ಶಾಶ್ವತ ಅವಮಾನ ಕಾದಿದೆ! ದೊಡ್ಡಣ್ಣನ ಅಹಂಕಾರಕ್ಕೆ ಇರಾನ್ ಸಿದ್ಧಪಡಿಸಿರುವ ಆ ಭಯಾನಕ ಸ್ಕೆಚ್ ಯಾವುದು..? 
ವಿದೇಶ

ಶಾಶ್ವತ ಅವಮಾನ ಕಾದಿದೆ! ದೊಡ್ಡಣ್ಣನ ಅಹಂಕಾರಕ್ಕೆ ಇರಾನ್ ಸಿದ್ಧಪಡಿಸಿರುವ ಆ ಭಯಾನಕ ಸ್ಕೆಚ್ ಯಾವುದು..? IranVsUSA

ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಮಹಾಯುದ್ಧವು ಈಗ ವಾಗ್ಯುದ್ಧದ ಉತ್ತುಂಗಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಸೇನೆ ನಾಮಾವಶೇಷವಾಗಿದೆ ಎಂದು ಮಾಡಿದ ಘೋಷಣೆಯನ್ನು ಇರಾನ್(IranVsUSA) ತೀವ್ರವಾಗಿ ಲೇವಡಿ ಮಾಡಿದೆ. ಅಮೆರಿಕವು ಈ ಯುದ್ಧದಲ್ಲಿ ಶಾಶ್ವತ ಅವಮಾನ, ಪಶ್ಚಾತ್ತಾಪ ಮತ್ತು ಶರಣಾಗತಿಯನ್ನು ಅನುಭವಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುರುವಾರ ಗುಡುಗಿದೆ.
ಟ್ರಂಪ್ ಅವರ ಹೇಳಿಕೆಗಳು ಕೇವಲ ಭ್ರಮೆ ಮತ್ತು ಅಮೆರಿಕದ ಗುಪ್ತಚರ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತವೆ ಎಂದು ಇರಾನ್‌ನ ಉನ್ನತ ಕಾರ್ಯಾಚರಣಾ ಕಮಾಂಡ್ ಘಟಕವಾದ ಖಾತಮ್ ಅಲ್-ಅನ್ಬಿಯಾ ವ್ಯಂಗ್ಯವಾಡಿದೆ.

ನಿಮ್ಮ ಗುಪ್ತಚರ ಮಾಹಿತಿ ಅಪೂರ್ಣ: ಇರಾನ್ ಸವಾಲು

ಅಮೆರಿಕ ಅಧ್ಯಕ್ಷರು ಇರಾನ್‌ನ ನೌಕಾಪಡೆ ಮತ್ತು ವಾಯುಪಡೆ ಧ್ವಂಸವಾಗಿದೆ ಎಂದು ಹೇಳಿಕೊಂಡ ಬೆನ್ನಲ್ಲೇ, ಇರಾನ್ ಸರ್ಕಾರಿ ಸ್ವಾಮ್ಯದ ಪ್ರೆಸ್ ಟಿವಿ ಮೂಲಕ ಇರಾನ್ ಸೇನೆಯ ವಕ್ತಾರರು ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಮಿಲಿಟರಿ ಶಕ್ತಿ ಮತ್ತು ಸಲಕರಣೆಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿ ಅತ್ಯಂತ ಅಪೂರ್ಣವಾಗಿದೆ. ನಮ್ಮ ಅಗಾಧವಾದ ಕಾರ್ಯತಂತ್ರದ ಸಾಮರ್ಥ್ಯಗಳ ಬಗ್ಗೆ ನಿಮಗೆ ಏನೂ ತಿಳಿದಿಲ್ಲ. ನಮ್ಮ ಕ್ಷಿಪಣಿ ತಯಾರಿಕಾ ಕೇಂದ್ರಗಳು, ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳು ಅಥವಾ ಇಲೆಕ್ಟ್ರಾನಿಕ್ ವಾರ್‌ಫೇರ್ ತಂತ್ರಜ್ಞಾನವನ್ನು ನೀವು ನಾಶಪಡಿಸಿದ್ದೀರಿ ಎಂದು ಭಾವಿಸಬೇಡಿ. ನೀವು ದಾಳಿ ಮಾಡಿದ್ದೇವೆ ಎಂದು ಬೀಗುತ್ತಿರುವ ತಾಣಗಳು ನಮಗೆ ಅತ್ಯಂತ ನಗಣ್ಯವಾದವುಗಳು ಎಂದು ವಕ್ತಾರರು ಹೇಳಿದ್ದಾರೆ.
ಇರಾನ್‌ನ ಪ್ರಮುಖ ಶಸ್ತ್ರಾಸ್ತ್ರ ತಯಾರಿಕಾ ಘಟಕಗಳು ಅಮೆರಿಕದ ಕಣ್ಣಿಗೆ ಬೀಳದ ಮತ್ತು ತಲುಪಲಾಗದ ರಹಸ್ಯ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಸೋಲು ಅಮೆರಿಕದ್ದು, ಗೆಲುವು ನಮ್ಮದು

