Emotional Reunion 
ವಿದೇಶ

Emotional Reunion: ಬರೋಬ್ಬರಿ 33 ವರ್ಷಗಳ ನಂತರ ಸಿಕ್ಕ ತಮ್ಮ: ಹಳೆಯ ಫೋಟೋ ತಂದುಕೊಟ್ಟಿತು ಮರುಜನ್ಮ!

ಪ್ರಮುಖ ಮುಖ್ಯಾಂಶಗಳು

  • ಒಂದು ತುಂಡು ಬ್ರೆಡ್‌ಗೆ ಕಳೆದುಹೋದ ತಮ್ಮ: 3 ದಶಕದ ಬಳಿಕ ಪತ್ತೆಹಚ್ಚಿದ ಅಕ್ಕನ ಭಗೀರಥ ಪ್ರಯತ್ನದ ಕಥೆ ಇದು.
  • ಚೀನಾದಲ್ಲಿ ಅದ್ಭುತ ಮಿಲನ: 33 ವರ್ಷಗಳ ಕಾಲ ಇಟ್ಟಿಗೆ ಹೊತ್ತು ಹಣ ಸಂಪಾದಿಸಿ ತಮ್ಮನನ್ನು ಹುಡುಕಿದ ಅಕ್ಕ!
  • ಮಳೆಯಿಂದ ತಪ್ಪಿಸಿಕೊಳ್ಳಲು ಲಾರಿ ಹತ್ತಿದವರು ಬದುಕನ್ನೇ ಕಳೆದುಕೊಂಡರು: 3 ದಶಕದ ನಂತರ ನಡೆದ ಅಚ್ಚರಿಯ ಘಟನೆ ಇದು!
ಬೀಜಿಂಗ್: ರಕ್ತದ ಸಂಬಂಧ ಎಂಬುದು ಎಷ್ಟು ಗಾಢವಾದುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ಒಂದು ತುಂಡು ಬ್ರೆಡ್‌ಗಾಗಿ ತನ್ನ ಕಣ್ಣೆದುರೇ ಕಳೆದುಹೋದ ತಮ್ಮನನ್ನು ಹುಡುಕಲು ಆ ಅಕ್ಕ ನಡೆಸಿದ ಹೋರಾಟ ಅಂತಿಮವಾಗಿ 33 ವರ್ಷಗಳ ನಂತರ ಸುಖಾಂತ್ಯ(Emotional Reunion) ಕಂಡಿದೆ.
ಹೌದು, ಹರಿದು ಹೋದ ಒಂದು ಹಳೆಯ ಫೋಟೋ ಹಿಡಿದು ದೇಶಾದ್ಯಂತ ಅಲೆದಾಡಿದ ಆಕೆಯ ಶ್ರಮಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ.

ಏನಿದು ಕಣ್ಣೀರು ತರಿಸುವ ಕಥೆ?

ಈ ಮನಮಿಡಿಯುವ ಘಟನೆ ನಡೆದಿರುವುದು ಚೀನಾದಲ್ಲಿ. ಲೀ ಲಿನ್ (44) ಮತ್ತು ಆಕೆಯ ಸಹೋದರ ಲೀ ಕ್ಸಿನ್ ಬಾಲ್ಯದಲ್ಲೇ ಅನಾಥರಾದವರು. ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟರೆ, ತಂದೆ ಮಾನಸಿಕವಾಗಿ ಕುಸಿದುಹೋದರು. 11 ವರ್ಷದ ಲೀ ಲಿನ್ ಮತ್ತು 7 ವರ್ಷದ ತಮ್ಮ ಲೀ ಕ್ಸಿನ್ ಹೊಟ್ಟೆಪಾಡಿಗಾಗಿ ರಸ್ತೆಯಲ್ಲಿ ಕಸ ಆಯುವ ಕೆಲಸ ಮಾಡುತ್ತಿದ್ದರು.
ಒಂದು ದಿನ ಮಳೆಯಿಂದ ರಕ್ಷಣೆ ಪಡೆಯಲು ಇಬ್ಬರೂ ನಿಂತಿದ್ದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಅಪರಿಚಿತ ನಗರಕ್ಕೆ ತಲುಪಿದರು. ಅಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ಈ ಮಕ್ಕಳಿಗೆ ಮಹಿಳೆಯೊಬ್ಬಳು ಬ್ರೆಡ್ ನೀಡುವುದಾಗಿ ಆಮಿಷ ಒಡ್ಡಿದಳು. ತನ್ನ ತಮ್ಮನಿಗೆ ಆಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ಅಕ್ಕ ಆತನನ್ನು ಕಳುಹಿಸಿಕೊಟ್ಟಳು. ಆದರೆ, ಆ ಕ್ಷಣವೇ ಆಕೆಯ ಬದುಕಿನ ಅತಿದೊಡ್ಡ ದುರಂತಕ್ಕೆ ಕಾರಣವಾಯಿತು. ಆ ಮಹಿಳೆ ಬಾಲಕನನ್ನು ಅಪಹರಿಸಿದ್ದಳು.

ತಮ್ಮನಿಗಾಗಿ ಅಕ್ಕನ 'ಭಗೀರಥ' ಪ್ರಯತ್ನ!

