ಅಂದು ಫ್ರೆಂಚ್ ಅಧ್ಯಕ್ಷರ ಪತ್ನಿ ಗಂಡನ ಮೂತಿ ತಿವಿಯಲು ಇರಾನ್ ನಟಿಯೇ ಕಾರಣ! ಕೊನೆಗೂ ಅಸಲಿ ಸಂಗತಿ ಬಯಲು...Emmanuel Macron
- ನಟಿ ಫರಾಹಾನಿ ಜೊತೆಗಿನ ಅಧ್ಯಕ್ಷ ಮ್ಯಾಕ್ರಾನ್ ಆಪ್ತ ಚಾಟಿಂಗ್ ನೋಡಿ ಪತ್ನಿ ಬ್ರಿಗಿಟ್ಟೆ ಕೋಪಗೊಂಡಿದ್ದರು ಎಂದು ಹೊಸ ಪುಸ್ತಕದಲ್ಲಿ ಉಲ್ಲೇಖ
- ಪರಸ್ಪರ "ಸುಂದರ" ಎಂದು ಸಂದೇಶ ಕಳುಹಿಸಿದ್ದರ ಜಗಳದಲ್ಲೇ ಕಳೆದ ವರ್ಷ ವಿಯೆಟ್ನಾಂನಲ್ಲಿ ಬ್ರಿಗಿಟ್ಟೆ ಪತಿಯನ್ನು ತಳ್ಳಿದ್ದರು ಎನ್ನಲಾಗಿದೆ
- ಈ ಆರೋಪ ಹಸಿ ಸುಳ್ಳು ಎಂದಿರುವ ಬ್ರಿಗಿಟ್ಟೆ ತಂಡ, ಆ ವೈರಲ್ ವಿಡಿಯೋ ಕೇವಲ ಪ್ರಯಾಣದ ಆಯಾಸದ ಮಧ್ಯೆ ನಡೆದ 'ತಮಾಷೆಯ ಕ್ಷಣ' ಎಂದಿದೆ
- ಈ ಹೊಸ ವಿವಾದದ ಕುರಿತು ಫ್ರೆಂಚ್ ಅಧ್ಯಕ್ಷರ ಕಚೇರಿ 'ಎಲಿಸೀ ಅರಮನೆ'ಯಾಗಲಿ ಅಥವಾ ನಟಿ ಫರಾಹಾನಿಯಾಗಲಿ ಪ್ರತಿಕ್ರಿಯಿಸಿಲ್ಲ
Emmanuel Macron : ಫ್ರೆಂಚ್ ಪತ್ರಕರ್ತ ಫ್ಲೋರಿಯನ್ ತಾರ್ದಿಫ್ ಬರೆದಿರುವ "ಆನ್ ಆಲ್ಮೋಸ್ಟ್ ಪರ್ಫೆಕ್ಟ್ ಕಪಲ್" ಎಂಬ ಹೊಸ ಪುಸ್ತಕದ ಪ್ರಕಾರ, ಕಳೆದ ವರ್ಷ ವಿಯೆಟ್ನಾಂ ಪ್ರವಾಸದ ವೇಳೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಇರಾನಿ ಮೂಲದ ನಟಿ ಗೋಲ್ಶಿಫ್ತೆ ಫರಾಹಾನಿ ನಡುವೆ ನಡೆದಿದ್ದ ವಾಟ್ಸ್ಆ್ಯಪ್ ಚಾಟ್ಗಳನ್ನು ನೋಡಿ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರಾನ್ ತೀವ್ರ ಕೋಪಗೊಂಡು, ವಿಮಾನದಿಂದ ಇಳಿಯುವಾಗ ತಮ್ಮ ಪತಿಯನ್ನು ತಳ್ಳಿದ್ದರು ಅಥವಾ ಮೂತಿ ತಿವಿದಿದ್ದರು ಎಂದು ವರದಿಯಾಗಿದೆ.
