ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್(Asim Munir)
ಇಸ್ಲಾಮಾಬಾದ್: ಪಾಕಿಸ್ತಾನಿ ಸೇನೆಯು ಅಲ್ಲಾಹನ ಸೇನೆಯಾಗಿದೆ ಮತ್ತು ಮುಸ್ಲಿಂ ಅಲ್ಲಾಹನಲ್ಲಿ ನಂಬಿಕೆ ಇಟ್ಟಾಗ, ಶತ್ರುಗಳ ಮೇಲೆ ಎಸೆಯುವ ಪ್ರತಿ ಬಾಂಬ್ ಕ್ಷಿಪಣಿಯಾಗಿ ಬದಲಾಗುತ್ತದೆ ಎಂದು ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್(Asim Munir) ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಜೋರ್ಡಾನ್‌ನ ರಾಜ ಅಬ್ದುಲ್ಲಾ II ರ ಗೌರವಾರ್ಥವಾಗಿ ಆಯೋಜಿಸಲಾದ ಭೋಜನ ಕೂಟದಲ್ಲಿ ಮಾತನಾಡಿದ ಮುನೀರ್, ಯಾರಾದರೂ ಪಾಕಿಸ್ತಾನದ ಮೇಲೆ ಮತ್ತೆ ಯುದ್ಧ ಹೇರಲು ಪ್ರಯತ್ನಿಸಿದರೆ, ಅವರಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ, ಮೇ ತಿಂಗಳಲ್ಲಿ ಭಾರತದೊಂದಿಗಿನ ನಡೆದ ನಾಲ್ಕು ದಿನಗಳ ಸಂಘರ್ಷದಲ್ಲಿ ಪಾಕಿಸ್ತಾನವು ಜಯ ಸಾಧಿಸಿದೆ ಎಂದು ಮುನೀರ್ ಮತ್ತೊಮ್ಮೆ ಸುಳ್ಳು ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನಿ ಸೇನೆಯು ಭಾರತದ ದಾಳಿಯನ್ನು ಬಲವಾಗಿ ವಿರೋಧಿಸಿತು ಎಂದು ತಿಳಿಸಿದ್ದಾರೆ.
ಭಾರತದೊಂದಿಗಿನ ಯುದ್ಧದ ಸಮಯದಲ್ಲಿ ಅಲ್ಲಾಹನು ನಮ್ಮ ತಲೆ ಎತ್ತಲು ಸಹಾಯ ಮಾಡಿದನು. ಅಲ್ಲದೆ, ಒಬ್ಬ ಮುಸ್ಲಿಂ ತನ್ನ ಅಲ್ಲಾಹನಲ್ಲಿ ನಂಬಿಕೆ ಇಟ್ಟಾಗ, ಶತ್ರುಗಳ ಮೇಲೆ ಎಸೆದ ಪ್ರತಿ ಬಾಂಬ್ ಕ್ಷಿಪಣಿಯಾಗಿ ಬದಲಾಗುತ್ತದೆ. ನಾವು ಅಲ್ಲಾಹನ ಆದೇಶದಂತೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ. ಅಲ್ಲಾಹನ ಸಹಾಯದಿಂದ ಪಾಕಿಸ್ತಾನ ತನ್ನ ಶತ್ರುಗಳ ವಿರುದ್ಧ ಹೋರಾಡಿದೆ. ಪಾಕಿಸ್ತಾನ ಸೇನೆಯು ಅಲ್ಲಾಹನ ಸೈನ್ಯವಾಗಿದೆ. ನಮ್ಮ ಸೈನಿಕರು ಅಲ್ಲಾಹನ ಹೆಸರಿನಲ್ಲಿ ಶತ್ರುಗಳ ವಿರುದ್ಧ ಹೋರಾಡುತ್ತಾರೆ ಎಂದು ಮುನೀರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಜೋರ್ಡಾನ್ ಜೊತೆಗಿನ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ಬದ್ಧತೆಯನ್ನು ಅಸಿಮ್ ಮುನೀರ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಿಲಿಟರಿ ಸಹಕಾರವನ್ನು ಹೆಚ್ಚಿಸಲು ಮತ್ತು ಶಾಂತಿಯುತ ಪ್ರದೇಶದ ಪರಸ್ಪರ ದೃಷ್ಟಿಕೋನವನ್ನು ಜಂಟಿಯಾಗಿ ಸಾಕಾರಗೊಳಿಸಲು ಎಲ್ಲಾ ಕ್ರಮಗಳ ಬಗ್ಗೆ ಪಾಕಿಸ್ತಾನಕ್ಕೆ ಭರವಸೆ ನೀಡಿದ್ದಾರೆ. ಜೋರ್ಡಾನ್ ರಾಜ ಅಬ್ದುಲ್ಲಾ II, ತಮ್ಮ ನಿಯೋಗದೊಂದಿಗೆ ಎರಡು ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡಿದರು,(ಏಜೆನ್ಸೀಸ್).