ವಿದೇಶ

ಮರಣದಂಡನೆ ಲೈವ್​!....13 ಸೈನಿಕರನ್ನು ಕೊಂದವನಿಗೆ ಶಿಕ್ಷೆ

ಅಮೆರಿಕದಲ್ಲಿ ಮೊದಲ ಬಾರಿಗೆ ಮರಣದಂಡನೆ ಲೈವ್​ ಟಿವಿಯಲ್ಲಿ ಪ್ರಸಾರವಾಗಲಿದೆ! ಸೇನೆಯ ಮಾಜಿ ಮೇಜರ್​ ನಿದಾಲ್​ ಹಸನ್​ ಮರಣದಂಡನೆ ಶಿಕ್ಷೆ ಅನುಭವಿಸಲಿರುವ ವ್ಯಕ್ತಿ. 2009ರಲ್ಲಿ ಟೆಕ್ಸಾಸ್​ನ ಸೇನಾ ನೆಲೆಯಲ್ಲಿ ಹಸನ್​ ಗುಂಡಿನ ದಾಳಿ ನಡೆಸಿದ್ದ.

ಅಮೆರಿಕದಲ್ಲಿ ಮೊದಲ ಬಾರಿಗೆ ಮರಣದಂಡನೆ ಲೈವ್​ ಟಿವಿಯಲ್ಲಿ ಪ್ರಸಾರವಾಗಲಿದೆ! ಸೇನೆಯ ಮಾಜಿ ಮೇಜರ್​ ನಿದಾಲ್​ ಹಸನ್​ ಮರಣದಂಡನೆ ಶಿಕ್ಷೆ ಅನುಭವಿಸಲಿರುವ ವ್ಯಕ್ತಿ. 2009ರಲ್ಲಿ ಟೆಕ್ಸಾಸ್​ನ ಸೇನಾ ನೆಲೆಯಲ್ಲಿ ಹಸನ್​ ಗುಂಡಿನ ದಾಳಿ ನಡೆಸಿದ್ದ. ಈ ಘಟನೆಯಲ್ಲಿ 13 ಸೈನಿಕರು ಪ್ರಾಣ ಕಳೆದುಕೊಂಡಿದ್ದರು. 2026ರ ಡಿಸೆಂಬರ್​ 3ರಂದು ಅದೇ ಸ್ಥಳದಲ್ಲಿ ಹಸನ್​ಗೆ ಗುಂಡು ಹಾರಿಸಿ ಶಿಕ್ಷೆ ವಿಧಿಸಲಾಗುತ್ತದೆ. ಸಾರ್ವಜನಿಕರು ಇದನ್ನು ವೀಕ್ಷಿಸುವಂತೆ ಶಿಕ್ಷೆಯ ನೇರ ಪ್ರಸಾರ (ಲೈವ್​ ಟೆಲಿಕಾಸ್ಟ್​) ಮಾಡಲಾಗುವುದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟರ್​ ಹೆಗ್ಸೆತ್​ ತಿಳಿಸಿದ್ದಾರೆ. 1961ರ ನಂತರ ಅಮೆರಿಕದ ಸೇನಾ ನ್ಯಾಯ ವ್ಯವಸ್ಥೆಯ ಅಡಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗುತ್ತಿರುವ ಮೊದಲ ವ್ಯಕ್ತಿ ನಿದಾಲ್​ ಹಸನ್​. ಸೇನಾ ವ್ಯವಸ್ಥೆಯಲ್ಲಿ ಕೊನೆಯ ಬಾರಿಗೆ ಜಾನ್​ ಎ. ಬೆನೆಟ್​ಗೆ ಮರಣದಂಡನೆ ವಿಧಿಸಲಾಗಿತ್ತು. ಯಾರು ಈ ನಿದಾಲ್​ ಹಸನ್​, ಆತ 13 ಸೈನಿಕರನ್ನು ಕೊಂದಿದ್ದು ಏಕೆ? ಮರಣದಂಡನೆಯ ಜಾರಿ ಹೇಗೆ? ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.

ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ಸೇನಾ ನೆಲೆ ಮೇಲಿನ ಆಂತರಿಕ ದಾಳಿಯ ಅಪರಾಧಿ ನಿದಾಲ್​ ಮಲಿಕ್​ ಹಸನ್​. ಎಫ್​ಬಿಐ ಮಾಜಿ ನಿರ್ದೇಶಕ ವಿಲಿಯಂ ವೆಬ್​ಸ್ಟರ್​ ನೇತೃತ್ವದಲ್ಲಿ ನಡೆದ ತನಿಖಾ ವರದಿಯ ಪ್ರಕಾರ, 2009ರ ನವೆಂಬರ್​ 5ರಂದು ಮಧ್ಯಾಹ್ನ 1 ಗಂಟೆಗೆ ನಿದಾಲ್​ ಫೋರ್ಟ್​ ಹುಡ್​ ನೆಲೆಯ ವೈದ್ಯಕೀಯ ಸೌಲಭ್ಯ ಕೇಂದ್ರಕ್ಕೆ ಪ್ರವೇಶಿಸಿದ. ಮೇಜಿನ ಮೇಲೆ ಹತ್ತಿ ನಿಂತು ಧಾರ್ಮಿಕ ಘೋಷಣೆ ಕೂಗಿದ ಆತ, ತನ್ನಲ್ಲಿದ್ದ ಎರಡು ಪಿಸ್ತೂಲ್​ಗಳಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದ. ಪಾರ್ಕಿಂಗ್​ ಕಡೆಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಯೋಧರ ಬೆನ್ನಿಗೂ ಗುಂಡು ಹಾರಿಸಿದ. ಈ ದಾಳಿಯಲ್ಲಿ 12 ಅಮೆರಿಕನ್​ ಯೋಧರು ಹಾಗೂ ಅಮೆರಿಕದ ರಕ್ಷಣಾ ಇಲಾಖೆಯ ಓರ್ವ ನೌಕರ ಸೇರಿದಂತೆ ಒಟ್ಟು 13 ಮಂದಿ ಪ್ರಾಣ ಕಳೆದುಕೊಂಡರು ಮತ್ತು 32 ಜನರು ತೀವ್ರವಾಗಿ ಗಾಯಗೊಂಡರು. ಪೊಲೀಸರ ಪ್ರತಿ ದಾಳಿಯಲ್ಲಿ ಗಾಯಗೊಂಡ ನಿದಾಲ್​, ಪಾರ್ಶ್ವವಾಯುವಿಗೆ ತುತ್ತಾಗಿ ಅಂದಿನಿಂದ ಗಾಲಿಕುರ್ಚಿಯಲ್ಲೇ ಕಾಲ ಕಳೆಯುತ್ತಿದ್ದಾನೆ. ಆತ ಈ ದಾಳಿಗೆ ಹಲವು ವಾರಗಳ ಕಾಲ ಸಿದ್ಧತೆ ನಡೆಸಿದ್ದು, ಅತಿ ವೇಗವಾಗಿ ಮ್ಯಾಗಜೀನ್​ ರೀಲೋಡ್​ ಮಾಡುವುದನ್ನು ಕಲಿತಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಟ್ಟಡದೊಳಗೆ 146 ಖಾಲಿ ಕಾಡತೂಸುಗಳು ಪತ್ತೆಯಾಗಿದ್ದವು ಹಾಗೂ ಆತನ ಬಳಿ ಇನ್ನೂ 177 ಜೀವಂತ ಕಾಡತೂಸುಗಳು ಬಾಕಿ ಉಳಿದಿದ್ದವು.