ಮ್ಯಾಕ್ರಾನ್ ಅವರು ನಟಿಗೆ "ನೀವು ತುಂಬಾ ಸುಂದರವಾಗಿದ್ದೀರಾ" ಎಂದು ಕಳುಹಿಸಿದ್ದ ಸಂದೇಶವೇ ದಂಪತಿ ನಡುವಿನ ಜಗಳಕ್ಕೆ ಕಾರಣವಾಗಿತ್ತು ಮತ್ತು ಈ ತಳ್ಳಾಟದ ವಿಡಿಯೋ ಆಗ ಜಾಗತಿಕವಾಗಿ ವೈರಲ್ ಆಗಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಎಲಿಸೀ ಅರಮನೆ ( ಫ್ರೆಂಚ್ ಅಧ್ಯಕ್ಷರ ಕಚೇರಿ) ಮತ್ತು ಬ್ರಿಗಿಟ್ಟೆ ಮ್ಯಾಕ್ರಾನ್ ಅವರ ಪ್ರತಿನಿಧಿಗಳು ಈ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ತಾವು ಎಂದಿಗೂ ಪತಿಯ ಫೋನ್ ಪರಿಶೀಲಿಸುವುದಿಲ್ಲ ಹಾಗೂ ಅದು ಕೇವಲ ಪ್ರಯಾಣದ ಆಯಾಸದ ಮಧ್ಯೆ ನಡೆದ ತಮಾಷೆಯ ಕ್ಷಣವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಅತ್ತ ನಟಿ ಫರಾಹಾನಿ ಕೂಡ ತಮಗೂ ಅಧ್ಯಕ್ಷರಿಗೂ ಕೇವಲ ಸ್ನೇಹಪರ ಸಂಬಂಧವಿತ್ತಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ನೂತನ ಪುಸ್ತಕದಲ್ಲಿ ಏನಿದೆ?
ಫ್ರೆಂಚ್ ಪತ್ರಕರ್ತ ಫ್ಲೋರಿಯನ್ ತಾರ್ದಿಫ್ ಬರೆದಿರುವ "ಆನ್ ಆಲ್ಮೋಸ್ಟ್ ಪರ್ಫೆಕ್ಟ್ ಕಪಲ್" ಎಂಬ ಹೊಸ ಪುಸ್ತಕದಲ್ಲಿ ಈ ಸ್ಫೋಟಕ ಮಾಹಿತಿ ನೀಡಲಾಗಿದೆ. ಕಳೆದ ವರ್ಷ ವಿಯೆಟ್ನಾಂನ ಹನೋಯಿಗೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ (48) ಮತ್ತು ಇರಾನಿ ಮೂಲದ ಪ್ರಸಿದ್ಧ ನಟಿ ಗೋಲ್ಶಿಫ್ತೆ ಫರಾಹಾನಿ (42) ನಡುವೆ ಆಪ್ತ ಸಂಬಂಧವಿತ್ತು ಎಂದು ಲೇಖಕರು ಹೇಳಿದ್ದಾರೆ. ವಿಮಾನದಿಂದ ಇಳಿಯುವ ಕೆಲವೇ ಕ್ಷಣಗಳ ಮುನ್ನ ಅಧ್ಯಕ್ಷರ ಫೋನ್‌ನಲ್ಲಿದ್ದ ನಟಿಯ ಸಂದೇಶಗಳನ್ನು ನೋಡಿದ 73 ವರ್ಷದ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರಾನ್ ತೀವ್ರ ಕೋಪಗೊಂಡಿದ್ದರು ಎನ್ನಲಾಗಿದೆ.
ಪುಸ್ತಕದ ಪ್ರಕಾರ, ಮ್ಯಾಕ್ರಾನ್ ಅವರು ನಟಿಗೆ "ನೀವು ತುಂಬಾ ಸುಂದರವಾಗಿದ್ದೀರಾ" ಎಂದು ಕಳುಹಿಸಿದ್ದರೆ, ನಟಿ ಫರಾಹಾನಿ ಕೂಡ "ನೀವು ತುಂಬಾ ಆಕರ್ಷಕವಾಗಿದ್ದೀರಾ" ಎಂದು ಸಂದೇಶ ಕಳುಹಿಸಿದ್ದರು. ಈ ಸಂದೇಶಗಳು ಇಬ್ಬರ ನಡುವಿನ ಸಾಮಾನ್ಯ ಸ್ನೇಹಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದವು ಎಂದು ಲೇಖಕರು ರೇಡಿಯೋ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದೇ ಕಾರಣಕ್ಕೆ ದಂಪತಿ ನಡುವೆ ವಿಮಾನದ ಒಳಗೇ ತೀವ್ರ ಜಗಳ ನಡೆದು, ಹೊರಬರುವಾಗ ಬ್ರಿಗಿಟ್ಟೆ ಅವರು ಪತಿಯನ್ನು ತಳ್ಳಿದ ಅಥವಾ ಮೂತಿ ತಿವಿದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿ ಜಾಗತಿಕವಾಗಿ ವೈರಲ್ ಆಗಿತ್ತು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.
