ಯುದ್ಧ ಕಾರ್ಮೋಡ ಅಂತ್ಯ: ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ ಫೈನಲ್! ಹೊರ್ಮುಜ್ ಜಲಸಂಧಿ ಮುಕ್ತ! ತೈಲ ಹರಿಯಲಿ ಎಂದ ಟ್ರಂಪ್!
ವಾಷಿಂಗ್ಟನ್: ಇಡೀ ಜಗತ್ತನ್ನೇ ಮೂರನೇ ಮಹಾಯುದ್ಧದ ಭೀತಿಯಲ್ಲಿ ಇಟ್ಟಿದ್ದ ಮಧ್ಯಪ್ರಾಚ್ಯದ ಭೀಕರ ಯುದ್ಧ ಕಾರ್ಮೋಡಗಳು ಕೊನೆಗೂ ಕರಗಿವೆ. ಅಮೆರಿಕ ಮತ್ತು ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ (US-Iran Peace Deal) ಒಪ್ಪಿಗೆ ಸೂಚಿಸಿವೆ. ಉಭಯ ದೇಶಗಳ ನಡುವಿನ ಮಾತುಕತೆ ಸಂಪೂರ್ಣ ಯಶಸ್ವಿಯಾಗಿದ್ದು, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಹಾಗೂ ಯುದ್ಧವನ್ನು ಇಂದಿನಿಂದಲೇ ಜಾರಿಗೆ ಬರುವಂತೆ ತಕ್ಷಣ ಮತ್ತು ಕಾಯಂ ಆಗಿ ನಿಲ್ಲಿಸಲು ಉಭಯ ದೇಶಗಳು ಸಮ್ಮತಿಸಿವೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾನುವಾರ ರಾತ್ರಿ ಈ ಜಾಗತಿಕ ಈ ಸುದ್ದಿಯನ್ನು ಮೊದಲು ಪ್ರಕಟಿಸಿದರು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಒಪ್ಪಂದದ ಪ್ರಕ್ರಿಯೆ ಪೂರ್ಣಗೊಂಡಿರುವುದನ್ನು ಅಧಿಕೃತವಾಗಿ ಖಚಿತಪಡಿಸಿವೆ. ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಉಭಯ ದೇಶಗಳ ಮುಖ್ಯಸ್ಥರು ಅಧಿಕೃತವಾಗಿ ಸಹಿ ಹಾಕಲಿದ್ದಾರೆ.
ಪಾಕ್ ಪ್ರಧಾನಿ ಘೋಷಣೆ; ಕತಾರ್-ಟರ್ಕಿ ಮಧ್ಯಸ್ಥಿಕೆಗೆ ಯಶಸ್ಸು!
ಭಾನುವಾರ ರಾತ್ರಿ ಸಾಮಾಜಿಕ ಜಾಲತಾಣ Xನಲ್ಲಿ ಸುದೀರ್ಘ ಪೋಸ್ಟ್ ಹಾಕಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಹಲವು ವಾರಗಳ ತೀವ್ರ ರಾಜತಾಂತ್ರಿಕ ಸಮಾಲೋಚನೆಗಳ ನಂತರ ಅಮೆರಿಕ ಮತ್ತು ಇರಾನ್ ನಡುವೆ ಮಹಾ ಒಪ್ಪಂದ ಏರ್ಪಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಉಭಯ ದೇಶಗಳು ಯುದ್ಧದ ಹಾದಿ ಬಿಟ್ಟು ರಾಜತಾಂತ್ರಿಕತೆಗೆ ಮನ್ನಣೆ ನೀಡಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಈ ಮಹಾ ಸಂಧಾನದ ಹಿಂದೆ ಪ್ರಮುಖ ಪ್ರಾದೇಶಿಕ ದೇಶಗಳಾದ ಕತಾರ್, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ಅತ್ಯಂತ ಪ್ರಮುಖ ಮಧ್ಯಸ್ಥಿಕೆದಾರರಾಗಿ ಕೆಲಸ ಮಾಡಿದ್ದು, ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯದ ಕಂದಕವನ್ನು ಮುಚ್ಚುವಲ್ಲಿ ಯಶಸ್ವಿಯಾಗಿವೆ ಎಂದು ಷರೀಫ್ ಜಾಗತಿಕ ವೇದಿಕೆಯಲ್ಲಿ ಬಹಿರಂಗಪಡಿಸಿದರು. ಜೂನ್ 19 ರ ಒಪ್ಪಂದದ ಸಹಿ ಪ್ರಕ್ರಿಯೆಗೂ ಮುನ್ನ ತಾಂತ್ರಿಕ ಮತ್ತು ಉಸ್ತುವಾರಿ ನಿಯಮಗಳ ಅಂತಿಮ ಚರ್ಚೆಗೆ ಸಭೆಗಳು ನಡೆಯಲಿವೆ.
"ಜಗತ್ತಿನ ಹಡಗುಗಳೇ, ನಿಮ್ಮ ಎಂಜಿನ್ ಸ್ಟಾರ್ಟ್ ಮಾಡಿ!": ಟ್ರಂಪ್ ಸಂಭ್ರಮ
ಪಾಕಿಸ್ತಾನದ ಪ್ರಧಾನಿ ಹೇಳಿಕೆ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಜಾಲತಾಣವಾದ 'ಟ್ರುತ್ ಸೋಷಿಯಲ್ನಲ್ಲಿ ಈ ಒಪ್ಪಂದವನ್ನು ಅದ್ಧೂರಿಯಾಗಿ ಖಚಿತಪಡಿಸಿದರು. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಈಗ ಸಂಪೂರ್ಣವಾಗಿ ಮುಗಿದಿದೆ. ಎಲ್ಲರಿಗೂ ಅಭಿನಂದನೆಗಳು ಎಂದು ಬರೆದಿದ್ದಾರೆ.