ನ್ಯಾಯಾಲಯದ ತೀರ್ಪು

ಅಮೆರಿಕದ ಮಿಲಿಟರಿ ನ್ಯಾಯಾಲಯವು 2013ರ ಆಗಸ್ಟ್​ 28ರಂದು ನಿದಾಲ್​ ಹಸನ್​ನನ್ನು ದೋಷಿ ಎಂದು ಘೋಷಿಸಿ ಮರಣದಂಡನೆ ಶಿಕ್ಷೆ ವಿಧಿಸಿತು. ವಿಚಾರಣೆಯ ಸಮಯದಲ್ಲಿ ಆತ ತನ್ನ ಪರವಾಗಿ ಯಾವುದೇ ಸಾಕ್ಷಿಯನ್ನು ಹಾಜರುಪಡಿಸಲಿಲ್ಲ ಅಥವಾ ಆರೋಪಗಳಿಂದ ಮುಕ್ತಿ ಪಡೆಯಲು ಯತ್ನಿಸಲಿಲ್ಲ. 2026ರ ಅಕ್ಟೋಬರ್​ 2ರಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟರ್​ ಹೆಗ್ಸೆತ್​ ಶಿಫಾರಸಿನ ಮೇರೆಗೆ, ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಿದಾಲ್​ನ ಮರಣದಂಡನೆ ಶಿಕ್ಷೆಯನ್ನು ಅನುಮೋದಿಸಿದ್ದಾರೆ.

ಯಾರು ಈ ಮಲಿಕ್​ ಹಸನ್​?

ಐವತ್ತಾರು ವರ್ಷ ವಯಸ್ಸಿನ ನಿದಾಲ್​ ಮಲಿಕ್​ ಹಸನ್​ ಅಮೆರಿಕದ ವರ್ಜೀನಿಯಾ ರಾಜ್ಯದಲ್ಲಿ ಜನಿಸಿದವನು. ಈತನ ಪಾಲಕರು ಪೆಲೆಸ್ತೀನ್​ ಮೂಲದವರಾಗಿದ್ದು, ಜೆರುಸಲೇಂ ಸಮೀಪದ ಸಣ್ಣ ಪಟ್ಟಣವೊಂದರಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. 1995ರಲ್ಲಿ ಪದವಿ ಪಡೆಯುತ್ತಿದ್ದ ಸಮಯದಲ್ಲಿ ನಿದಾಲ್​ ಅಮೆರಿಕದ ರಿಸರ್ವ್​ ಆಫೀಸರ್ಸ್​ ಟ್ರೈನಿಂಗ್​ ಕಾರ್ಪ್ಸ್​ನಲ್ಲಿ (ಆರ್​ಒಟಿಸಿ) ತರಬೇತಿ ಪಡೆದ. ನಂತರ ಕುಟುಂಬಸ್ಥರ ವಿರೋಧದ ನಡುವೆಯೂ ಅಮೆರಿಕದ ಸೇನೆಗೆ ಸೇರ್ಪಡೆಗೊಂಡ. 2003ರಲ್ಲಿ ಮನೋವೈದ್ಯಶಾಸ್ತ್ರದಲ್ಲಿ ಪದವಿ ಪಡೆದ ಆತನಿಗೆ 2005ರಲ್ಲಿ ವೈದ್ಯಕೀಯ ಅಭ್ಯಾಸದ ಪರವಾನಗಿ ದೊರೆಯಿತು.

