- ಸೋಮವಾರ (ಜು.20) ತಡರಾತ್ರಿ ಫಿಫಾ ವಿಶ್ವಕಪ್ ಫೈನಲ್
- ಅರ್ಜೆಂಟೀನಾ-ಸ್ಪೇನ್ ಪಂದ್ಯ ನೋಡಲು ಟಿಕೆಟ್ ಬೆಲೆ ದುಬಾರಿ
- ಪಂದ್ಯದ ಒಂದು ಟಿಕೆಟ್ ಬೆಲೆಯಲ್ಲಿ ಲಕ್ಸುರಿ ಕಾರನ್ನೇ ಖರೀದಿಸಬಹುದು
FIFA Final Ticket: ಇದೇ ಸೋಮವಾರ ತಡರಾತ್ರಿ ಆರಂಭವಾಗಲಿರುವ ಫಿಫಾ ವಿಶ್ವಕಪ್ 2026ರ ಬಹುನಿರೀಕ್ಷಿತ ಫೈನಲ್ ಪಂದ್ಯಕ್ಕೆ ಫುಟ್ಬಾಲ್ ಪ್ರೇಮಿಗಳ ಕ್ರೇಜ್ ದುಪ್ಪಟ್ಟಾಗಿದೆ. ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳು ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದ್ದು, ಎರಡನೇ ಬಾರಿ ಫಿಫಾ ಟ್ರೋಫಿಗೆ ಮುತ್ತಿಡಲು ಲಿಯೋನಲ್ ಮೆಸ್ಸಿ ಪಡೆ ತುದಿಗಾಲಿನಲ್ಲಿದೆ. ಈ ಮಧ್ಯೆ, ಫೈನಲ್ ಮ್ಯಾಚ್ನ ಟಿಕೆಟ್ ಬೆಲೆ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಮೆಸ್ಸಿ ನೆರಳಿನಲ್ಲಿ ಕಣಕ್ಕಿಳಿಯಲಿರುವ ಅರ್ಜೆಂಟೀನಾ ಮತ್ತು ಯುವ ಸ್ಪೇನ್ ತಂಡದ ನಡುವೆ ಫೈನಲ್ ಜಿದ್ದಾಜಿದ್ದಿ ಮೂಡಿದ್ದು, ಟಿಕೆಟ್ಗಳು ಎಂದಿನಂತೆ ಗಗನಕ್ಕೇರಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸಲಿರುವ ಫೈನಲ್ ಪಂದ್ಯಕ್ಕೆ ವಿಶ್ವಾದ್ಯಂತ ಭಾರೀ ಡಿಮಾಂಡ್ ಆಗಿದೆ. ಜು.20ರಂದು ಅಮೆರಿಕದ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಪಂದ್ಯವು ಭಾರತೀಯ ಕಾಲಮಾನ ಮಧ್ಯರಾತ್ರಿ 12:30ಕ್ಕೆ ಶುರುವಾಗಲಿದೆ.
ಇದೇ ಮೊದಲು
ಟಿಕೆಟ್ ಸೇಲ್ಸ್ ವೇದಿಕೆಯಾದ ಟಿಕ್‌ಪಿಕ್ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಪ್ರತಿ ಟಿಕೆಟ್‌ಗೆ ಸರಾಸರಿ 11,327 ಯುಎಸ್ ಡಾಲರ್‌ಗಳನ್ನು (ಭಾರತೀಯ ಕರೆನ್ಸಿಯಲ್ಲಿ ಸುಮಾರು 11 ಲಕ್ಷ ರೂ.) ಕೊಟ್ಟು ಟಿಕೆಟ್ ಖರೀದಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಅಮೆರಿಕಾದ ಕ್ರೀಡಾ ಇತಿಹಾಸದಲ್ಲಿ ಇದುವರೆಗೆ ಯಾವುದೇ ಕ್ರೀಡೆಗೂ ಈ ಮಟ್ಟಿಗಿನ ಗರಿಷ್ಠ ಸರಾಸರಿ ಟಿಕೆಟ್ ದರ ಸಿಕ್ಕಿರಲಿಲ್ಲ ಎಂದು ಟಿಕ್‌ಪಿಕ್ ಹೇಳಿದೆ.
ಕಡಿಮೆ ಬೆಲೆಯ ಟಿಕೆಟ್ 6.7 ಲಕ್ಷ ರೂ.
ವಾಸ್ತವವಾಗಿ, ಈ ಫಿಫಾ ಫೈನಲ್ ಸೂಪರ್ ಬೌಲ್ LVIII ನ ಟಿಕೆಟ್ ಬೆಲೆಗಳು 9,411 ಡಾಲರ್ (ಸುಮಾರು 9 ಲಕ್ಷ ರೂ.)ಗೆ ಮಾರಾಟವಾಗುತ್ತಿದೆ. ದುಬಾರಿ ಅಥವಾ ಅತಿ ಹೆಚ್ಚು ಎಂದರೆ 11 ಲಕ್ಷ ರೂ. ಆಗಿದೆ. ಅದೇ ಕಡಿಮೆ ದರಕ್ಕೆ ಲಭ್ಯವಿರುವ ಟಿಕೆಟ್ 6,943 ಡಾಲರ್ (ಅಂದಾಜು 6.7 ಲಕ್ಷ ರೂ.) ಎಂದು ದಾಖಲಾಗಿದೆ. ಮೆಸ್ಸಿ ಮತ್ತು ಸ್ಪೇನ್ ತಂಡದಲ್ಲಿ ಯಾರಿಗೆ 2026ರ ವಿಶ್ವಕಪ್ ಕಿರೀಟ ಮುಡಿಗೇರಲಿದೆ ಎಂಬ ಕುತೂಹಲ ಸದ್ಯ ಟಿಕೆಟ್ ಬೇಡಿಕೆಗೆ ಸಖತ್ ಡಿಮಾಂಡ್ ತಂದುಕೊಟ್ಟಿದೆ ಎಂಬುದರಲ್ಲಿ ಅನುಮಾನ ಬೇಡ,(ಏಜೆನ್ಸೀಸ್).