ಸ್ಪಷ್ಟನೆ ನೀಡಿದ ಬ್ರಿಗಿಟ್ಟೆ ತಂಡ
ಈ ಹೊಸ ಪುಸ್ತಕದ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರಾನ್ ಅವರ ಆಪ್ತರೊಬ್ಬರು 'ಪೊಲಿಟಿಕೋ' ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ನಡೆದ ವೈರಲ್ ಘಟನೆಗೂ ಅಧ್ಯಕ್ಷರ ಪ್ರೇಮ ಸಂಬಂಧದ ವದಂತಿಗಳಿಗೂ ಯಾವುದೇ ಲಿಂಕ್ ಇಲ್ಲ ಮತ್ತು ಬ್ರಿಗಿಟ್ಟೆ ಅವರು ಈ ಆರೋಪಗಳನ್ನು "ಖಡಾಖಂಡಿತವಾಗಿ ನಿರಾಕರಿಸಿದ್ದಾರೆ" ಎಂದು ತಿಳಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರ ಆಪ್ತ ವಲಯ ಹಾಗೂ ಪ್ರಥಮ ಮಹಿಳೆಯ ಅಧಿಕೃತ ತಂಡವೂ ಈ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಹಿಂದೆ ಆ ತಳ್ಳಾಟದ ಘಟನೆಯನ್ನು ಕೇವಲ "ತಮಾಷೆಯ ಆಟ" (ಹಾರ್ಸ್‌ಪ್ಲೇ) ಎಂದು ಕರೆಯಲಾಗಿದೆ. ಆದರೆ, ಫ್ರಾನ್ಸ್ ಅಧ್ಯಕ್ಷರ ಅಧಿಕೃತ ಕಚೇರಿ 'ಎಲಿಸೀ ಅರಮನೆ'ಯು ಈ ಪುಸ್ತಕದ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ, ಅತ್ತ ಈ ಹಿಂದೆ ಅಧ್ಯಕ್ಷರೊಂದಿಗಿನ ಸಂಬಂಧದ ವದಂತಿಗಳನ್ನು ನಿರಾಕರಿಸಿದ್ದ ನಟಿ ಫರಾಹಾನಿ ಕೂಡ ಸದ್ಯಕ್ಕೆ ಈ ಪುಸ್ತಕದ ಆರೋಪಗಳ ಕುರಿತು ಮೌನ ವಹಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ಕಳೆದ ವರ್ಷ ಅಂದರೆ 2025ರ ಮೇ ತಿಂಗಳಿನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರಾನ್ ಆಗ್ನೇಯ ಏಷ್ಯಾ ಪ್ರವಾಸದ ಭಾಗವಾಗಿ ವಿಯೆಟ್ನಾಂಗೆ ತಲುಪಿದ್ದರು. ಆ ವೇಳೆ ವಿಮಾನದಿಂದ ಕೆಳಗಿಳಿಯುವಾಗ ಪ್ರಥಮ ಮಹಿಳೆ ಬ್ರಿಗಿಟ್ಟೆ ಅವರು ಹಠಾತ್ತನೆ ಪತಿ ಮ್ಯಾಕ್ರಾನ್ ಮುಖವನ್ನು ಕೈಯಿಂದ ತಳ್ಳುವಂತಹ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತಲ್ಲದೆ, ಫ್ರೆಂಚ್ ಅಧ್ಯಕ್ಷೀಯ ಕಚೇರಿಗೆ ದೊಡ್ಡ ಮಟ್ಟದ ಮುಜುಗರವನ್ನು ಉಂಟುಮಾಡಿತ್ತು.
ಆದರೆ, ಈ ವಿವಾದದ ಕುರಿತು ನಂತರ ಸ್ವತಃ ಸ್ಪಷ್ಟನೆ ನೀಡಿದ್ದ ಅಧ್ಯಕ್ಷ ಮ್ಯಾಕ್ರಾನ್, "ಈ ಸಣ್ಣ ಘಟನೆಯನ್ನು ಅಗತ್ಯಕ್ಕಿಂತ ಹೆಚ್ಚು ದೊಡ್ಡದು ಮಾಡಲಾಗುತ್ತಿದೆ, ನಾನು ಆ ಸಮಯದಲ್ಲಿ ನನ್ನ ಪತ್ನಿಯೊಂದಿಗೆ ಕೇವಲ ತಮಾಷೆ ಮಾಡುತ್ತಿದ್ದೆ ಅಷ್ಟೇ" ಎಂದು ವದಂತಿಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದರು. ಈ ಅಧಿಕೃತ ಸ್ಪಷ್ಟನೆಯ ಹೊರತಾಗಿಯೂ ಈ ಘಟನೆ ಜಾಗತಿಕ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ತಳ್ಳಾಟದ ವಿಷಯವನ್ನು ಪ್ರಸ್ತಾಪಿಸಿ ಹಾಸ್ಯ ಮಾಡಿದ್ದರು, (ಏಜೆನ್ಸೀಸ್).