ಮೇರಿಲ್ಯಾಂಡ್​ನ ಇಮಾಮ್​ ಫೈಜುಲ್​ ಖಾನ್​ ಪ್ರಕಾರ, ನಿದಾಲ್​ ಕಟ್ಟಾ ಧಾರ್ಮಿಕ ಪ್ರವೃತ್ತಿಯ ವ್ಯಕ್ತಿಯಾಗಿದ್ದ. ವಾಷಿಂಗ್ಟನ್​ನಲ್ಲಿದ್ದಾಗ ಆತ ನಿತ್ಯವೂ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದ. ದಾಳಿಗೆ ಸುಮಾರು ಒಂದು ವರ್ಷದ ಮೊದಲು (2008ರ ಡಿಸೆಂಬರ್​ 17), ನಿದಾಲ್​ ಅಮೆರಿಕದ ವಿರುದ್ಧ ಹಿಂಸಾತ್ಮಕ ಜಿಹಾದ್​ ಬೋಧಿಸುತ್ತಿದ್ದ ಅನ್ವರ್​ ಅಲ್​-ಅವ್ಲಾಕಿ ಎಂಬ ಉಗ್ರ ಮೌಲ್ವಿಯನ್ನು ಇ-ಮೇಲ್​ ಮೂಲಕ ಸಂಪರ್ಕಿಸಿದ್ದ. 2009ರ ಜನವರಿಯಿಂದ ಜೂನ್​ವರೆಗೆ ನಿದಾಲ್​ ಆತನೊಂದಿಗೆ 17 ಬಾರಿ ಇ-ಮೇಲ್​ ಸಂಭಾಷಣೆ ನಡೆಸಿದ್ದ. ಯುದ್ಧದಿಂದ ಹಿಂತಿರುಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಸೈನಿಕರಿಗೆ ವಾಷಿಂಗ್ಟನ್​ನ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದ ನಿದಾಲ್​ನನ್ನು, ಅಕ್ಟೋಬರ್​ ತಿಂಗಳಲ್ಲಿ ಅಫ್ಘಾನಿಸ್ತಾನಕ್ಕೆ ನಿಯೋಜಿಸಲು ನಿರ್ಧರಿಸಲಾಯಿತು. ಆದರೆ, ಇರಾಕ್​ ಮತ್ತು ಅಫ್ಘಾನಿಸ್ತಾನದಲ್ಲಿ ಮುಸ್ಲಿಮರ ವಿರುದ್ಧ ಹೋರಾಡಲು ಅಮೆರಿಕನ್​ ಸೈನಿಕರನ್ನು ಕಳುಹಿಸುವುದನ್ನು ಆತ ಬಲವಾಗಿ ವಿರೋಧಿಸುತ್ತಿದ್ದ. ಅಲ್ಲದೆ, ಆತ ಒಸಾಮಾ ಬಿನ್​ ಲಾಡೆನ್​ನನ್ನು ಸಮರ್ಥಿಸುತ್ತಿದ್ದ ಹಾಗೂ ಭಯೋತ್ಪಾದನೆ ವಿರುದ್ಧದ ಅಮೆರಿಕದ ಯುದ್ಧವು ವಾಸ್ತವವಾಗಿ ಇಸ್ಲಾಂ ವಿರುದ್ಧದ ಯುದ್ಧ ಎಂದು ಪ್ರತಿಪಾದಿಸುತ್ತಿದ್ದ.

ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆ ಎಲ್ಲೆಲ್ಲಿದೆ?

ಪ್ರಸ್ತುತ ಇಡೀ ಜಗತ್ತಿನಲ್ಲಿ ಮೂರು ದೇಶಗಳಲ್ಲಿ ಮಾತ್ರ ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ.

ಇರಾನ್​: ಇಲ್ಲಿ ನಡುರಸ್ತೆಯಲ್ಲಿ ಕ್ರೇನ್​ಗಳ ಮೂಲಕ ನೇಣು ಹಾಕಿ ಮರಣದಂಡನೆ ವಿಧಿಸಲಾಗುತ್ತದೆ. 2025ರಲ್ಲಿ ಕನಿಷ್ಠ 11 ಜನರನ್ನು ಈ ರೀತಿಯಾಗಿ ಗಲ್ಲಿಗೇರಿಸಲಾಗಿದೆ.

ಅಫ್ಘಾನಿಸ್ತಾನ: ತಾಲಿಬಾನಿಗಳು ಮೈದಾನಗಳಲ್ಲಿ ನಿಲ್ಲಿಸಿ ಗುಂಡು ಹಾರಿಸಿ ಹತ್ಯೆ ಮಾಡುತ್ತಾರೆ. 2025ರಲ್ಲಿ ಕನಿಷ್ಠ 6 ಜನರಿಗೆ ಹೀಗೆ ಶಿಕ್ಷೆ ಜಾರಿಗೊಳಿಸಲಾಗಿದೆ.

ಉತ್ತರ ಕೊರಿಯಾ: ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಆದೇಶದ ಮೇರೆಗೆ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಲಾಗುತ್ತದೆ.

ಈ ಹಿಂದೆ ಸೌದಿ ಅರೇಬಿಯಾದಲ್ಲೂ ಗಂಭೀರ ಅಪರಾಧಗಳಿಗೆ ಸಾರ್ವಜನಿಕವಾಗಿ ಶಿರಚ್ಛೇದ ಮಾಡುವ ಮೂಲಕ ಮರಣದಂಡನೆ ನೀಡಲಾಗುತ್ತಿತ್ತು, ಆದರೆ ಈಗ ಆ ವಿಧಾನವನ್ನು ಸ್ಥಗಿತಗೊಳಿಸಲಾಗಿದೆ.

ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್ನ್ಯಾಷನಲ್​ ಪ್ರಕಾರ, ಅಫ್ಘಾನಿಸ್ತಾನ, ಚೀನಾ, ಉತ್ತರ ಕೊರಿಯಾ, ಸೌದಿ ಅರೇಬಿಯಾ, ಸೊಮಾಲಿಯಾ, ತೈವಾನ್​, ಯುಎಇ ಮತ್ತು ಯೆಮೆನ್​ ದೇಶಗಳಲ್ಲಿ ಗುಂಡಿಕ್ಕಿಯೂ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗುತ್ತದೆ.

ಭಾರತದಲ್ಲಿ, ಸಾಮಾನ್ಯ ಅಪರಾಧಿಗಳಿಗೆ ಜೈಲಿನೊಳಗೆ ನೇಣು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಮಿಲಿಟರಿ ಅಪರಾಧಿಗಳ (ಸೇನಾ ಸಿಬ್ಬಂದಿ) ವಿಷಯದಲ್ಲಿ, ನೇಣು ಹಾಕಬೇಕೆ ಅಥವಾ ಗುಂಡು ಹಾರಿಸಬೇಕೆ ಎಂಬುದನ್ನು ಮಿಲಿಟರಿ ಕೋರ್ಟ್​ (ಸೇನಾ ನ್ಯಾಯಾಲಯ) ನಿರ್ಧರಿಸಬಹುದು.

ನೇರಪ್ರಸಾರವೇಕೆ?

ನಿದಾಲ್​ ಹಸನ್​ನ ಮರಣದಂಡನೆಗೆ ಡಿಸೆಂಬರ್​ 3ರಂದು ಮಧ್ಯಾಹ್ನ 1 ಗಂಟೆಯ ಸಮಯ ನಿಗದಿಪಡಿಸಲಾಗಿದೆ. ಅಕ್ಟೋಬರ್​ 8ರಂದು ಈ ಕುರಿತು ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟರ್​ ಹೆಗ್ಸೆತ್​, "ಸೇನಾ ಸಮವಸ್ತ್ರದಲ್ಲಿದ್ದ ಓರ್ವ ಇಸ್ಲಾಮಿಕ್​ ಮೂಲಭೂತವಾದಿ ನಮ್ಮ ಸೈನಿಕರ ಮೇಲೆಯೇ ದಾಳಿ ನಡೆಸಿದ್ದ. ಆದ್ದರಿಂದ ಆತನನ್ನು ಸೇನೆಯ ಫೈರಿಂಗ್​ ಸ್ಕ್ವಾಡ್​ (ಗುಂಡು ಹಾರಿಸುವ ದಳ) ಮೂಲಕವೇ ಹೊಡೆದುರುಳಿಸಲಾಗುವುದು. ಹಾಗೆಯೇ ಆಗಬೇಕು ಮತ್ತು ಜನರೆಲ್ಲರೂ ಇದನ್ನು ನೋಡುವಂತೆ ನಾವು ಖಚಿತಪಡಿಸುತ್ತೇವೆ. ಇದನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಲಾಗುವುದು. ಇಂತಹ ಕೃತ್ಯಗಳ ಪರಿಣಾಮಗಳು ಎಷ್ಟು ಗಂಭೀರವಾಗಿರುತ್ತವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ' ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ ಬರೋಬ್ಬರಿ 90 ವರ್ಷಗಳ ಹಿಂದೆ, ಅಂದರೆ 1936ರ ಆಗಸ್ಟ್​ 14ರಂದು ಕೆಂಟುಕಿ ಪ್ರಾಂತ್ಯದಲ್ಲಿ 22 ವರ್ಷದ ಕಪ್ಪುವರ್ಣೀಯ ಯುವಕ ರೈನಿ ಬೆಥಿಯಾ ಎಂಬಾತನಿಗೆ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ನೀಡಲಾಗಿತ್ತು. ಆತನ ಮೇಲೆ 70 ವರ್ಷದ ಬಿಳಿಯ ವೃದ್ಧೆಯೊಬ್ಬರ ಮೇಲಿನ ಅತ್ಯಾಚಾರದ ಆರೋಪವಿತ್ತು. ಯುಎಸ್​ ಸೇನೆಯಲ್ಲಿ ಸೈನಿಕನೊಬ್ಬನಿಗೆ ಕೊನೆಯದಾಗಿ ಮರಣದಂಡನೆ ವಿಧಿಸಿದ್ದು 65 ವರ್ಷಗಳ ಹಿಂದೆ, ಅಂದರೆ 1961ರಲ್ಲಿ. ಜಾನ್​ ಬೆನೆಟ್​ ಎಂಬ ಸೈನಿಕನನ್ನು ಫೈರಿಂಗ್​ ಸ್ಕ್ವಾಡ್​ ಮೂಲಕ ಗುಂಡಿಕ್ಕಿ ಕೊಲ್ಲಲಾಗಿತ್ತು.

ಅಮೆರಿಕದಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಮರಣದಂಡನೆಯ ವಿಧಾನವನ್ನು ಆಯಾ ರಾಜ್ಯಗಳೇ ನಿರ್ಧರಿಸುತ್ತವೆ. ಒಟ್ಟು 50 ರಾಜ್ಯಗಳ ಪೈಕಿ 27 ರಾಜ್ಯಗಳು, ಅಮೆರಿಕ ಸೇನೆ ಹಾಗೂ ಫೆಡರಲ್​ ಸರ್ಕಾರ ಮರಣದಂಡನೆ ಶಿೆಯನ್ನು ಜಾರಿಗೊಳಿಸುತ್ತವೆ. ಆದಾಗ್ಯೂ, 2020ರಲ್ಲಿ ಡೊನಾಲ್ಡ್​ ಟ್ರಂಪ್​ ಅಧಿಕಾರಾವಧಿಗಿಂತ ಮುಂಚೆ ಫೆಡರಲ್​ ಸರ್ಕಾರವು 20 ವರ್ಷಗಳ ಕಾಲ ಮರಣದಂಡನೆಯ ಮೇಲೆ ನಿಷೇಧ ಹೇರಿತ್ತು. 2020ರಲ್ಲಿ ತಮ್ಮ ಮೊದಲ ಅವಧಿಯ ಅಧಿಕಾರಾವಧಿಯಲ್ಲಿ ಟ್ರಂಪ್​ ಈ ನಿಷೇಧವನ್ನು ತೆರವುಗೊಳಿಸಿದರು ಮತ್ತು ಆರಂಭಿಕ 6 ತಿಂಗಳುಗಳಲ್ಲೇ 13 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ನಂತರ ಜೋ ಬೈಡೆನ್​ ಆಡಳಿತವು ಮರಣದಂಡನೆಗೆ ಮತ್ತೆ ತಡೆ ನೀಡಿತು. ಆದರೆ 2025ರಲ್ಲಿ ಟ್ರಂಪ್​ ತಮ್ಮ ಎರಡನೇ ಅಧಿಕಾರಾವಧಿಯ ಮೊದಲ ದಿನವೇ ಮರಣದಂಡನೆಯನ್ನು ಪುನರ್​ ಜಾರಿಗೆ ತಂದರು. ಫೆಡರಲ್​ ಸರ್ಕಾರವು ನೇಣು ಶಿಕ್ಷೆಯ ಹೊರತಾಗಿ ಗುಂಡು ಹಾರಿಸುವುದು, ಎಲೆಕ್ಟ್ರಿಕ್​ ಶಾಕ್​ ಅಥವಾ ವಿಷಕಾರಿ ಅನಿಲದ ಮೂಲಕ ಮರಣದಂಡನೆ ನೀಡುತ್ತದೆ. ಹಿಂದೆ ವಿಷಕಾರಿ ಇಂಜೆಕ್ಷನ್‌ಗಳನ್ನು ಕೂಡ ನೀಡಲಾಗುತ್ತಿತ್ತು.