ನಕಲಿ ಪಿಜ್ಜಾ ಹಟ್ ರೆಸ್ಟೋರೆಂಟ್ನ್ನುಉದ್ಘಾಟಿಸುತ್ತಿರುವ ಖವಾಜಾ ಆಸಿಫ್
- ನಕಲಿ ಪಿಜ್ಜಾಹಟ್ ಔಟ್ಲೆಟ್ನ್ನುಉದ್ಘಾಟಿಸಿದ ಪಾಕಿಸ್ತಾನದ ಸಚಿವ
- ಈ ಮಳಿಗೆಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದ ಪಿಜ್ಜಾ ಹಟ್
- ನೆಟ್ಟಿಗರಿಂದ ಗೇಲಿಗೆ ಒಳಗಾದ ರಕ್ಷಣಾ ಸಚಿವ
ಪಾಕಿಸ್ತಾನ: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸಿಯಾಲ್ಕೋಟ್ನಲ್ಲಿ ಪಿಜ್ಜಾ ಹಟ್ (Pizza Hut) ಬ್ರಾಂಡಿನ ನಕಲಿ ರೆಸ್ಟೋರೆಂಟ್ ಔಟ್ಲೆಟ್ನ್ನು ಉದ್ಘಾಟಿಸಿದ್ದು ಈದೀಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಚಿವರಿಂದ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ, ಪಿಜ್ಜಾ ಹಟ್ ಸಿಯಾಲ್ಕೋಟ್ನಲ್ಲಿ ತೆರೆದಿರುವ ರೆಸ್ಟೋರೆಂಟ್ ಔಟ್ಲೆಟ್ಗೂ ತಮಗೂ ಯಾವುದೇ ಸಂಬಂಧವಿಲ್ಲ ಇದೊಂದು ನಕಲಿ ಪಿಜ್ಜಾ ಹಟ್ ರೆಸ್ಟೋರೆಂಟ್ ಆಗಿದೆ ಎಂದು ಘೋಷಿಸಿದೆ.
ಉದ್ಘಾಟನೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆದ ದೃಶ್ಯಾವಳಿಗಳಲ್ಲಿ, ಖವಾಜಾ ಆಸಿಫ್ ಔಟ್‌ಲೆಟ್‌ನಲ್ಲಿ ರಿಬ್ಬನ್ ಕತ್ತರಿಸಿ ಕತ್ತರಿಯೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದಾಗಿದೆ.
ಸಿಯಾಲ್‌ಕೋಟ್ ಔಟ್‌ಲೆಟ್, ಪಿಜ್ಜಾ ಹಟ್ನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಪಿಜ್ಜಾ ಹಟ್ (ಪಾಕಿಸ್ತಾನ) ಅಧಿಕೃತ ಹೇಳಿಕೆಯನ್ನು ನೀಡಿದೆ. ಉದ್ಘಾಟನೆಗೊಂಡಿರುವ ರೆಸ್ಟೋರೆಂಟ್ ಪಿಜ್ಜಾ ಹಟ್ನ ಪಾಕವಿಧಾನಗಳು, ಗುಣಮಟ್ಟದ ಪ್ರೋಟೋಕಾಲ್‌ಗಳು, ಆಹಾರ ಸುರಕ್ಷತೆ ಅಥವಾ ಕಾರ್ಯಾಚರಣೆಯ ಮಾನದಂಡಗಳನ್ನು ಅನುಸರಿಸುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ತಮಾಷೆ ವಸ್ತುವಾದ ಆಸಿಫ್
ಈ ವಿಷಯ ಬೆಳಕಿಗೆ ಬಂದ ತಕ್ಷಣ, ಜನರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ವಿಷಯದ ಕುರಿತು ಗೇಲಿ ಮಾಡಲು ಪ್ರಾರಂಭಿಸಿದ್ದಾರೆ. ಒಬ್ಬ ಬಳಕೆದಾರರು, ರಕ್ಷಣಾ ಸಚಿವ ಖವಾಜಾ ಆಸಿಫ್ಗೆ ನಕಲಿ ಅಸಲಿಯ ಹೋಟೆಲ್ಗಳ ಬಗ್ಗೆಯೇ ಗೊತ್ತಿಲ್ಲ, ಇನ್ನು ಇವನು ನಮ್ಮ ರಕ್ಷಣಾ ಸಚಿವ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಮೂರ್ಖ ವೃದ್ಧರನ್ನು ನಮ್ಮ ದೇಶದ ರಕ್ಷಣಾ ಸಚಿವನ್ನಾಗಿ ಮಾಡಿದ್ದಾರೆ ಎಂದಿದ್ದಾರೆ.
ಲಾಹೋರ್ ಮತ್ತು ಇಸ್ಲಾಮಾಬಾದ್‌ಗೆ ಸೀಮಿತವಾದ ಮಳಿಗೆಗಳು
ಪಿಜ್ಜಾ ಹಟ್ ಪಾಕಿಸ್ತಾನದ ಪ್ರಕಾರ, ಪ್ರಸ್ತುತ ಪಾಕಿಸ್ತಾನದಲ್ಲಿ 16 ಅಧಿಕೃತ ಮಳಿಗೆಗಳಿವೆ, ಇವುಗಳಲ್ಲಿ 14 ಲಾಹೋರ್‌ನಲ್ಲಿ ಮತ್ತು ಎರಡು ಇಸ್ಲಾಮಾಬಾದ್‌ನಲ್ಲಿವೆ. ಸಿಯಾಲ್‌ಕೋಟ್ ಮಳಿಗೆ ಅಧಿಕೃತ ಮಳಿಗೆಯಲ್ಲ ಎಂದು ಪಿಜ್ಜಾ ಹಟ್ ತಿಳಿಸಿದೆ.
100 ಕ್ಕೂ ಹೆಚ್ಚು ದೇಶಗಳಲ್ಲಿ ಮಳಿಗೆಗಳನ್ನು ಹೊಂದಿರುವ ಜಾಗತಿಕ ಬ್ರ್ಯಾಂಡ್
ಪಿಜ್ಜಾ ಹಟ್ ಜಾಗತಿಕ ಪಿಜ್ಜಾ ಮತ್ತು ಫಾಸ್ಟ್-ಫುಡ್ ಬ್ರಾಂಡ್ ಆಗಿದ್ದು, 100 ಕ್ಕೂ ಹೆಚ್ಚು ದೇಶಗಳಲ್ಲಿ ಮಳಿಗೆಗಳನ್ನು ಹೊಂದಿದೆ. 1958 ರಲ್ಲಿ ಅಮೆರಿಕದ ಕಾನ್ಸಾಸ್‌ನಲ್ಲಿ ಸಹೋದರರಾದ ಡಾನ್ ಮತ್ತು ಫ್ರಾಂಕ್ ಕಾರ್ನಿ ಸ್ಥಾಪಿಸಿದ ಈ ಬ್ರ್ಯಾಂಡ್ ನಂತರ ಅಂತರರಾಷ್ಟ್ರೀಯ ಸರಪಳಿಯಾಗಿ ಬೆಳೆಯಿತು. ಪಿಜ್ಜಾ ಹಟ್ ಯಮ್! ಬ್ರಾಂಡ್ಸ್‌ನ ಭಾಗವಾಗಿದ್ದು, ಇದು ಕೆಎಫ್‌ಸಿ ಮತ್ತು ಟ್ಯಾಕೋ ಬೆಲ್ನ್ನು ಸಹ ಹೊಂದಿದೆ,(ಏಜನ್ಸೀಸ್).