ಲಕ್ಸುರಿ ಬೆನ್ಜ್ ಕಾರು ಹೂಳಿದ ಕುಟುಂಬ
- ಹೊಸ ಐಷಾರಾಮಿ ಬೆನ್ಜ್ ಕಾರನ್ನು ಮಣ್ಣು ಮಾಡಿದ ಕುಟುಂಬ
- ಚೀನಾದ ಲಿಯಾನಿಂಗ್ ಪ್ರಾಂತ್ಯದ ಲಿಯಾಯಾಂಗ್ ಗ್ರಾಮದಲ್ಲಿ ವಿಚಿತ್ರ ಘಟನೆ
- ಕಾರಿನ ಮೌಲ್ಯ ಸುಮಾರು 1.1 ಮಿಲಿಯನ್ ಯುವಾನ್ (ಅಂದರೆ 1.5 ಕೋಟಿ ರೂ.)
ಬೀಜಿಂಗ್: ಏಪ್ರಿಲ್ 9, 2026ರಂದು, ಚೀನಾದ ಲಿಯಾನಿಂಗ್ ಪ್ರಾಂತ್ಯದ ಲಿಯಾಯಾಂಗ್ ಗ್ರಾಮದಲ್ಲಿ ನಡೆದ ಅಚ್ಚರಿ ಹಾಗೂ ವಿಚಿತ್ರ ಘಟನೆಯೊಂದು ಇದೀಗ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೊಸ ಬೆನ್ಜ್ ಕಾರನ್ನೇ ಮಣ್ಣು ಮಾಡಿದ ಕುಟುಂಬದ ಉದ್ದೇಶ ಕೇಳಿದ ಅನೇಕರು ಅಕ್ಷರಶಃ ಬೆರಗಾಗಿದ್ದಾರೆ.
'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿಯ ಪ್ರಕಾರ, 70 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಯ ಸಮಯದಲ್ಲಿ, ಅವರ ಕುಟುಂಬವು ಮೃತನ ಶವದೊಂದಿಗೆ ಹೊಸ ಐಷಾರಾಮಿ ಕಾರನ್ನು ಮಣ್ಣು ಮಾಡುವ ಮೂಲಕ ಸತ್ತವರ ಆತ್ಮಕ್ಕೆ ಶಾಂತಿ ಕೋರಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ಮತ್ತು ಚರ್ಚೆಗೆ ಗ್ರಾಸವಾಗಿದೆ. ಸಮಾಧಿ ಮಾಡಲಾದ ಕಾರು ಮರ್ಸಿಡಿಸ್ ಬೆನ್ಜ್ S450L ಆಗಿದ್ದು, ಇದರ ಮೌಲ್ಯ ಸುಮಾರು 1.1 ಮಿಲಿಯನ್ ಯುವಾನ್ (ಅಂದರೆ ಸುಮಾರು 1.5 ಕೋಟಿ ರೂ.) ಎಂದು ಅಂದಾಜಿಸಲಾಗಿದೆ.
ಕಪ್ಪು ಬಣ್ಣ ಲಕ್ಸುರಿ ಕಾರು ನೋಡಲು ಮಾತ್ರವಲ್ಲ, ಅದರ ನಂಬರ್ ಪ್ಲೇಟ್ '8888' ಕೂಡ ಗಮನ ಸೆಳೆಯುವಂತಿದೆ. ಅಸಲಿಗೆ ಕುಟುಂಬವು, ಈ ಕಾರನ್ನು ಬಹಳ ಶುಭವೆಂದು ಪರಿಗಣಿಸಿದೆ. ಮೃತ ವ್ಯಕ್ತಿಗೆ ಐಷಾರಾಮಿ ಕಾರುಗಳ ಬಗ್ಗೆ ಅತಿಯಾದ ಒಲವಿತ್ತು. ಕಾರುಗಳ ಕಲೆಕ್ಷನ್ನಿಂದ ಆತ ಪ್ರಭಾವಿತನಾಗಿದ್ದ. ಹೀಗಾಗಿ, ಅವರ ಅಗಲಿಕೆಯ ಬೆನ್ನಲ್ಲೇ ದೇಹದ ಜೊತೆಗೆ ನೆಚ್ಚಿನ ಕಾರನ್ನು ಹೂಳಿ, ಮರಣದ ನಂತರದಲ್ಲಿ ಮೃತರ ಆತ್ಮಕ್ಕೆ ನೆಮ್ಮದಿ ಸಿಕ್ಕಂತಾಗುತ್ತದೆ ಎಂಬುದು ಕುಟುಂಬಸ್ಥರ ನಂಬಿಕೆ. ಸಾಂಪ್ರದಾಯಿಕವಾಗಿ ಚೀನಾದಲ್ಲಿ, ಜನರು ಸಾಮಾನ್ಯವಾಗಿ ಕಾಗದದ ವಸ್ತುಗಳನ್ನು ಸುಡುತ್ತಾರೆ. ಆದರೆ ಇಲ್ಲಿ ಕಾರನ್ನೇ ಹೂಳಲಾಗಿದೆ.
ಕಾರಿನ ಮೇಲೆ ಕೆಂಪು ಬಟ್ಟೆ ಮತ್ತು ರಿಬ್ಬನ್‌ಗಳಿಂದ ಅಲಂಕರಿಸಿದ ಕುಟುಂಬಸ್ಥರು, ಗ್ರಾಮಸ್ಥರ ಸಮ್ಮುಖದಲ್ಲೇ ಈ ಪ್ರಕ್ರಿಯೆಯನ್ನು ನೆರವೇರಿಸಿದ್ದಾರೆ. ವಿಡಿಯೊ ವೈರಲ್ ಆದ ತಕ್ಷಣ, ಜನರು ಇದನ್ನು ವ್ಯರ್ಥ ಮತ್ತು ಆಡಂಬರ ಎಂದು ಟೀಕಿಸಿದ್ದಾರೆ. ಇದು ಪರಿಸರಕ್ಕೆ ಹಾನಿಕಾರಕವೂ ಹೌದು ಮತ್ತು ಇಂತಹ ಕ್ರಮಗಳು ಕೆಟ್ಟ ಉದಾಹರಣೆಗೆ ಸಾಕ್ಷಿಯಾಗುತ್ತವೆ ಎಂದು ಅನೇಕ ಬಳಕೆದಾರರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).