ಬಲೂಚ್ ಮಹಿಳಾ ಆತ್ಮಹತ್ಯಾ ಬಾಂಬಾರ್​​ 
ವಿದೇಶ

ಬಲೂಚಿಸ್ತಾನ್ ಆರ್ಮಿಯಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್​ಗಳು; ಮಾಹಿತಿ ಹಂಚಿಕೊಂಡ ಬಿಎಲ್ಎ | Balochistan Army

ಕ್ವೆಟ್ಟಾ: ಕಳೆದ ಎರಡು ದಿನಗಳಿಂದ ಪಾಕಿಸ್ತಾನ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಲೂಚ್ ದಂಗೆಕೋರರು ಮತ್ತು ಪಾಕ್ ಸೇನೆ ನಡುವೆ ಘರ್ಷಣೆ ನಡೆದಿದ್ದು, ಸೈನಿಕರು ಸೇರಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಆಘಾತಾಕಾರಿ ಮಾಹಿತಿಯೊಂದು ಹೊರ ಬಿದ್ದಿದ್ದು, ದಂಗೆಕೋರರ ಬಲೂಚ್ ಆರ್ಮಿಯಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್​​ಗಳಿರುವುದು ಕಂಡು ಬಂದಿದೆ.
ಈ ಕುರಿತು ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ, ತನ್ನ ಸಂಘಟನೆಯಲ್ಲಿರುವ ಇಬ್ಬರು ಮಹಿಳಾ ಆತ್ಮಹತ್ಯಾ ಬಾಂಬರ್‌ಗಳ ಫೋಟೋಗಳನ್ನು ಬಿಡುಗಡೆ ಮಾಡಿದೆ. ಅವರಿಬ್ಬರು ತನ್ನ ಪ್ರಮುಖ ದಾಳಿಗಳಲ್ಲಿ ಭಾಗವಹಿಸಿದ್ದಾರೆ ಎಂದು ಬಿಎಲ್‌ಎ ಹೇಳಿಕೊಂಡಿದೆ.
ಇಬ್ಬರಲ್ಲಿ ಒಬ್ಬರ ಹೆಸರು ಹವಾ ಬಲೂಚ್. ಆಕೆಯ ತಂದೆ ಕೂಡ ಬಿಎಲ್‌ಎ ಹೋರಾಟಗಾರ ಎನ್ನಲಾಗಿದೆ. 2021ರಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಅವರನ್ನು ಕೊಂದಿವೆ ಎನ್ನಲಾಗಿದೆ. ಇನ್ನೊಬ್ಬಳು ಆಸಿಫಾ ಮೆಂಗಲ್ ಎಂದು ಗುರುತಿಸಲಾಗಿದೆ. ಆಕೆ 2002ರಲ್ಲಿ ಜನಸಿದ್ದಾಳೆ. ನುಶಿಕ್‌ನಲ್ಲಿರುವ ಐಎಸ್‌ಐ ಶಿಬಿರದ ಮೇಲೆ ಇತ್ತೀಚೆಗೆ ನಡೆದ ಆತ್ಮಹತ್ಯಾ ದಾಳಿಯಲ್ಲಿ ಅವರು ಭಾಗವಹಿಸಿದ್ದರು ಎಂದು ತಿಳಿಸಿದೆ.
ಇಬ್ಬರು ಯುವತಿಯರನ್ನು ಜನರಲ್ ಝೆಡ್ ಹೋರಾಟಗಾರರು ಎಂದು ಬಿಎಲ್​ಎ ಗುರುತಿಸಿದೆ. ಇಬ್ಬರೂ ಸುಶಿಕ್ಷಿತರು, ದಂಗೆಗೆ ಸೇರುವ ಮೊದಲು ಇಬ್ಬರೂ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಯುವ, ವಿದ್ಯಾವಂತ ಹುಡುಗಿಯರು ಹಲವು ವರ್ಷಗಳಿಂದ ನಡೆಯುತ್ತಿರುವ ಬಲೂಚ್ ಪ್ರತ್ಯೇಕತಾವಾದಿ ಚಳವಳಿಯಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ, ಪಾಕಿಸ್ತಾನದಿಂದ ಬೇರ್ಪಟ್ಟು ಪ್ರತ್ಯೇಕ ಬಲೂಚಿಸ್ತಾನ್ ದೇಶಕ್ಕಾಗಿ ಹೋರಾಟ ಮಾಡ್ತಿದೆ. ಅದರ ಭಾಗವಾಗಿ ಬಿಎಲ್‌ಎ ಪಡೆಗಳು ಪಾಕಿಸ್ತಾನಿ ಸರ್ಕಾರದ ವಿರುದ್ಧ ಹೋರಾಡುತ್ತಿವೆ (ಏಜೆನ್ಸೀಸ್).