ಮುಂದಿನ ವರ್ಷ ಅಮೆರಿಕದ ಎಲ್ಲ ಮಕ್ಕಳಿಗೂ ಸ್ಪೇಸ್ಎಕ್ಸ್ನಲ್ಲಿ ಷೇರು
ಮಕ್ಕಳಿಗೆ ಬಂಪರ್ ಷೇರಿನ ಆಫರ್ ನೀಡಿದ ಎಲಾನ್ ಮಸ್ಕ್
ಮುಕೇಶ್ ಅಂಬಾನಿಗೆ ಟಾಂಗ್ ನೀಡಿದ್ದ ಮಸ್ಕ್ರಿಂದ ಮಹತ್ವದ ಘೋಷಣೆ
ನ್ಯೂಯಾರ್ಕ್: ಕಳೆದ ಕೆಲವು ದಿನಗಳಿಂದ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ವಿಶ್ವದ ಶ್ರೀಮಂತ ಉದ್ಯಮಿ, ಟೆಸ್ಲಾ ಹಾಗೂ ಸ್ಟಾರ್ಲಿಂಕ್ ನೆಟ್ವರ್ಕ್ ಮಾಲೀಕ ಎಲಾನ್ ಮಸ್ಕ್ (Elon Musk), ಇದೀಗ ಅಮೆರಿಕದಲ್ಲಿನ ಎಲ್ಲ ಮಕ್ಕಳಿಗೂ ಸ್ಪೇಸ್‌ಎಕ್ಸ್ ಷೇರು ಕೊಡುವುದಾಗಿ ಹೇಳಿಕೆ ನೀಡಿದ್ದಾರೆ.
ಮುಂದಿನ ವರ್ಷ ತನ್ನ ಬಾಹ್ಯಾಕಾಶ ಕಂಪನಿ ಸ್ಪೇಸ್‌ಎಕ್ಸ್ ಷೇರಿನಲ್ಲಿ ಅಮೆರಿಕದ ಪ್ರತಿ ಮಗುವಿಗೆ ಇಂತಿಷ್ಟು ಷೇರು ನೀಡಲಾಗುವುದು ಎಂದು ತಮ್ಮ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಎಐ ಕಂಪನಿ ಆಂಥ್ರೊಪಿಕ್ ತನ್ನ ಕಂಪನಿಯ ಶೇ.5ರಷ್ಟು ಷೇರುಗಳನ್ನು ಸಾರ್ವಜನಿಕ ಅನುಕೂಲಕ್ಕಾಗಿ ಸ್ಥಾಪಿಸಲಿರುವ ನಿಧಿಗೆ ಹಂಚಿಕೆ ಮಾಡುವುದಾಗಿ ಘೋಷಿಸಿದೆ. ಸಂಸ್ಥೆಯು ದತ್ತಿ ಸಂಸ್ಥೆಗಳಿಗೆ ದೇಣಿಗೆ ನೀಡುವುದರ ಜತೆಗೆ ಅಗತ್ಯವಿರುವ ಗುಂಪುಗಳಿಗೆ 'ಆಂಥ್ರೊಪಿಕ್ ಪಬ್ಲಿಕ್ ಬೆನಿಫಿಟ್ ಫಂಡ್' ಮೂಲಕ ಹಣಕಾಸಿನ ನೆರವು ನೀಡಲು ಉದ್ದೇಶಿಸಿದೆ.
ಇದಲ್ಲದೆ, ಕೃತಕ ಬುದ್ಧಿಮತ್ತೆಯಿಂದಾಗಿ ಉದ್ಯೋಗ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ನಿಧಿ ಕೇಂದ್ರೀಕರಿಸುತ್ತದೆ. ಆಂಥ್ರೊಪಿಕ್ ಸಂಸ್ಥೆಯ ಈ ಘೋಷಣೆಗೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, ಕಂಪನಿಯ ಷೇರುಗಳನ್ನು ವಿಶೇಷ ನಿಧಿಗೆ ಹಂಚಿಕೆ ಮಾಡುವ ಬದಲು ನೇರವಾಗಿ ಜನರಿಗೆ ಹಸ್ತಾಂತರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಂಥ್ರೋಪಿಕ್ ಘೋಷಣೆಯ ಬೆನ್ನಲ್ಲೇ ಮಸ್ಕ್ ಹೇಳಿಕೆ ಹೊರಬಂದಿರುವುದು ಇಲ್ಲಿ ಗಮನಾರ್ಹ.
ಸ್ಪೇಸ್ ಎಕ್ಸ್ ಷೇರು ಬೆಲೆ 146.03 ಡಾಲರ್ ಎಂದು ಅಂದಾಜಿಸಲಾಗಿದೆ. ಈ ಲೆಕ್ಕಾಚಾರದ ಆಧಾರದ ಮೇಲೆ, ಪ್ರತಿ ಷೇರಿನ ಮೌಲ್ಯವು ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 12,000 ರೂ. ಆದಾಗ್ಯೂ, ಈ ಮೌಲ್ಯವನ್ನು ಪ್ರಸ್ತುತ ಮಾರುಕಟ್ಟೆ ಬೆಲೆಯಂತೆ ಸ್ವತಂತ್ರವಾಗಿ ಪರಿಶೀಲಿಸಬೇಕು. ಅಲ್ಲದೆ, ಅರ್ಹತಾ ವಯಸ್ಸು, ವಿತರಣಾ ವಿಧಾನ ಮತ್ತು ಷೇರುಗಳ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಸ್ಪಷ್ಟತೆಯು ಅಗತ್ಯವಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಸ್ಕ್ ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).