Explosion 
ವಿದೇಶ

100 ಕ್ಕೂ ಅಧಿಕ ಜನರು ಪಾರ್ಟಿ ಮಾಡುತ್ತಿದ್ದ ಸ್ವಿಸ್ ಬಾರ್‌ ಸ್ಫೋಟ: ಹಲವರ ಸಾವಿನ ಶಂಕೆ!

ಸ್ವಿಟ್ಜರ್ಲೆಂಡ್‌: ಸ್ವಿಟ್ಜರ್ಲೆಂಡ್‌ನ ವಾಲೈಸ್ ಕ್ಯಾಂಟನ್‌ನಲ್ಲಿರುವ ಐಷಾರಾಮಿ ಸ್ಕೀ ರಿಸಾರ್ಟ್ ಟೌನ್ ಕ್ರಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷದ ಮುನ್ನಾದಿನದ ಸಂಭ್ರಮಾಚರಣೆಯ ಸಮಯದಲ್ಲಿ ಭಯಾನಕ ಸ್ಫೋಟ ಸಂಭವಿಸಿದೆ.
ಲೆ ಕಾನ್ಸ್ಟೆಲೇಷನ್ ಬಾರ್ ಅಂಡ್ ಲಾಂಜ್‌ನಲ್ಲಿ ಸ್ಥಳೀಯ ಸಮಯ ಸುಮಾರು(ಗುರುವಾರ) ರಾತ್ರಿ 1:30ಕ್ಕೆ (GMT 00:30) ಈ ಸ್ಫೋಟ ನಡೆದಿದ್ದು, ಹಲವು ಜನರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಪೊಲೀಸ್ ವಕ್ತಾರ ಗೇಟನ್ ಲ್ಯಾಥಿಯನ್ ಅವರು AFPಗೆ ನೀಡಿದ ಹೇಳಿಕೆಯಲ್ಲಿ, " ಕಾರಣ ಗೊತ್ತಿಲ್ಲ ಆದರೆ, ಸ್ಫೋಟ ಸಂಭವಿಸಿದೆ. ಹಲವು ಗಾಯಾಳುಗಳಿದ್ದಾರೆ ಮತ್ತು ಹಲವು ಮೃತರು ಇದ್ದಾರೆ" ಎಂದು ತಿಳಿಸಿದ್ದಾರೆ.
ಸ್ಫೋಟದ ಸಮಯದಲ್ಲಿ ಬಾರ್‌ನಲ್ಲಿ 100ಕ್ಕೂ ಹೆಚ್ಚು ಜನರು ಇದ್ದರು ಎಂದು ಸ್ವಿಸ್ ಮಾಧ್ಯಮಗಳು ವರದಿ ಮಾಡಿವೆ. ಈ ಬಾರ್ ಪ್ರವಾಸಿಗರಲ್ಲಿ ಜನಪ್ರಿಯವಾದ ಸ್ಥಳವಾಗಿದ್ದು, ಹೊಸ ವರ್ಷದ ಪಾರ್ಟಿಯಲ್ಲಿ ಸಂಗೀತ ಕಾರ್ಯಕ್ರಮ ಮತ್ತು ಆಚರಣೆ ನಡೆಯುತ್ತಿತ್ತು.
ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಭಾಗ ಜ್ವಾಲೆಗಳಲ್ಲಿ ಮುಳುಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ವೀಡಿಯೊಗಳಲ್ಲಿ ಬೆಂಕಿ ಮತ್ತು ತುರ್ತು ಸೇವೆಗಳ ಆಗಮನ ಕಾಣಿಸುತ್ತಿದೆ. ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಿವೆ. ಸ್ವಿಸ್ ಏರ್ ರೆಸ್ಕ್ಯೂ ಸೇವೆಯ ವೈದ್ಯರು ಆಸ್ಪತ್ರೆಗಳು ಸುಟ್ಟ ಗಾಯಗಳಿಂದ ಬಂದ ರೋಗಿಗಳಿಂದ ತುಂಬಿ ತುಳುಕುತ್ತಿವೆ ಎಂದು ತಿಳಿಸಿದ್ದಾರೆ.
ಸ್ಥಳವನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ನೋ-ಫ್ಲೈ ಜೋನ್ ಘೋಷಿಸಲಾಗಿದೆ. ಕೆಲವು ವರದಿಗಳ ಪ್ರಕಾರ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ, ಅಧಿಕೃತ ಸಾವಿನ ಸಂಖ್ಯೆ ಇನ್ನೂ ಬಿಡುಗಡೆಯಾಗಿಲ್ಲ.ಸ್ಫೋಟದ ಕಾರಣ ತಿಳಿದಿಲ್ಲವಾದರೂ, ತನಿಖೆ ನಡೆಯುತ್ತಿದೆ,(ಏಜೆನ್ಸೀಸ್).