2014ರಲ್ಲೇ ಮುಚ್ಚಲ್ಪಟ್ಟ ಶಾಲೆ
- 2014ರಲ್ಲೇ ಮುಚ್ಚಿದ ನ್ಯೂಯಾರ್ಕ್‌ನ ಈ ಬೋರ್ಡಿಂಗ್ ಶಾಲೆ
- ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ, ವಿಪರೀತ ಚಿತ್ರಹಿಂಸೆ
New York: ಮಕ್ಕಳ ಓದು, ಆಟ-ಪಾಠ ಚೆನ್ನಾಗಿರಲಿ, ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ನೂರಾರು ಕನಸುಗಳನ್ನು ಹೊತ್ತು ಶಾಲೆಗೆ ಕಳುಹಿಸುವ ಪೋಷಕರು, ಅದೇ ಮಕ್ಕಳು ಯಾವುದೋ ಬೇಡದ ಕಷ್ಟ, ಚಿತ್ರಹಿಂಸೆಗಳನ್ನು ಅನುಭವಿಸುತ್ತಿದ್ದಾರೆ ಎಂಬ ಕಹಿ ಸತ್ಯವನ್ನು ತಿಳಿದರೆ ಮನಸ್ಸು ಹೇಗಾಗಬೇಡ? ಅಂತದ್ದೊಂದು ಘಟನೆ ಅಮೆರಿಕದ ವಿಚಿತ್ರ ಶಾಲೆಯೊಂದರಲ್ಲಿ ನಡೆದಿತ್ತು ಅನ್ನೋದೇ ಈ ಸ್ಟೋರಿ.
ನ್ಯೂಯಾರ್ಕ್‌ನ ಹ್ಯಾನ್‌ಕಾಕ್‌ನಲ್ಲಿದ್ದ 'ಫ್ಯಾಮಿಲಿ ಫೌಂಡೇಶನ್ ಸ್ಕೂಲ್' ಈಗ ಶಾಶ್ವತವಾಗಿ ಮುಚ್ಚಿದೆ. ಆದರೆ, ಅಂದಿನ ಸಮಯಕ್ಕೆ ಪ್ರತಿಷ್ಠಿತ ಬೋರ್ಡಿಂಗ್ ಶಾಲೆಯಾಗಿ ಹೊರಗಿನ ಜನಕ್ಕೆ ಕಾಣಿಸುತ್ತಿದ್ದದ್ದೇ ಆದರೂ, ಅಲ್ಲಿನ ವಿದ್ಯಾರ್ಥಿಗಳಿಗೆ ಇದೊಂದು ನರಕದ ಸದೃಶ್ಯವಾಗಿತ್ತು ಎಂಬ ಆಘಾತಕಾರಿ ಸಂಗತಿ ನ್ಯಾಯಾಲಯದ ದಾಖಲೆಗಳಿಂದ ಇದೀಗ ಬೆಳಕಿಗೆ ಬಂದಿದೆ.
ಈ ಶಾಲೆಯಲ್ಲಿ ಚಿತ್ರಹಿಂಸೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬರು, ಆಡಳಿತ ಮಂಡಳಿ ವಿರುದ್ಧ 10 ಮಿಲಿಯನ್ ಡಾಲರ್ (ಸುಮಾರು 84 ಕೋಟಿ ರೂ.) ನಷ್ಟ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ. ಪ್ರಕರಣ ಇಂದಿಗೂ ಕೋರ್ಟ್ ಅಂಗಳದಲ್ಲಿದೆ. ಲಕ್ಷ ಲಕ್ಷ ರೂ. ಫೀಜ್ ಪಡೆದು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳುತ್ತಿದ್ದ ಮಾಲೀಕರು, ಆ ಮಕ್ಕಳಿಗೆ ವಿಪರೀತ ಚಿತ್ರಹಿಂಸೆಯನ್ನು ನೀಡುತ್ತಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.