ಇದರೊಂದಿಗೆ, ಇರಾನ್ ಬಂದರುಗಳ ಮೇಲಿದ್ದ ಅಮೆರಿಕ ನೌಕಾಪಡೆಯ ಕಟ್ಟುನಿಟ್ಟಿನ ಆರ್ಥಿಕ ಹಾಗೂ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಲು ಟ್ರಂಪ್ ಆದೇಶಿಸಿದ್ದಾರೆ. ಅಲ್ಲದೆ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಘೋಷಿಸಿದ ಟ್ರಂಪ್, ತಮ್ಮದೇ ಶೈಲಿಯಲ್ಲಿ, ಜಗತ್ತಿನ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಸ್ಟಾರ್ಟ್ ಮಾಡಿ. ತೈಲ ಮುಕ್ತವಾಗಿ ಹರಿಯಲಿ ಎಂದು ಬರೆಯುವ ಮೂಲಕ ಜಾಗತಿಕ ಇಂಧನ ಮಾರುಕಟ್ಟೆಗೆ ಭಾರಿ ನಿರಾಳತೆ ತಂದಿದ್ದಾರೆ.
ನೆತನ್ಯಾಹು ವಿರೋಧದ ನಡುವೆಯೂ ಇಸ್ರೇಲ್ ರಕ್ಷಿಸಿದ ಟ್ರಂಪ್!
ಇದೇ ವೇಳೆ ಅಮೆರಿಕದ ಪ್ರಮುಖ ಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆಯನ್ನೂ ನೀಡಿದ್ದಾರೆ. ಒಂದು ವೇಳೆ ಇರಾನ್ ಮುಂದೆ ಸಂಪೂರ್ಣ ಪರಮಾಣು ಒಪ್ಪಂದಕ್ಕೆ ಒಪ್ಪದಿದ್ದರೆ, ನಾವು ಮತ್ತೆ ಮಿಲಿಟರಿ ದಾಳಿ ನಡೆಸುತ್ತೇವೆ. ಇಲ್ಲವೇ ಇಡೀ ಮಧ್ಯಪ್ರಾಚ್ಯದ ರಕ್ಷಣೆಯ ಜವಾಬ್ದಾರಿಯನ್ನು ನಾವೇ ಹೊತ್ತು, ಅಲ್ಲಿನ ಒಟ್ಟು ಆದಾಯದ ಶೇ. 20 ರಷ್ಟನ್ನು ಅಮೆರಿಕಕ್ಕೆ ರಕ್ಷಣಾ ಶುಲ್ಕವಾಗಿ ಪಡೆಯಬೇಕಾಗುತ್ತದೆ ಎಂದರು.
ಈ ಒಪ್ಪಂದದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಯಾವುದೇ ದೇಶದ ಹಡಗುಗಳಿಗೆ ಇನ್ನು ಮುಂದೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ಈ ಒಪ್ಪಂದವನ್ನು ತೀವ್ರವಾಗಿ ವಿರೋಧಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಧೋರಣೆಯನ್ನು ಟೀಕಿಸಿದ ಟ್ರಂಪ್, ನನ್ನ ಈ ಚಾಣಾಕ್ಷ ರಾಜತಾಂತ್ರಿಕ ಹೆಜ್ಜೆಯಿಂದಾಗಿ ಇಸ್ರೇಲ್ ದೇಶವು ಪರಮಾಣು ದಾಳಿಯಿಂದ ಸಂಪೂರ್ಣವಾಗಿ ಧ್ವಂಸವಾಗುವುದು ತಪ್ಪಿದೆ ಎಂದು ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ದಿಗ್ಬಂಧನ ತೆರವಿಗೆ ಇರಾನ್ ಸಂತಸ
ಮತ್ತೊಂದೆಡೆ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅಮೆರಿಕ ತನ್ನ ಮೇಲಿದ್ದ ಎಲ್ಲಾ ನೌಕಾ ದಿಗ್ಬಂಧನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಹಿಂಪಡೆದಿದೆ ಎಂದು ತಿಳಿಸಿದೆ. ಇಂದಿನಿಂದಲೇ ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಇರಾನ್ ಪರ ಪಡೆಗಳ ಯುದ್ಧ ಕಾರ್ಯಾಚರಣೆ ನಿಲ್ಲಲಿದೆ. ಜೂನ್ 19 ರ ಶುಕ್ರವಾರದ ಒಪ್ಪಂದದ ನಂತರ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಬಂದರುಗಳು ಎಂದಿನಂತೆ ವಾಣಿಜ್ಯ ವ್ಯಾಪಾರಕ್ಕೆ ಲಭ್ಯವಾಗಲಿವೆ ಎಂದು ಇರಾನ್‌ನ 'ತಸ್ನೀಮ್' ಸುದ್ದಿ ಸಂಸ್ಥೆ ವರದಿ ಮಾಡಿದೆ. ಒಟ್ಟಾರೆಯಾಗಿ ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿರುವ ಸಹಿ ಪ್ರಕ್ರಿಯೆಯು ಜಾಗತಿಕ ರಾಜಕಾರಣದಲ್ಲಿ ಹೊಸ ಶಾಂತಿಯ ಯುಗಕ್ಕೆ ನಾಂದಿ ಹಾಡಲಿದೆ,(ಏಜೆನ್ಸೀಸ್).