೇ ನಿಮಿಷದಲ್ಲಿ ಆಲ್ಜೀರಿಯಾ ಕೀಪರ್ ಕೈಯಿಂದ ಜಾರಿದ ಚೆಂಡನ್ನು ಅತ್ಯಂತ ಚಾಣಾಕ್ಷತನದಿಂದ ಗೋಲ್ ಆಗಿ ಪರಿವರ್ತಿಸಿದ ಮೆಸ್ಸಿ, ಪಂದ್ಯದ 76ನೇ ನಿಮಿಷದಲ್ಲಿ ಮತ್ತೊಂದು ಮ್ಯಾಜಿಕಲ್ ಕಿಕ್ ಮೂಲಕ ತಮ್ಮ ಹ್ಯಾಟ್ರಿಕ್ ಸಾಧನೆ ಪೂರೈಸಿದರು.
ಆಲ್ಜೀರಿಯಾ ವಿರುದ್ಧದ ಈ ಒಂದೇ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಫುಟ್‌ಬಾಲ್ ಜಗತ್ತಿನ ಹತ್ತಾರು ಐತಿಹಾಸಿಕ ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಗೋಲು: ಮೆಸ್ಸಿ ತಮ್ಮ ವಿಶ್ವಕಪ್ ಗೋಲುಗಳ ಸಂಖ್ಯೆಯನ್ನು 16ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಜರ್ಮನಿಯ ದಿಗ್ಗಜ ಆಟಗಾರ ಮಿರೋಸ್ಲಾವ್ ಕ್ಲೋಸ್ ಅವರೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲುಗಳಿಸಿದ ಜಂಟಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲದೆ, 15 ಗೋಲು ಗಳಿಸಿರುವ ತಮ್ಮ ದಶಕಗಳ ಪ್ರತಿಸ್ಪರ್ಧಿ ಕ್ರಿಸ್ಟಿಯಾನೋ ರೊನಾಲ್ಡೊರನ್ನು ಮೆಸ್ಸಿ ಹಿಂದಿಕ್ಕಿದ್ದಾರೆ.
6 ವಿಶ್ವಕಪ್ ಆಡಿದ ಜಗತ್ತಿನ ಮೊದಲ ಆಟಗಾರ: ಫುಟ್‌ಬಾಲ್ ಇತಿಹಾಸದಲ್ಲೇ ಸತತ ಆರು ವಿಭಿನ್ನ ವಿಶ್ವಕಪ್ ಆವೃತ್ತಿಗಳಲ್ಲಿ (2006, 2010, 2014, 2018, 2022 ಮತ್ತು 2026) ಕಣಕ್ಕಿಳಿದ ವಿಶ್ವದ ಏಕೈಕ ಆಟಗಾರ ಎಂಬ ವಿಶ್ವದಾಖಲೆಯನ್ನು ಮೆಸ್ಸಿ ಬರೆದಿದ್ದಾರೆ. 2006ರಲ್ಲಿ ಸರ್ಬಿಯಾ ಮತ್ತು ಮಾಂಟೆನೆಗ್ರೊ ವಿರುದ್ಧ ಆಡುವ ಮೂಲಕ ಅವರು ವಿಶ್ವಕಪ್ ಜರ್ನಿ ಆರಂಭಿಸಿದ್ದರು.
5 ವಿಶ್ವಕಪ್‌ಗಳಲ್ಲಿ ಗೋಲು: ಈ ಪಂದ್ಯದ ಮೊದಲ ಗೋಲು ಗಳಿಸುತ್ತಿದ್ದಂತೆ, 5 ವಿಭಿನ್ನ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲು ಹೊಡೆದ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಅಪರೂಪದ ಸಾಧಕರ ಪಟ್ಟಿಗೆ ಮೆಸ್ಸಿ ಕೂಡ ಸೇರ್ಪಡೆಯಾಗಿದ್ದಾರೆ.
35 ವರ್ಷ ದಾಟಿದ ನಂತರ 10 ಗೋಲು: 35 ವರ್ಷ ವಯಸ್ಸು ದಾಟಿದ ನಂತರ ವಿಶ್ವಕಪ್ ಇತಿಹಾಸದಲ್ಲಿ 10 ಗೋಲುಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿ ಈಗ ಮೆಸ್ಸಿ ಪಾಲಾಗಿದೆ.
ಗ್ರೂಪ್ J ಪಟ್ಟಿಯಲ್ಲಿ ಅರ್ಜೆಂಟೀನಾ ಟಾಪ್!
ಕನ್ಸಾಸ್ ಸಿಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೆಸ್ಸಿ ಅವರ ದಾಖಲೆಯ ಆಟದಿಂದಾಗಿ ಆಲ್ಜೀರಿಯಾ ವಿರುದ್ಧ 3-0 ಅಂತರದ ಸುಲಭ ಜಯ ಸಾಧಿಸಿದ ಅರ್ಜೆಂಟೀನಾ, ಗ್ರೂಪ್ J ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪ್ರಸ್ತುತ ವಿಶ್ವಕಪ್ ಚಾಂಪಿಯನ್ ಆಗಿರುವ ಅರ್ಜೆಂಟೀನಾ ಈ ಬಾರಿಯೂ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿಯನ್ನು ಅದ್ಭುತವಾಗಿ ಆರಂಭಿಸಿದೆ,(ಏಜೆನ್ಸೀಸ್).
ಅತಿ ಹಿರಿಯ ದಕ್ಷಿಣ ಅಮೆರಿಕ ಆಟಗಾರ: ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಜಗತ್ತಿನ 3ನೇ ಅತಿ ಹಿರಿಯ ಆಟಗಾರ (ರೋಚರ್ ಮಿಲ್ಲಾ ಮತ್ತು ಪೆಪೆ ನಂತರ) ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೆಸ್ಸಿ, ಈ ಸಾಧನೆ ಮಾಡಿದ ದಕ್ಷಿಣ ಅಮೆರಿಕ ಖಂಡದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ,(ಏಜೆನ್ಸೀಸ್).