ಅಮಾನವೀಯ ಕಿರುಕುಳ
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಬೆತ್ತಲೆ ಮಾಡಿ ತಪಾಸಣೆ ಮಾಡುವುದು, ಸಮಾಧಿಗೆ ಗುಂಡಿಗಳನ್ನು ತೋಡುವಂತೆ ಹೇಳುವುದು, ವಾಂತಿ ಮಾಡಿಕೊಂಡರೆ, ಅವರೇ ತಿನ್ನುವಂತೆ ಹಿಂಸೆ ನೀಡುವುದು, ತಪ್ಪು ಮಾಡಿದ್ರೆ ವಿದ್ಯಾರ್ಥಿಗಳನ್ನು ಚಾಪೆ ಅಥವಾ ರಗ್‌ಗಳಲ್ಲಿ ಬಿಗಿಯಾಗಿ ಸುತ್ತಿ, ಡಕ್ಟ್ ಟೇಪ್‌ನಿಂದ ಕಟ್ಟಿ ಹಾಕುವುದು ಮಾಡುತ್ತಿದ್ದರು. ಅಕಸ್ಮಾತ್ ಹಿಂಸೆಯನ್ನು ತಾಳಲಾರದೆ ಓಡಿ ಹೋಗುತ್ತಿದ್ದವರನ್ನು ಕೆ9 ಶ್ವಾನಗಳ ಮೂಲಕ ಪತ್ತೆಹಚ್ಚಿ ಹಿಡಿದು ವಾಪಾಸ್ ತರಲಾಗುತ್ತಿತ್ತು.
ಲೈಂಗಿಕ ದೌರ್ಜನ್ಯ
ಶಾಲೆಯ ಮಾಲೀಕ ಮೈಕೇಲ್ ಅರ್ಗಿರೋಸ್ ಮತ್ತು ಶಿಕ್ಷಕರು ಸೇರಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಆರೋಪದಡಿ ಮ್ಯೂಸಿಕ್ ಟೀಚರ್ ಪಾಲ್ ಗೀರ್ ಎಂಬಾತನಿಗೆ ಈಗಾಗಲೇ 27 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರೊಟ್ಟಿಗೆ ವಿದ್ಯಾರ್ಥಿಗಳನ್ನು ಜೀತದಾಳುಗಳಂತೆ ಬಳಸಿಕೊಳ್ಳುತ್ತಿದ್ದ ಶಾಲೆಯ ಮಾಲೀಕರು, ಹಂದಿ ಸಾಕಣೆ ಕೊಠಡಿಯನ್ನು ಸ್ವಚ್ಛ ಹಾಗೂ ತೋಟದ ಕೆಲಸಗಳನ್ನು ಮಾಡಿಸುತ್ತಿದ್ದರು ಎಂಬ ಆರೋಪಗಳಿವೆ.
ಅರ್ಹತೆ ಇಲ್ಲದ ಸಿಬ್ಬಂದಿಗಳು
ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ಶಾಲೆಯನ್ನು ನಡೆಸುತ್ತಿದ್ದ ಸಿಬ್ಬಂದಿಗಳಿಗೆ ಯಾವುದೇ ವೃತ್ತಿಪರ ಶಿಕ್ಷಣ ಅಥವಾ ಕೌನ್ಸೆಲಿಂಗ್ ತರಬೇತಿ ಇರಲೇ ಇಲ್ಲ. ಬದಲಿಗೆ, ಕುಡುಕರು ಮತ್ತು ಲೈಂಗಿಕ ವ್ಯಸನಿಗಳೇ ಇಲ್ಲಿ ಶಿಕ್ಷಕರಾಗಿದ್ದರು ಎನ್ನಲಾಗಿದೆ. ಪೋಷಕರನ್ನು ನಂಬಿಸಿ ಮಕ್ಕಳ ಸಂಪೂರ್ಣ ಕಾನೂನುಬದ್ಧ ರಕ್ಷಣೆಯನ್ನು ಶಾಲೆ ತನ್ನ ವಶಕ್ಕೆ ಪಡೆಯುತ್ತಿತ್ತು ಎನ್ನಲಾಗಿದೆ.
ಇಷ್ಟೆಲ್ಲ ಆರೋಪಗಳು ಕೇಳಿಬಂದರೂ ಶಾಲೆಯ ಮಾಲೀಕ ಮಾತ್ರ ಇದ್ಯಾವುದನ್ನೂ ಒಪ್ಪಿಕೊಂಡಿಲ್ಲ. ನನ್ನ ಅವಧಿಯಲ್ಲಿ ಇಂತಹ ಯಾವುದೇ ಘಟನೆಗಳ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಕೋರ್ಟ್‌ನಲ್ಲಿ ವಾದಿಸಿದ್ದಾನೆ. ಈತನ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ, ತಕ್ಷಣಕ್ಕೆ ಜಾರಿಗೆ ಬರುವಂತೆ 2014ರಲ್ಲೇ ವಿವಾದಿತ ಶಾಲೆಗೆ ಬೀಗ ಜಡಿಯಿತು ಎಂದು ವರದಿಯಾಗಿದೆ,(ಏಜೆನ್ಸೀಸ್).