Elon Musk First Trillionaire SpaceX IPO
- ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ದಿನವೇ ಶೇ.11ರಷ್ಟು ಜಿಗಿತ ಕಂಡು ದಾಖಲೆ ಬರೆದ ಎಲಾನ್ ಮಸ್ಕ್
- ವಿಶ್ವದ ಮೊದಲ ಟ್ರಿಲಿಯನೇರ್ ಆದ ಎಲಾನ್ ಮಸ್ಕ್
- ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ 1.1 ಟ್ರಿಲಿಯನ್ ಡಾಲರ್ ತಲುಪಿದೆ
Elon Musk First Trillionaire SpaceX IPO:
ಟೆಕ್ ಲೋಕದ ದೈತ್ಯ ಹಾಗೂ ಉದ್ಯಮಿ ಎಲಾನ್ ಮಸ್ಕ್ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಟೆಸ್ಲಾ, ಸ್ಪೇಸ್ ಎಕ್ಸ್, ಎಕ್ಸ್ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದ ಕಂಪನಿಗಳ ಯಶಸ್ಸಿನ ಬೆನ್ನಲ್ಲೇ ಮೊದಲ ಟ್ರಿಲೇನಿಯರ್ ಎಂಬ ಹೆಗ್ಗಳಿಕೆಗೆ ಮಸ್ಕ್ ಪಾತ್ರರಾಗಿದ್ದಾರೆ.
ಟ್ರಿಲಿಯನ್ ಡಾಲರ್ ಎಂದರೆಷ್ಟು?
ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ 1.1 ಟ್ರಿಲಿಯನ್ ಡಾಲರ್ ತಲುಪಿದೆ ಎಂದು ವರದಿಗಳು ತಿಳಿಸಿವೆ. ಇದುವರೆಗೆ ಜಗತ್ತಿನ ಯಾವುದೇ ವ್ಯಕ್ತಿ ಟ್ರಿಲಿಯನ್ ಡಾಲರ್ ಆಸ್ತಿ ಗಡಿ ದಾಟಿರಲಿಲ್ಲ. ಇದೇ ಕಾರಣಕ್ಕೆ ಎಲಾನ್ ಮಸ್ಕ್ ಅವರ ಈ ಸಾಧನೆ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಒಂದು ಟ್ರಿಲಿಯನ್ ಅಂದರೆ ಬರೋಬ್ಬರಿ 1000 ಬಿಲಿಯನ್. ಇದು ಭಾರತೀಯ ರೂಪಾಯಿಗಳಲ್ಲಿ 93.5 ಲಕ್ಷ ಕೋಟಿ ರೂಪಾಯಿಗಳು ಆಗುತ್ತವೆ. ಈ ಮೊತ್ತವು ವಿಶ್ವದ ಬಹುತೇಕ ದೇಶಗಳ ವಾರ್ಷಿಕ ಸರ್ಕಾರದ ಬಜೆಟ್‌ಗಳಿಗಿಂತಲೂ ದೊಡ್ಡದಾಗಿದೆ ಎನ್ನಲಾಗಿದೆ.
ದಿನಕ್ಕೆ ಎಷ್ಟು ಕೋಟಿ ಖರ್ಚು ಮಾಡಿದ್ರು ಮುಗಿಯಲ್ಲ ಆಸ್ತಿ?
ಮಸ್ಕ್ ಅವರ ಈ ಟ್ರಿಲಿಯನ್ ಆಸ್ತಿ ಎಷ್ಟು ದೊಡ್ಡದಾಗಿದೆ ಎಂದರೆ ದಿನಕ್ಕೆ ಎಷ್ಟೇ ಖರ್ಚು ಮಾಡಿದರೂ ಅಕ್ಷಯ ಪಾತ್ರೆಯಂತೆ ಖಾಲಿಯೇ ಆಗೋದಿಲ್ಲ. ಖಾಲಿಯಾಗುವುದು ಅಷ್ಟು ಸುಲಭವೂ ಅಲ್ಲ.
- ಎಲಾನ್ ಮಸ್ಕ್ ಪ್ರತಿದಿನ 10 ಕೋಟಿ ರೂಪಾಯಿ ಖರ್ಚು ಮಾಡಿದರೂ ಅವರ ಸಂಪತ್ತು ಸಂಪೂರ್ಣ ಖಾಲಿಯಾಗಲು ಸುಮಾರು 2,562 ವರ್ಷಗಳು ಬೇಕಾಗುತ್ತವೆ.
- ಪ್ರತಿದಿನ 100 ಕೋಟಿ ರೂಪಾಯಿ ಖರ್ಚು ಮಾಡಿದರೂ 256 ವರ್ಷಗಳವರೆಗೆ ಹಣ ಉಳಿಯುತ್ತದೆ.
