ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್
- ಕೇವಲ ಒಂದೇ ತಿಂಗಳಲ್ಲಿ ಬರೊಬ್ಬರಿ 600 ಬಿಲಿಯನ್ ಡಾಲರ್ ಆರ್ಥಿಕ ನಷ್ಟ
- ಶೇ.46ರಷ್ಟು ಕುಸಿದು 108.37 ಡಾಲರ್‌ಗೆ ತಲುಪಿರುವುದು ಮಸ್ಕ್ ಸಂಪತ್ತಿನ ಇಳಿಕೆಗೆ ಕಾರಣ
- ಎಐ, ಸ್ವಯಂಚಾಲಿತ ತಂತ್ರಜ್ಞಾನ, ರೋಬೋಟ್ಯಾಕ್ಸಿ ಮೇಲೆ ಮಸ್ಕ್ ಕಣ್ಣು
ನ್ಯೂಯಾರ್ಕ್: ಕಳೆದ ತಿಂಗಳಲ್ಲಿ ವಿಶ್ವದ ಶ್ರೀಮಂತ ಉದ್ಯಮಿ, ಟ್ರಿಲಿಯನೇರ್ ಮತ್ತು ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ನ ಒಡೆಯ ಎಲೋನ್ ಮಸ್ಕ್‌ಗೆ (Elon Musk) ಭಾರಿ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಅನಿರೀಕ್ಷಿತ ಬೆಳವಣಿಗೆಗಳ ನಡುವೆ ಮಸ್ಕ್ ನಿವ್ವಳ ಮೌಲ್ಯವು ಸುಮಾರು 600 ಬಿಲಿಯನ್ ಡಾಲರ್‌ಗಳಷ್ಟು (ಭಾರತೀಯ ಕರೆನ್ಸಿಯಲ್ಲಿ ಸುಮಾರು 57 ಲಕ್ಷ ಕೋಟಿ ರೂ.) ಕರಗಿ ಹೋಗಿದೆ. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಕಂಪನಿಗಳ ಷೇರುಗಳು ಷೇರುಪೇಟೆಯಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ್ದು, ಇದು ಭಾರಿ ನಷ್ಟಕ್ಕೆ ಪ್ರಮುಖ ಕಾರಣ ಎಂದು ವರದಿಗಳು ಉಲ್ಲೇಖಿಸಿವೆ.
'ಟ್ರಿಲಿಯನೇರ್'ಗೆ ಬಿಗ್ ಶಾಕ್
ಜೂನ್ 16ರ ಹೊತ್ತಿಗೆ, ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು ದಾಖಲೆಯ ಗರಿಷ್ಠ 1.33 ಡಾಲರ್ ಟ್ರಿಲಿಯನ್ ತಲುಪಿತ್ತು. ಆ ಸಮಯದಲ್ಲಿ, ಅವರು ಸ್ಪೇಸ್‌ಎಕ್ಸ್ ಸಂಸ್ಥೆಯ ಒಡೆಯನಾಗಿ ವಿಶ್ವದ ಅತ್ಯಂತ ಶ್ರೀಮಂತ ಮೊದಲ ಟ್ರಿಲಿಯನೇರ್ ಆಗಿ ಹೊಸ ಇತಿಹಾಸವನ್ನು ಸೃಷ್ಟಿಸಿದರು. ಆದಾಗ್ಯೂ, ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ತಿಂಗಳುಗಳು ಕಳೆದಂತೆ, ಅವರ ಒಟ್ಟು ಸಂಪತ್ತು 684 ಬಿಲಿಯನ್ ಡಾಲರ್‌ಗೆ ಕುಸಿಯಿತು. ಸಂಪತ್ತಿನ ಈ ಇಳಿಕೆಯು ಎಷ್ಟು ಪರಿಣಾಮಕಾರಿ ಆಗಿತ್ತು ಎಂದರೆ, ಮಸ್ಕ್ ಅವರ ನಷ್ಟವು ಜಾಗತಿಕವಾಗಿ ಉಳಿದ ಬಿಲಿಯನೇರ್‌ಗಳ ಒಟ್ಟು ಆಸ್ತಿಗಿಂತ ಹೆಚ್ಚಿತ್ತು ಎಂಬುದೇ ಹುಬ್ಬೇರಿಸುವ ಸಂಗತಿ.
ಸ್ಪೇಸ್‌ಎಕ್ಸ್ ಐಪಿಒ..