ಫೆಬ್ರವರಿ ಕೊನೆಯಲ್ಲಿ ಆರಂಭವಾದ ಈ ಸಂಘರ್ಷದಲ್ಲಿ ಅಮೆರಿಕವು ಹೂತುಹೋಗುತ್ತಿದೆ ಎಂದು ಇರಾನ್ ಆರೋಪಿಸಿದೆ. ಟ್ರಂಪ್ ಅವರು ತಮ್ಮ ಭಾಷಣದಲ್ಲಿ ಇರಾನ್‌ನ ನೌಕಾಪಡೆ ಈಗ ಇಲ್ಲ, ವಾಯುಪಡೆ ಅವಶೇಷಗಳ ರಾಶಿಯಾಗಿದೆ ಮತ್ತು ಅವರ ನಾಯಕರು ಈಗ ಮಣ್ಣು ಸೇರಿದ್ದಾರೆ ಎಂದು ಹೇಳಿದ್ದರು. ಆದರೆ, ಇರಾನ್ ಈ ಎಲ್ಲಾ ಹಕ್ಕುಗಳನ್ನು ತಿರಸ್ಕರಿಸಿದೆ.
ನಮ್ಮ ಗೌರವಾನ್ವಿತ ಮುಸ್ಲಿಂ ರಾಷ್ಟ್ರದ ಮೇಲೆ ನೀವು ನಡೆಸಿದ ಆಕ್ರಮಣಕ್ಕೆ ನೀವು ಉತ್ತರ ನೀಡಲೇಬೇಕು. ನೀವು ಅನುಭವಿಸಿರುವ ಹೊಡೆತಗಳಿಗಿಂತಲೂ ಹೆಚ್ಚಿನ ಮತ್ತು ವಿನಾಶಕಾರಿ ದಾಳಿಗಳನ್ನು ಎದುರಿಸಲು ಸಿದ್ಧರಾಗಿ. ಅಮೆರಿಕ ಶರಣಾಗುವವರೆಗೆ ನಮ್ಮ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ವಿಶ್ರಮಿಸುವುದಿಲ್ಲ ಎಂದು ಇರಾನ್ ಸೇನೆ ಎಚ್ಚರಿಸಿದೆ.

ಜಾಗತಿಕ ಆತಂಕ: ಯುದ್ಧದ ಮುಂದಿನ ಹಂತ

ಇರಾನ್‌ನ ಈ ಆಕ್ರಮಣಕಾರಿ ಹೇಳಿಕೆಯು ಮಧ್ಯಪ್ರಾಚ್ಯದಲ್ಲಿ ಯುದ್ಧವು ಸುಲಭವಾಗಿ ಕೊನೆಗೊಳ್ಳುವುದಿಲ್ಲ ಎಂಬ ಮುನ್ಸೂಚನೆ ನೀಡಿದೆ. ಟ್ರಂಪ್ ಅವರು ಆಪರೇಷನ್ ಎಪಿಕ್ ಫ್ಯೂರಿ ಮೂಲಕ 21 ದಿನಗಳಲ್ಲಿ ಯುದ್ಧ ಮುಗಿಸುವ ಮಾತಾಡುತ್ತಿದ್ದರೆ, ಇರಾನ್ ಮಾತ್ರ ದೀರ್ಘಕಾಲೀನ ಸಂಘರ್ಷಕ್ಕೆ ಸಜ್ಜಾಗಿದೆ,(ಏಜೆನ್ಸೀಸ್).