ಅಮೆರಿಕ ಅಧಿಕಾರಿಯಿಂದ ಹತ್ಯೆಯಾದ ಭಾರತೀಯ ವಿದ್ಯಾರ್ಥಿನಿ ( Indian Student ) ಜಾಹ್ನವಿ ಕಂದುಲಾ
- 2023ರಲ್ಲಿ ಅಮೆರಿಕದ ಪೊಲೀಸ್ ಅಧಿಕಾರಿಯಿಂದ ಭಾರತೀಯ ಮೂಲದ ವಿದ್ಯಾರ್ಥಿನಿ ಹತ್ಯೆ
- ಪೊಲೀಸ್ ವಾಹನದಲ್ಲಿ ಗಂಟೆ 120 ಕಿ.ಮೀ ವೇಗದಲ್ಲಿ ಬಂದು ಆಂಧ್ರ ಮೂಲದ ಜಾಹ್ನವಿ ಕಂದುಲಾಗೆ ಡಿಕ್ಕಿ
- ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಕುಟುಂಬಕ್ಕೆ ಬರೋಬ್ಬರಿ 29 ಮಿಲಿಯನ್ ಡಾಲರ್ ಪರಿಹಾರ ಘೋಷಣೆ
Indian Student : ಅಮೆರಿಕದ ಪೊಲೀಸ್ ಅಧಿಕಾರಿಯಿಂದ ಹತ್ಯೆಗೀಡಾದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಕುಟುಂಬಕ್ಕೆ ಬರೋಬ್ಬರಿ 29 ಮಿಲಿಯನ್ ಡಾಲರ್ ( 260 ಕೋಟಿ ರೂಪಾಯಿ ) ಪರಿಹಾರವನ್ನು ಸಿಯಾಟಲ್ ಸರ್ಕಾರ ಘೋಷಣೆ ಮಾಡಿರುವುದಾಗಿ ವರದಿಯಾಗಿದೆ.
23 ವರ್ಷದ ಜಾಹ್ನವಿ ಕಂದುಲಾ 2023, ಜನವರಿ 23ರಂದು ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ನಲ್ಲಿ ಮೃತಪಟ್ಟಳು. ಅಲ್ಲಿನ ಪೊಲೀಸ್ ಅಧಿಕಾರಿ ಕೆವಿನ್ ಡೇವ್, ಪೊಲೀಸ್ ವಾಹನದಲ್ಲಿ ಗಂಟೆ 120 ಕಿ.ಮೀ ವೇಗದಲ್ಲಿ ಬಂದು ಜಾಹ್ನವಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಈ ವೇಳೆ ಜಾಹ್ನವಿ ಸ್ಥಳದಲ್ಲೇ ಮೃತಪಟ್ಟಳು. ಈ ಪ್ರಕರಣದ ಸುದೀರ್ಘ ವಿಚಾರಣೆಯ ಬಳಿಕ ಇದೀಗ ಪರಿಹಾರ ಘೋಷಣೆಯಾಗಿದೆ.
ಈ ಬಗ್ಗೆ ಮಾತನಾಡಿರುವ ವಕೀಲೆ ಎರಿಕಾ ಇವಾನ್ಸ್, ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿತ್ತು. ಈ ಆರ್ಥಿಕ ಪರಿಹಾರವು ಕಂದುಲಾ ಕುಟುಂಬಕ್ಕೆ ಸ್ವಲ್ಪ ನೆಮ್ಮದಿಯನ್ನು ತರುತ್ತದೆ ಎಂದು ಸಿಯಾಟಲ್ ನಗರವು ಆಶಿಸುತ್ತದೆ ಎಂದಿದ್ದಾರೆ.
ಅಂದಹಾಗೆ ಜಾಹ್ನವಿ ಆಂಧ್ರ ಪ್ರದೇಶ ಮೂಲದವಳು. ಸಿಯಾಟಲ್ನ ನಾರ್ಥ್ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದಳು. 2023ರ ಜನವರಿ 23ರಂದು ರಸ್ತೆ ದಾಟುತ್ತಿದ್ದ ವೇಳೆ ಜಾಹ್ನವಿಗೆ ಪೊಲೀಸ್ ವಾಹನ ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಳು.
ಬಾಡಿವೋರ್ನ್ ಕ್ಯಾಮೆರಾದಲ್ಲಿ ಸೆರೆ
ಈ ಘಟನೆಯ ಬಳಿಕ ಸಿಯಾಟಲ್ ಪೊಲೀಸ್ ಇಲಾಖೆ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ವಿದ್ಯಾರ್ಥಿನಿಗೆ ಕಾರು ಡಿಕ್ಕಿಯಾದ ಬಳಿಕ ಪೊಲೀಸ್ ಸಿಬ್ಬಂದಿ ಆಕೆಯ ಸಾವನ್ನು ಅಪಹಾಸ್ಯ ಮಾಡಿರುವುದು ಬಹಿರಂಗವಾಗಿತ್ತು. ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರಿಗೆ ಕರೆ ಮಾಡಿದ್ದ ಕಾರಿನಲ್ಲಿದ್ದ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಔಡೆರೆರ್ ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಆದರೆ, ಬಾಡಿ ವೋರ್ನ್ ಕ್ಯಾಮೆರಾ ಇರುವುದನ್ನು ಗಮನಿಸದೇ ವಿದ್ಯಾರ್ಥಿನಿ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದರು. ಆಕೆ ಸತ್ತು ಹೋದಳು ಎಂದು ಹೇಳಿ ಡೇನಿಯಲ್ ಔಡೆರೆರ್ ಗಹಗಹಿಸಿ ನಕ್ಕಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಅಲ್ಲದೆ, ಜಾಹ್ನವಿ ಸಾಮಾನ್ಯ ವ್ಯಕ್ತಿ ಎಂದು ಹೇಳಿದ್ದರು. ಕೇವಲ ಒಂದು ಚೆಕ್ ಬರೆದರೆ ಮುಗಿತು, ಅದು ಕೂಡ ಹನ್ನೊಂದು ಸಾವಿರ ಡಾಲರ್ ಎಂದು ಹೇಳಿ ನಕ್ಕಿದ್ದರು.
ಬಳಿಕ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆಯ ಜತೆಗೆ ಟೀಕೆಗೂ ಗುರಿಯಾಗಿತ್ತು. ಕಿಂಗ್ ಕೌಂಟಿಯ ಪ್ರಾಸಿಕ್ಯೂಟಿಂಗ್ ಅಟಾರ್ನಿ ಲೀಸಾ ಮ್ಯಾನಿಯನ್ ಅವರು ಆಡೆರರ್ ಅಂದು ಆಡಿದ್ದ ಮಾತಿಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದರು. ನಿಜಕ್ಕೂ ಆಡೆರರ್ ಮಾತುಗಳು ಭಯಾನಕ ಎಂದು ಮ್ಯಾನಿಯನ್ ಕರೆದಿದ್ದರು, (ಏಜೆನ್ಸೀಸ್).