"ನನ್ನ ಜವಾಬ್ದಾರಿಯಲ್ಲಿದ್ದಾಗ ನನ್ನ ತಮ್ಮ ಕಾಣೆಯಾದ. ಆ ಅಪರಾಧಿ ಪ್ರಜ್ಞೆ ನನ್ನನ್ನು ದಿನವೂ ಸುಡುತ್ತಿತ್ತು" ಎಂದು ಲೀ ಲಿನ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲಿಂದ ಶುರುವಾದ ಆಕೆಯ ಹುಡುಕಾಟ ನಿಲ್ಲಲೇ ಇಲ್ಲ. ತಮ್ಮನನ್ನು ಹುಡುಕಲು ಹಣ ಹೊಂದಿಸಲು ಲೀ ಲಿನ್ ಕಟ್ಟಡ ನಿರ್ಮಾಣ ಕಾರ್ಮಿಕಳಾಗಿ ಇಟ್ಟಿಗೆಗಳನ್ನು ಹೊತ್ತಿದ್ದಾರೆ. ಹೋಟೆಲ್‌ಗಳಲ್ಲಿ ಪಾತ್ರೆ ತೊಳೆದಿದ್ದಾರೆ. ತನ್ನ ಇಡೀ ಜೀವನದ ಗಳಿಕೆ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು (1 Million Yuan) ಆಕೆ ಕೇವಲ ತಮ್ಮನ ಹುಡುಕಾಟಕ್ಕಾಗಿ ಖರ್ಚು ಮಾಡಿದ್ದಾರೆ. ಅಲ್ಲದೆ, ದೇಶದ ಮೂಲೆ ಮೂಲೆಗಳಲ್ಲಿ ಸಾವಿರಾರು ಕರಪತ್ರಗಳನ್ನು ಹಂಚಿದ್ದಾರೆ. ಆಕೆಯ ಬಳಿ ಇದ್ದದ್ದು ಬಾಲ್ಯದ ಒಂದು ಹಳೆಯ ಫೋಟೋ ಮಾತ್ರ!

ಫೋಟೋ ತಂದುಕೊಟ್ಟ ಅದೃಷ್ಟ!

ಪೋಷಕರು ಇಲ್ಲದ ಕಾರಣ DNA ಪರೀಕ್ಷೆಗೆ ಆಧಾರವಿರಲಿಲ್ಲ. ಆದರೆ ಜಿಯಾಂಗ್ಕ್ಸಿ ಪ್ರಾಂತ್ಯದ ಪೊಲೀಸ್ ಅಧಿಕಾರಿಯೊಬ್ಬರು ತಂತ್ರಜ್ಞಾನ ಬಳಸಿ ಆ ಹಳೆಯ ಫೋಟೋ ಮೂಲಕ ಹುಡುಕಾಟ ನಡೆಸಿದರು. ಗುಯಾಂಗ್‌ಡಾಂಗ್‌ನಲ್ಲಿ ವಾಸವಿದ್ದ 'ಹಾನ್' ಎಂಬ ವ್ಯಕ್ತಿಯ ಮುಖಚಹರೆ ಈ ಫೋಟೋಗೆ ಹೋಲಿಕೆಯಾಯಿತು. ಅಂತಿಮವಾಗಿ ನಡೆದ ಡಿಎನ್‌ಎ ಪರೀಕ್ಷೆಯಲ್ಲಿ ಆತನೇ ಲೀ ಲಿನ್ ತಮ್ಮ ಎಂಬುದು ಸಾಬೀತಾಯಿತು.

ಬ್ರೆಡ್ ಪ್ಯಾಕೆಟ್ ನೀಡಿ ಭಾವುಕ ವಿದಾಯ!

ಮಾರ್ಚ್ 23 ರಂದು ಇಬ್ಬರೂ ಪರಸ್ಪರ ಭೇಟಿಯಾದಾಗ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದವು. ತನ್ನ ತಮ್ಮನನ್ನು ಕರೆದೊಯ್ಯಲು ಬಂದ ಲೀ ಲಿನ್, ಪೊಲೀಸ್ ಠಾಣೆಗೆ ಚೀಲ ತುಂಬ ಬ್ರೆಡ್ ಪ್ಯಾಕೆಟ್‌ಗಳನ್ನು ತಂದಿದ್ದರು. "ಒಂದು ಬ್ರೆಡ್ ತುಂಡಿಗಾಗಿ ನಾನು ಅವನನ್ನು ಕಳೆದುಕೊಂಡೆ, ಇನ್ನು ಮುಂದೆ ಅವನು ಎಂದಿಗೂ ಹಸಿವಿನಿಂದ ಇರಬಾರದು" ಎಂದು ಹೇಳುವಾಗ ಆಕೆಯ ಕಣ್ಣಲ್ಲಿ ನೀರಿತ್ತು.
ಈಗ 40 ವರ್ಷ ವಯಸ್ಸಿನವನಾಗಿರುವ ತಮ್ಮ ಲೀ ಕ್ಸಿನ್ ಕೂಡ ಬಾಲ್ಯದಲ್ಲಿ ಸಾಕಷ್ಟು ನರಕಯಾತನೆ ಅನುಭವಿಸಿದ್ದ. ಹಲವು ಬಾರಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಸೋತಿದ್ದ. ಈಗ ಅಕ್ಕನ ಪ್ರೀತಿಯ ಮಡಿಲು ಸೇರಿರುವ ಆತನಿಗೆ ಮರುಜನ್ಮ ಸಿಕ್ಕಂತಾಗಿದೆ. ಈ ವರದಿ ಚೀನಾದ್ಯಂತ ಹೊಸ ಸಂಚಲನ ಮೂಡಿಸಿದೆ.(ಏಜೆನ್ಸೀಸ್)