ಈ ಸಂಪತ್ತಿನ ಕುಸಿತಕ್ಕೆ ಪ್ರಮುಖ ಕಾರಣ ಸ್ಪೇಸ್‌ಎಕ್ಸ್ ಷೇರುಗಳ ಇಳಿಮುಖ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಇತಿಹಾಸದಲ್ಲಿಯೇ ಅತಿದೊಡ್ಡ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ 75 ಬಿಲಿಯನ್ ಡಾಲರ್ ಸಂಗ್ರಹಿಸಿರುವ ಸ್ಪೇಸ್‌ಎಕ್ಸ್, 150 ಡಾಲರ್‌ಗೆ ಪಟ್ಟಿ ಮಾಡಲಾಗಿದ್ದು, ಇದು 135 ಡಾಲರ್ ವಿತರಣೆ ಬೆಲೆಯಿಂದ ಹೆಚ್ಚಾಗಿದೆ. ಪಟ್ಟಿಯಾದ ನಂತರ, ಷೇರು ಬೆಲೆ ಕೇವಲ ಮೂರು ವಹಿವಾಟು ಅವಧಿಗಳಲ್ಲಿ ಶೇ.50ಕ್ಕಿಂತ ಹೆಚ್ಚು ಏರಿಕೆಯಾಗಿ, ಜೂನ್ 16ರಂದು 202 ಡಾಲರ್ ಗರಿಷ್ಠ ಮಟ್ಟವನ್ನು ತಲುಪಿತು. ಆದರೆ, ಬಳಿಕ ನಿರೀಕ್ಷೆಗಳು ಉಲ್ಟಾ ಹೊಡೆದವು. ಅಂದಿನಿಂದ, ಷೇರು ಬೆಲೆ ಶೇ.46ರಿಂದ 108.37 ಡಾಲರ್‌ಗೆ ಇಳಿದಿದೆ. ಪರಿಣಾಮವಾಗಿ, ಮಸ್ಕ್‌ನ ಆಸ್ತಿಗಳಲ್ಲಿ ನೂರಾರು ಶತಕೋಟಿ ಡಾಲರ್‌ಗಳು ಕರಗಿವೆ.
ಟೆಸ್ಲಾ ಲಾಭ?
ಸ್ಪೇಸ್‌ಎಕ್ಸ್‌ಗೆ ಹೊಡೆತ ಬಿದ್ದಿದ್ದರೂ, ಟೆಸ್ಲಾ ಷೇರುಗಳಲ್ಲಿನ ದೌರ್ಬಲ್ಯವು ಮಸ್ಕ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಜುಲೈ 22ರಂದು ಕಂಪನಿಯು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶಗಳನ್ನು ವರದಿ ಮಾಡಿದ ನಂತರ ಟೆಸ್ಲಾ ಷೇರುಗಳು ಶೇ.17ರಷ್ಟು ಕುಸಿದಿವೆ. ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಟೆಸ್ಲಾ ತನ್ನ ಲಾಭದ ಮಾರ್ಗದರ್ಶನವನ್ನು ತಪ್ಪಿಸಿಕೊಂಡಿದೆ. ವಾಹನ ವಿತರಣೆಯಲ್ಲಿ ಹೆಚ್ಚಳದ ಹೊರತಾಗಿಯೂ, ಸರಾಸರಿ ಮಾರಾಟ ಬೆಲೆಗಳು ಕುಸಿತ ಮತ್ತು ಹೊಸ ತಂತ್ರಜ್ಞಾನಗಳ ಮೇಲಿನ ಖರ್ಚು-ವೆಚ್ಚ ಹೆಚ್ಚಾಗುವುದರಿಂದ ಕಂಪನಿಯ ಲಾಭಕ್ಕೆ ತೀವ್ರ ಹೊಡೆತ ಬಿದ್ದಿದೆ ಎನ್ನಲಾಗಿದೆ.
ಎಐ, ರೊಬೊಟಿಕ್ಸ್ ಮೇಲಿದೆ ಮಸ್ಕ್
ಅಲ್ಪಾವಧಿಯಲ್ಲಿ ಈ ಮಟ್ಟದ ಆರ್ಥಿಕ ನಷ್ಟಗಳು ಮತ್ತು ಮಾರುಕಟ್ಟೆ ಒತ್ತಡಗಳ ಹೊರತಾಗಿಯೂ, ಮಸ್ಕ್ ತಮ್ಮ ಭವಿಷ್ಯದ ಕೆಲಸವನ್ನು ಕೈಬಿಟಿಲ್ಲ ಎನ್ನುವುದಕ್ಕೆ ಕೃತಕ ಬುದ್ಧಿಮತ್ತೆ (ಎಐ), ಸ್ವಯಂ ಚಾಲನಾ ತಂತ್ರಜ್ಞಾನ, ರೋಬೋಟ್ಯಾಕ್ಸಿಗಳು ಮತ್ತು ಹ್ಯೂಮನಾಯ್ಡ್ ರೋಬೋಟ್‌ಗಳ ಅಭಿವೃದ್ಧಿಯತ್ತ ನಿರಂತರವಾಗಿ ಹರಿಸುತ್ತಿರುವ ಗಮನ.
ಈ ಅತ್ಯಾಧುನಿಕ ಟೆಕ್ನಾಲಜಿಯನ್ನು ಸುಧಾರಿಸಲು 2026ರಲ್ಲೇ 25 ಶತಕೋಟಿ ಡಾಲರ್ಗಿಂತ ಹೆಚ್ಚು ಖರ್ಚು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದು ಕಳೆದ ವರ್ಷ ಮಾಡಿದ ಹೂಡಿಕೆಗಳಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ನಷ್ಟಗಳನ್ನು ಎದುರಿಸುತ್ತಿದ್ದರೂ, ಭವಿಷ್ಯದ ತಂತ್ರಜ್ಞಾನದಲ್ಲಿ ಮಸ್ಕ್ ಅವರ ವಿಶ್ವಾಸವು ವ್ಯಾಪಾರ ವಲಯಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ಕುತೂಹಲಕಾರಿಯಾಗಿದೆ,(ಏಜೆನ್ಸೀಸ್).