- ಅಷ್ಟೇ ಅಲ್ಲ, ಪ್ರತಿದಿನ 1,000 ಕೋಟಿ ರೂಪಾಯಿ ಖರ್ಚು ಮಾಡಿದರೂ ಸುಮಾರು 25 ವರ್ಷಗಳ ಕಾಲ ಅವರ ಸಂಪತ್ತು ಮುಗಿಯುವುದಿಲ್ಲ.
ಇನ್ನೊಂದು ಆಸಕ್ತಿಕರ ಅಂಶವೆಂದರೆ, ಪ್ರತಿ ಸೆಕೆಂಡಿಗೆ 1 ಲಕ್ಷ ರೂಪಾಯಿ ಖರ್ಚು ಮಾಡಿದರೂ ಈ ಸಂಪತ್ತು ಸಂಪೂರ್ಣ ಖಾಲಿಯಾಗಲು ಸುಮಾರು 30 ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಸ್ಕ್ ಅವರ ಆಸ್ತಿಯನ್ನು ಭಾರತದ 140 ಕೋಟಿ ಜನರಿಗೆ ಸಮಾನವಾಗಿ ಹಂಚಿದರೆ, ಪ್ರತಿಯೊಬ್ಬರಿಗೂ ಸುಮಾರು 66,800 ರೂಪಾಯಿ ಸಿಗುತ್ತದೆ ಎಂದು ಅಂದಾಜಿಸಲಾಗಿದೆ.
ಮನೆ ಖರೀದಿಯ ಉದಾಹರಣೆ
ಮನೆಗಳ ಖರೀದಿಯ ಉದಾಹರಣೆ ತೆಗೆದುಕೊಂಡರೆ, ಒಂದು ಮನೆಯ ಬೆಲೆ 10 ಕೋಟಿ ರೂಪಾಯಿ ಎಂದು ಪರಿಗಣಿಸಿದರೆ ಮಸ್ಕ್ ಸುಮಾರು 9.35 ಲಕ್ಷ ಮನೆಗಳನ್ನು ಖರೀದಿಸಬಹುದು. ಒಂದು ಪ್ರೀಮಿಯಂ ಸ್ಮಾರ್ಟ್‌ಫೋನ್ ಬೆಲೆ 3 ಲಕ್ಷ ರೂಪಾಯಿ ಎಂದುಕೊಂಡರೆ ಸುಮಾರು 31 ಕೋಟಿ ಮೊಬೈಲ್‌ಗಳನ್ನು ಖರೀದಿಸುವ ಸಾಮರ್ಥ್ಯ ಅವರಿಗಿದೆ.
20 ಕೋಟಿ ಕಾರು ಕೊಂಡರು ಖಾಲಿಯಾಗಲ್ಲ
ಅದೇ ರೀತಿ, ಒಂದು ಐಷಾರಾಮಿ ಕಾರಿನ ಬೆಲೆ 20 ಕೋಟಿ ರೂಪಾಯಿ ಎಂದು ಪರಿಗಣಿಸಿದರೆ ಸುಮಾರು 4.67 ಲಕ್ಷ ಲಕ್ಸುರಿ ಕಾರುಗಳನ್ನು ಖರೀದಿಸಬಹುದು. ಅವರ ಸಂಪೂರ್ಣ ಆಸ್ತಿಯನ್ನು 500 ರೂಪಾಯಿ ನೋಟುಗಳ ರೂಪದಲ್ಲಿ ಇಟ್ಟರೆ ಸುಮಾರು 18,700 ಕೋಟಿ ನೋಟುಗಳು ಬೇಕಾಗುತ್ತವೆ ಎನ್ನಲಾಗುತ್ತಿದೆ.
ಆದರೆ ತಜ್ಞರ ಪ್ರಕಾರ, ಎಲಾನ್ ಮಸ್ಕ್ ಅವರ ಸಂಪತ್ತು ಸಂಪೂರ್ಣ ನಗದು ರೂಪದಲ್ಲಿಲ್ಲ. ಟೆಸ್ಲಾ, ಸ್ಪೇಸ್‌ಎಕ್ಸ್ ಮತ್ತು ಇತರ ಕಂಪನಿಗಳ ಷೇರುಗಳ ಮೌಲ್ಯವೇ ಅವರ ಆಸ್ತಿಯ ಪ್ರಮುಖ ಭಾಗವಾಗಿದೆ. ಷೇರು ಮಾರುಕಟ್ಟೆಯ ಏರಿಳಿತದ ಪ್ರಕಾರ ಈ ಆಸ್ತಿ ಮೌಲ್ಯವೂ ಬದಲಾಗಬಹುದು.
ಷೇರು ಮೌಲ್ಯ ಹೆಚ್ಚಳ
‘ಸ್ಪೇಸ್‌ಎಕ್ಸ್’ ಜಾಗತಿಕ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತ್ಯಂತ ಬೃಹತ್ ಐಪಿಒ ಬಿಡುಗಡೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ, ನ್ಯೂಯಾರ್ಕ್‌ನ ನಾಸ್ಡಾಕ್ ಷೇರು ಮಾರುಕಟ್ಟೆಯಲ್ಲಿ SPCX' ಟಿಕ್ಕರ್ ಹೆಸರಿನಲ್ಲಿ ಸ್ಪೇಸ್ ಎಕ್ಸ್ ವಹಿವಾಟು ಆರಂಭಿಸಿತು. ಮೊದಲ ದಿನವೇ ಷೇರು 150 ಡಾಲರ್ಗೆ ಏರಿಕೆ ಕಂಡಿತ್ತು. ಇನ್ನು ಶುಕ್ರವಾರ ಷೇರು ಮೌಲ್ಯ 172 ಡಾಲರ್ಗೆ ಏರಿದ್ದು ಸದ್ಯ ಒಟ್ಟು ಕಂಪನಿಯ ಆಸ್ತಿ ಮೌಲ್ಯ 2.18 ಟ್ರಿಲಿಯನ್ ಡಾಲರ್ಗೆ ಏರಿದೆ ಎನ್ನಲಾಗಿದೆ.
ವಿಶ್ವದ ಟಾಪ್-10 ಶ್ರೀಮಂತರ ಇವರು!
- ಎಲಾನ್ ಮಸ್ಕ್ – 1.1 ಟ್ರಿಲಿಯನ್ ಡಾಲರ್
- ಲ್ಯಾರಿ ಪೇಜ್ – 303 ಬಿಲಿಯನ್ ಡಾಲರ್
- ಸರ್ಗೇ ಬ್ರಿನ್ – 282 ಬಿಲಿಯನ್ ಡಾಲರ್
- ಜೆಫ್ ಬೆಜೋಸ್ – 260 ಬಿಲಿಯನ್ ಡಾಲರ್
- ಲ್ಯಾರಿ ಎಲಿಸನ್ – 254 ಬಿಲಿಯನ್ ಡಾಲರ್
- ಮೈಕಲ್ ಡೆಲ್ 204 ಬಿಲಿಯನ್ ಡಾಲರ್
- ಮಾರ್ಕ್ ಜುಕರ್‌ಬರ್ಗ್ – 203 ಬಿಲಿಯನ್ ಡಾಲರ್
- ಜೆನ್ಸನ್ ಹುವಾಂಗ್ – 166 ಬಿಲಿಯನ್ ಡಾಲರ್
- ಬರ್ನಾರ್ಡ್ ಅರ್ನಾಲ್ಟ್ – 164 ಬಿಲಿಯನ್ ಡಾಲರ್
- ವಾರನ್ ಬಫೆಟ್ – 149 ಬಿಲಿಯನ್ ಡಾಲರ್
- ಅಮಾನ್ಸಿಯೊ ಒರ್ಟೆಗಾ – 148 ಬಿಲಿಯನ್ ಡಾಲರ್
- ಜಿಮ್ ವಾಲ್ಟನ್ 147 ಬಿಲಿಯನ್ ಡಾಲರ್
ಸ್ಪೇಸ್ ಎಕ್ಸ್ ಉದ್ಯೋಗಿಗಳು ಶ್ರೀಮಂತರೆ
ಟ್ರಿಲೇನಿಯರ್ ಪಟ್ಟ ಪಡೆದುಕೊಂಡ ಮಸ್ಕ್ ಮಾತ್ರ ಖ್ಯಾತಿ ಗಳಿಸಿಲ್ಲ. ಮಸ್ಕ್ ಅವರ ಕೃತಕ ಬುದ್ಧಿಮತ್ತೆ ಸಂಸ್ಥೆಯಾದ xAI ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'X' ಬೃಹತ್ ಸಮೂಹವಾಗಿ ಬೆಳದಿದೆ. ಐಪಿಒದಿಂದಾಗಿ ಮಸ್ಕ್ ಮಾತ್ರವಲ್ಲದೆ, ಕಂಪನಿಯ ಸುಮಾರು 4,400 ಕ್ಕೂ ಹೆಚ್ಚು ಉದ್ಯೋಗಿಗಳು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿದ್ದಾರೆ ಎನ್ನಲಾಗಿದೆ.
ಮಸ್ಕ್ ಹೇಳಿದ್ದೇನು
ನಾವು ಮನುಷ್ಯರನ್ನು ಚಂದ್ರ ಮತ್ತು ಮಂಗಳ ಗ್ರಹ ಹಾಗೂ ಅದರಿಂದಾಚೆಗೂ ಕರೆದೊಯ್ಯಲು ಬಯಸುತ್ತೇವೆ ಎಂದು ಟೆಕ್ಸಾಸ್‌ನ ಸ್ಟಾರ್‌ಬೇಸ್ ಪ್ರಧಾನ ಕಚೇರಿಯಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಎಲಾನ್ ಮಸ್ಕ್ ಮಾತನಾಡಿದರು, (ಏಜೆನ್ಸೀಸ್).